ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಥಾಮಸ್ 'ರಾಜೀನಾಮೆ': ಮೊಯ್ಲಿ ಹೇಳಿಕೆಗೆ ಬಿಜೆಪಿ ಕಿಡಿ (PJ Thomas | CVC | Supreme Court | BJP | UPA | Veerappa Moily)
PTI
ವಿವಾದಾತ್ಮಕ ಅಧಿಕಾರಿ ಪಿ.ಜೆ.ಥಾಮಸ್ ಅವರು ಸಿವಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ತಕ್ಷಣ ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅವರ ವಿರುದ್ಧ ಕಿಡಿ ಕಾರಿರುವ ಬಿಜೆಪಿ, ಸಿವಿಸಿ ನೇಮಕ ಪ್ರಕ್ರಿಯೆಯನ್ನೇ ಸುಪ್ರೀಂ ಕೋರ್ಟು ರದ್ದು ಮಾಡಿರುವುದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದೆ.

"ಗೌರವಾನ್ವಿತ ಕಾನೂನು ಸಚಿವರು ಏನು ಹೇಳುತ್ತಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಸಿವಿಸಿ ಪಿ.ಜೆ.ಥಾಮಸ್ ಅವರಿಂದ ರಾಜೀನಾಮೆ ಪಡೆಯುವುದು ಹೇಗೆ ಸಾಧ್ಯ? ಯಾಕೆಂದರೆ ಸುಪ್ರೀಂ ಕೋರ್ಟು ತೀರ್ಪು ಪ್ರಕಾರ ಅವರು ಸಿವಿಸಿಗೆ ನೇಮಕವೇ ಆಗಿಲ್ಲ (ನೇಮಕವೇ ಅಕ್ರಮ ಎಂದು ಹೇಳಿ ಅದನ್ನು ಸುಪ್ರೀಂ ಕೋರ್ಟು ರದ್ದುಪಡಿಸಿತ್ತು) ಈ ಬಗ್ಗೆ ನೋಟಿಸ್ ನೀಡುವ ಅಗತ್ಯವೂ ಇಲ್ಲ. ಥಾಮಸ್ ಅವರು ಸಿವಿಸಿ ಕಚೇರಿಗೇ ಕಾಲಿಡುವಂತಿಲ್ಲ" ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಹೇಳಿದರು.

ಥಾಮಸ್ ಅವರು ಸಿವಿಸಿಯಾಗಿ ನೇಮಕವಾಗಿರುವುದನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕಾನೂನು ಸಚಿವಾಲಯವು ಶುಕ್ರವಾರ ಹೇಳಿತ್ತು.

ಇದೀಗ ಅವಸರದ ಸ್ಪಷ್ಟನೆ ನೀಡಿರುವ ಮೊಯ್ಲಿ, "ಈಗಾಗಲೇ ಥಾಮಸ್ ನೇಮಕವನ್ನು ಸುಪ್ರೀಂ ಕೋರ್ಟು ರದ್ದು ಮಾಡಿರುವುದರಿಂದ ಸಿವಿಸಿ ರಾಜೀನಾಮೆ ನೀಡುವ ಅಗತ್ಯವಿಲ್ಲ. ಮತ್ತು ಅವರು ಮುಂದುವರಿಯುವ ಪ್ರಶ್ನೆಯೂ ಇಲ್ಲ. ಹೊಸ ನೇಮಕಾತಿಗಾಗಿ "ಸಿವಿಸಿ ಹುದ್ದೆ ಖಾಲಿ ಇದೆ" ಎಂಬ ಒಕ್ಕಣೆಯೊಂದಿಗೇ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ" ಎಂದಿದ್ದಾರೆ.

ಆದರೆ, ಪಿ.ಜೆ.ಥಾಮಸ್ ಅವರು ಸಿವಿಸಿ ಹುದ್ದೆ ತೊರೆಯುವ ಸಾಧ್ಯತೆಗಳು ದೂರವಾಗಿವೆ. ಯಾಕೆಂದರೆ, ಅವರ ವಕೀಲ ವಿಲ್ಸ್ ಮ್ಯಾಥ್ಯೂಸ್ ಅವರು ಹೇಳಿಕೆ ನೀಡಿದ್ದು, ಥಾಮಸ್ ಅವರು ರಾಜೀನಾಮೆ ನೀಡುವುದಿಲ್ಲ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಇವನ್ನೂ ಓದಿ