ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ರೈತನಿಗೆ ದೊಡ್ಡ ಸ್ಥಾನವನ್ನು ನೀಡಿದ್ದರು. ಇಂದು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಮಂಡಿಸಿದ ಹಣಕಾಸು ಬಜೆಟಿನಲ್ಲೂ ಇದೇ ಅಂಶ ಎದ್ದು ಕಂಡಿದೆ. ದೇಶದ ಬೆನ್ನೆಲುಬು ಎಂದು ಹೇಳಲಾಗುವ ರೈತನಿಗೆ ಬೆಂಬಲವಾಗಿ ನಿಲ್ಲುವ ಹಲವು ಯೋಜನೆಗಳನ್ನು, ರಿಯಾಯಿತಿಗಳನ್ನು ಕೇಂದ್ರ ಪ್ರಕಟಿಸಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ.... 2010-11ರ ಸಾಲಿನಲ್ಲಿ 6,755 ಕೋಟಿ ರೂಪಾಯಿಗಳಲ್ಲಿದ್ದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುದಾನವನ್ನು 2011-12ರ ಆರ್ಥಿಕ ವರ್ಷಕ್ಕೆ 7,860 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.
ಸಗಟು ದರ ಸೂಚ್ಯಂಕದ ಶೇ.70ರ ಪಾಲನ್ನು ಹೊಂದಿರುವ, ಬೆಲೆಯೇರಿಕೆಗೆ ಪ್ರಮುಖ ಕಾರಣವಾಗಿರುವ ಹಣ್ಣು-ತರಕಾರಿ, ಹಾಲು, ಮಾಂಸ, ಕೋಳಿ ಸಾಕಾಣೆ, ಮೀನು ಮುಂತಾದುವುಗಳ ಉತ್ಪಾದನೆ ಮತ್ತು ವಿತರಣೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಕೃಷಿ ಸಾಲ ಹೆಚ್ಚಳ... ಬಜೆಟ್‌ನಲ್ಲಿ ಕಂಡು ಬಂದಿರುವ ಮಹತ್ವದ ಅಂಶಗಳಲ್ಲಿ ಕೃಷಿ ಸಾಲದ ಪ್ರಮಾಣವನ್ನು 3,75,000 ಕೋಟಿ ರೂಪಾಯಿಗಳಿಂದ 4,75,000 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿರುವುದು ಕೂಡ ಒಂದು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಸಾಲವನ್ನು ನೇರವಾಗಿ ಕೊಡಬೇಕು ಎಂದು ಸರಕಾರ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಅಲ್ಪಾವಧಿ ಬೆಲೆ ಸಾಲ... ರೈತರಿಗೆ ನೀಡುವ ಅಲ್ಪಾವಧಿ ಕೃಷಿ ಸಾಲದ ಮೇಲಿನ ಪ್ರಸಕ್ತ ಇರುವ ಶೇ.7ರ ರಿಯಾಯಿತಿ ಬಡ್ಡಿದರ 2011-12ರ ವರ್ಷದಲ್ಲೂ ಮುಂದುವರಿಯುತ್ತದೆ.
ಸಕಾಲದಲ್ಲಿ ಮರು ಪಾವತಿ ಮಾಡುವ ರೈತರಿಗೆ ಹೆಚ್ಚುವರಿಯಾಗಿ ಶೇ.2ರ ಬಡ್ಡಿ ರಿಯಾಯಿತಿಯನ್ನು ಕಳೆದ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ, ಈಗ ಶೇ.3ರ ಬಡ್ಡಿ ರಿಯಾಯಿತಿಯನ್ನು ಸರಕಾರ ಘೋಷಿಸಿದೆ. ಅಂದರೆ, ರೈತರ ಅಲ್ಪಾವಧಿ ಸಾಲದ ಬಡ್ಡಿದರ (ಸಕಾಲದಲ್ಲಿ ಮರು ಪಾವತಿ ಮಾಡಿದರೆ) ಕೇವಲ ಶೇ.4 ಮಾತ್ರ!
