ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಎಫೆಕ್ಟ್: ವೃದ್ಧ ಕರುಣಾನಿಧಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ? (2G Scam | DMK | Karunanidhi | Tamilnadu Election | Tanajvur | Tiruvarur)
2ಜಿ ಎಫೆಕ್ಟ್: ವೃದ್ಧ ಕರುಣಾನಿಧಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ?
ಚೆನ್ನೈ, ಗುರುವಾರ, 3 ಮಾರ್ಚ್ 2011( 09:12 IST )
ರಾಜಕೀಯ ನಿವೃತ್ತಿಯ ಕುರಿತಾದ ಸುಳಿವುಗಳನ್ನೆಲ್ಲಾ ತಳ್ಳಿ ಹಾಕಿರುವ 86ರ ಹರೆಯದ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಈ ಬಾರಿ ಗ್ರಾಮೀಣ ಪ್ರದೇಶದಿಂದ, ಅಂದರೆ ತಮ್ಮ ಹುಟ್ಟೂರಿನಿಂದಲೇ ವಿಧಾನಸಭಾ ಚುನಾವಣೆಗೆ ಪ್ರವೇಶಿಸುವ ಸಾಧ್ಯತೆಗಳಿವೆ.
ಈ ಮೂಲಕ, 4 ದಶಕಗಳಿಂದಲೂ ಇದ್ದ ಸಂಪ್ರದಾಯವೊಂದನ್ನು ಅವರು ಮುರಿಯಲು ಸಜ್ಜಾಗಿದ್ದಾರೆ. ಅದೆಂದರೆ, ಮುಖ್ಯಮಂತ್ರಿಯು ಚೆನ್ನೈಯಿಂದಲೇ ಯಾವುದಾದರೂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ದೇಶದಲ್ಲೇ ಕೋಲಾಹಲವೆಬ್ಬಿಸಿದ, ಡಿಎಂಕೆ ನಾಯಕ ಎ.ರಾಜಾ ಅವರನ್ನೊಳಗೊಂಡ 2ಜಿ ಸ್ಪೆಕ್ಟ್ರಂ ಹಗರಣವು ನಗರದ ಸುಶಿಕ್ಷಿತ ಜನರಲ್ಲಿ ಜಾಗೃತಿ ಮೂಡಿಸಿದ್ದು, ಚುನಾವಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳ ಆತಂಕದಲ್ಲಿಯೇ ಪಕ್ಷದ ಕಾರ್ಯಕರ್ತರು ಈ ಕುರಿತು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕಾರಣದಿಂದ ಕರುಣಾನಿಧಿ ಅವರು ತಂಜಾವೂರಿನ ತಿರುವರೂರ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಕರುಣಾನಿಧಿ ಹೆಸರಿನಲ್ಲಿ ನಾಮಪತ್ರ ಸಲ್ಲಿಸದ ಹೊರತಾಗಿ, ಬೇರೆ ಯಾರೂ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸದಂತೆ ಡಿಎಂತೆ ತಿರುವರೂರ್ ಜಿಲ್ಲಾಧ್ಯಕ್ಷ ಪೂಂಡಿ ಕೆ.ಕಲೈವಣ್ಣನ್ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಮೊದಲು ಮೀಸಲು ಕ್ಷೇತ್ರವಾಗಿದ್ದ ತಿರುವರೂರ್, ಕ್ಷೇತ್ರ ಮರುವಿಂಗಡಣೆಯ ಬಳಿಕ ಸಾಮಾನ್ಯ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ.
ತಿರುವರೂರಿನಿಂದ ಸ್ಪರ್ಧಿಸುವಂತೆ ಕಲೈಞಾರ್ ಅವರನ್ನು ಕೋರಿ ಸೆಪ್ಟೆಂಬರ್ 2009ರಲ್ಲಿಯೇ ಡಿಎಂಕೆ ಜಿಲ್ಲಾ ಘಟಕವು ನಿರ್ಣಯವೊಂದನ್ನು ಕೈಗೊಂಡಿತ್ತು. ಇದುವರೆಗೆ ತಿರುವರೂರಿನಿಂದ 23 ಒಕ್ಕೂಟಗಳು ಕರುಣಾನಿಧಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿವೆ ಎಂದಿದ್ದಾರೆ ಕಲೈವಣ್ಣನ್.