ನಬಾರ್ಡ್‌ಗೆ 3,000 ಕೋಟಿ... ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೀಡುವ ಕೃಷಿ ಸಾಲದ ಪ್ರಮಾಣವನ್ನು 3,000 ಕೋಟಿ ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ನಬಾರ್ಡ್‌ನಲ್ಲಿ ಸರಕಾರದ ಬಂಡವಾಳ 5,000 ಕೋಟಿ ರೂಪಾಯಿಗಳಿಗೆ ಏರಿಕೆಯಾದಂತಾಗಿದೆ.
ಇತರ ಪ್ರಮುಖ ಅಂಶಗಳು... * ಕೃಷ್ಯುತ್ಪನ್ನಗಳ ಗೋದಾಮು ಮತ್ತು ಶೇಖರಣಾ ಘಟಕಗಳಿಗೆ ಅಗತ್ಯವಿರುವ ಪರಿಕರಗಳ ಮೇಲಿನ ಸುಂಕ ವಿನಾಯಿತಿ ಹೆಚ್ಚಳ. * ನಿರ್ದಿಷ್ಟ ಕೃಷಿ ಯಂತ್ರೋಪಕರಣಗಳ ಮೇಲಿನ ಮೂಲ ಸೀಮಾ ಸುಂಕ ಶೇ.5ರಿಂದ ಶೇ.2.5ಕ್ಕೆ ಇಳಿಕೆ. * ಕಿರು ನೀರಾವರಿ ಪರಿಕರಗಳ ಮೇಲಿನ ತೆರಿಗೆ ಶೇ.7.5ರಿಂದ ಶೇ.5ಕ್ಕೆ ಇಳಿಕೆ. * ಅಕ್ಕಿ ಹಿಂಡಿಗೆ ಸಂಪೂರ್ಣ ತೆರಿಗೆ ರಿಯಾಯಿತಿ. ಇದರ ರಫ್ತು ತೆರಿಗೆಯನ್ನು ರಫ್ತಿನ ಮೇಲೆಯೇ ಹೇರಲಾಗುತ್ತದೆ. * ಪೋಷಕಾಂಶ ಆಧರಿತ ಸಹಾಯಧನದಿಂದ (ಎನ್‌ಬಿಎಸ್) ರಸಗೊಬ್ಬರದ ಲಭ್ಯತೆ ಸುಧಾರಣೆಯಾಗಿರುವುದರಿಂದ ಯೂರಿಯಾದ ಮೇಲೂ ಎನ್‌ಬಿಎಸ್ ವಿಸ್ತರಣೆ. * ಬಿಪಿಎಲ್ ವರ್ಗಕ್ಕೆ ಸೀಮೆಎಣ್ಣೆ, ಗ್ಯಾಸ್ ಮತ್ತು ರಸಗೊಬ್ಬರಗಳ ವಿತರಣೆಯನ್ನು ಅತ್ಯುತ್ತಮಗೊಳಿಸುವ ನಿಟ್ಟಿನಲ್ಲಿ ಸರಕಾರವು ನೇರವಾಗಿ ನಗದು ರಿಯಾಯಿತಿ ತಲುಪಿಸಲಿದೆ. * ಪ್ರಸಕ್ತ 15 ಮೆಗಾ ಫುಡ್ ಪಾರ್ಕ್‌ಗಳು ಅಸ್ತಿತ್ವದಲ್ಲಿವೆ. 2011-12ರ ಸಾಲಿನಲ್ಲಿ ಮತ್ತೆ 15 ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ಅನುಮತಿ ನೀಡಲಾಗುತ್ತದೆ. ಇದರಿಂದ ತರಕಾರಿ ಮತ್ತು ಹಣ್ಣುಗಳು ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ ಎಂದ ಮುಖರ್ಜಿ. * ಕೃಷಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ನೀತಿ ಮುಂದುವರಿಕೆ.