ಕರುಣಾನಿಧಿ ಮೊತ್ತ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು 1957ರಲ್ಲಿ ತಿರುಚ್ಚಿ ಜಿಲ್ಲೆಯ ಕುಳಿತ್ತಲೈ ಕ್ಷೇತ್ರದಿಂದ. 1961ರಲ್ಲಿ ಡಿಎಂಕೆ ಖಜಾಂಚಿಯಾಗಿ ಆಯ್ಕೆಯಾದ ಅವರು, 1962ರಲ್ಲಿ ವಿಧಾನಸಭೆಯ ಉಪನಾಯಕರಾಗಿ ಆಯ್ಕೆಯಾಗಿದ್ದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೇರಿದಾಗ ಅವರು ಲೋಕೋಪಯೋಗಿ ಸಚಿವರಾದರು. 1969ರಲ್ಲಿ ಅಣ್ಣಾದುರೈ ನಿಧನರಾದಾಗ, ಕರುಣಾನಿಧಿ ಅವರು ಮುಖ್ಯಮಂತ್ರಿ ಪಟ್ಟವೇರಿದರು. ಸುದೀರ್ಘವಾದ ತಮಿಳುನಾಡು ರಾಜಕೀಯ ಜೀವನದಲ್ಲಿ ಕರುಣಾನಿಧಿ ಸರಕಾರ ಮತ್ತು ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಎಐಎಡಿಎಂಕೆ ಬದ್ಧ ಪ್ರತಿಸ್ಪರ್ಧಿ ಜೆ.ಜಯಲಲಿತಾ ಅವರ ಪಕ್ಷವನ್ನು ಸೋಲಿಸಿದ ಡಿಎಂಕೆ ಮಿತ್ರಕೂಟವು 2006ರ ಮೇ 13ಕ್ಕೆ ತಮಿಳುನಾಡಿನಲ್ಲಿ ಅಧಿಕಾರಕ್ಕೇರಿತ್ತು. ಇದುವರೆಗೆ 11 ಬಾರಿ ತಮಿಳು ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು, ಒಂದು ಬಾರಿ ವಿಧಾನ ಪರಿಷತ್‌ಗೂ ಆಯ್ಕೆಯಾಗಿದ್ದರು. ಈಗ ವಿಧಾನ ಪರಿಷತ್ ಅನ್ನು ರದ್ದುಗೊಳಿಸಲಾಗಿದೆ.
1957ರಲ್ಲಿ ಕುಳಿತ್ತಲೈಯಲ್ಲಿ ಯಶಸ್ವಿ ಸ್ಪರ್ಧೆ ನಡೆಸಿದ ಬಳಿಕ ಅವರು 1962ರಲ್ಲಿ ಸಮೀಪದ ತಂಜಾವೂರು ಕ್ಷೇತ್ರದಿಂದ ಆಯ್ಕೆ ಬಯಸಿದರು. 1967ರಿಂದ ಚೆನ್ನೈಯ ಸೈದಾಪೇಟ್ ಕ್ಷೇತ್ರದಿಂದ ಸ್ಪರ್ಧಿಸಿದ ಬಳಿಕ ಚೆನ್ನೈಯಿಂದಲೇ ಕಣಕ್ಕಿಳಿಯುತ್ತಿದ್ದರು. ಬಳಿಕ ಅಣ್ಣಾ ನಗರ, ಹಾರ್ಬರ್ ಮತ್ತು ಚೆಪಾಕ್ ಕ್ಷೇತ್ರಗಳಲ್ಲಿ ಗೆಲುವಿನ ಸವಿಯುಂಡರು.