ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೊಸ ಬ್ಲ್ಯಾಕ್‌ಮೇಲ್: ಯುಪಿಎಯಿಂದ ಡಿಎಂಕೆ 'ಹೊರಗೆ' (DMK | UPA | Congress | Seat Sharing in Tamilnadu | Karunanidhi)
ಅಧಿಕಾರಕ್ಕಾಗಿ ಕೇಂದ್ರವನ್ನೇ ಬ್ಲ್ಯಾಕ್‌ಮೇಲ್ ಮಾಡುವ ತಮಿಳು ರಾಜಕೀಯ ಪಕ್ಷಗಳ ಆಟಾಟೋಪದ ಸರಣಿಗೆ ಹೊಸ ಸೇರ್ಪಡೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷವು ಹೆಚ್ಚು ಸೀಟುಗಳನ್ನು ಕೇಳಿತು ಎಂಬ ಕಾರಣಕ್ಕೆ ಆಕ್ರೋಶಗೊಂಡಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೇಂದ್ರದ ಯುಪಿಎ ಸರಕಾರದಿಂದ ಹೊರಬರಲು ನಿರ್ಧರಿಸಿದೆ.

ಆದರೆ ಕೇಂದ್ರ ಸರಕಾರಕ್ಕೆ ವಿಷಯಾಧಾರಿತವಾಗಿ ಹೊರಗಿನಿಂದ ಬೆಂಬಲ ನೀಡುವುದಾಗಿಯೂ ಎರಡನೇ ಅತಿದೊಡ್ಡ ಮಿತ್ರಪಕ್ಷವಾಗಿರುವ ಡಿಎಂಕೆ ಪ್ರಕಟಿಸಿದೆ. ಕೇಂದ್ರದಲ್ಲಿ 3 ಕ್ಯಾಬಿನೆಟ್ ಹುದ್ದೆ ಸೇರಿದಂತೆ ಒಟ್ಟು ಆರು ಮಂದಿ ಸರಕಾರದಲ್ಲಿದ್ದಾರೆ.

ಯುಪಿಎ ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ತಮಿಳುನಾಡು ಸೀಟು ಹಂಚಿಕೆ ಕುರಿತು ಕೆಲವು ದಿನಗಳಿಂದ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಆದರೆ, 234 ಸ್ಥಾನಗಳಲ್ಲಿ ತಾವು 60 ಸ್ಥಾನಗಳನ್ನು ನೀಡಿದರೂ, ತಮಗೆ 63 ಸೀಟುಗಳಾದರೂ ಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿರುವುದರಿಂದ, ಯುಪಿಎಯಲ್ಲಿ ಡಿಎಂಕೆ ಮುಂದುವರಿಯುವುದು ಕಾಂಗ್ರೆಸಿಗೆ ಇಷ್ಟವಿಲ್ಲವೆಂಬುದನ್ನು ತೋರಿಸುತ್ತದೆ ಎಂದಿದೆ ಡಿಎಂಕೆ. ಕಳೆದ ಬಾರಿ 48 ಸೀಟಿನಲ್ಲಿ ಸ್ಪರ್ಧಿಸಿತ್ತು ಕಾಂಗ್ರೆಸ್.

ಈ ಕುರಿತು ಶನಿವಾರ ಸಂಜೆ ಡಿಎಂಕೆಯ ತುರ್ತು ಸಭೆ ನಡೆದಿದ್ದು, ಸಭೆಯಲ್ಲಿ ಯುಪಿಎ ಸರಕಾರದಿಂದ ಹೊರಬರುವ ನಿರ್ಧಾರ ಕೈಗೊಳ್ಳಲಾಯಿತು.

234ರಲ್ಲಿ ಡಿಎಂಕೆ ಈಗಾಗಲೇ ಪಿಎಂಕೆಗೆ 31, ವಿಸಿಕೆ 10, ಕೊಂಗುನಾಡು ಮುನ್ನೇತ್ರ ಕಳಗಂಗೆ 7, ಮುಸ್ಲಿಂ ಲೀಗ್‌ಗೆ 3 ಮತ್ತು ಇನ್ನೊಂದನ್ನು ಬೇರೆ ಪುಟ್ಟ ಪಕ್ಷಕ್ಕೆ ನೀಡಿತ್ತು. 63 ಕಾಂಗ್ರೆಸಿಗೆ ಕೊಟ್ಟರೆ 2006ಕ್ಕಿಂತಲೂ ಕಡಿಮೆ ಸ್ಥಾನ ಡಿಎಂಕೆ ಕೈಯಲ್ಲಿ ಉಳಿಯುತ್ತದೆ. 2006ರಲ್ಲಿ ಡಿಎಂಕೆ 132, ಕಾಂಗ್ರೆಸ್ 48, ಪಿಎಂಕೆ 31ರಲ್ಲಿ ಹಾಗೂ ಅಂದು ಎಡಪಕ್ಷಗಳು ಜೊತೆಗಿದ್ದು, ಅವುಗಳು 23ರಲ್ಲಿ ಸ್ಪರ್ಧಿಸಿದ್ದವು. ಈಗ ಎಡಪಕ್ಷಗಳು ಎಐಎಡಿಎಂಕೆ ಜೊತೆ ಸೇರಿಕೊಂಡಿರುವುದರಿಂದ, ಈ ಸ್ಥಾನಗಳನ್ನು ಹೊಸ ಮಿತ್ರರೊಂದಿಗೆ ಡಿಎಂಕೆ ಹಂಚಿಕೊಳ್ಳಬೇಕಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಈ ರೀತಿಯ ಹಠವು ನಮ್ಮನ್ನು ಯುಪಿಎಯಿಂದ ಹೊರಹಾಕಲು ಕಾಂಗ್ರೆಸ್ ಹೂಡಿರುವ ಸಂಚು ಎಂದೇ ಭಾವಿಸಬೇಕಾಗುತ್ತದೆ. ಕಾಂಗ್ರೆಸ್ ಪಟ್ಟು ಹಿಡಿದಿರುವುದು ತಮಗೆ ಅಚ್ಚರಿ ತಂದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರದಲ್ಲಿ ಟೆಲಿಕಾಂ ಸಚಿವರಾಗಿದ್ದ ಎ.ರಾಜಾ 2ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ಡಿಎಂಕೆಯು ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿದ್ದು, ಈ ಹಗರಣದ ಕಳಂಕವನ್ನು ತೊಳೆದುಕೊಳ್ಳಲು ಮತ್ತು ತಾವೀಗ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ ಎಂದು ಮತದಾರರೆದುರು ತೋರ್ಪಡಿಸಿಕೊಳ್ಳಲು ಡಿಎಂಕೆಯ ವರಸೆಯಿದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದೆಡೆ ಬದ್ಧ ಪ್ರತಿಸ್ಪರ್ಧಿಯಾಗಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆಯು ರಾಜಕೀಯ ಕ್ಷೇತ್ರದಲ್ಲಿ ಪ್ರಭಾವವಿರುವ ವಿಜಯ್ ಕಾಂತ್ ಅವರ ಡಿಎಂಡಿಕೆ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಕೂಡ ಡಿಎಂಕೆಯ ಆತಂಕ ಹೆಚ್ಚಳಕ್ಕೆ ಕಾರಣವಾಗಿತ್ತು.

ಈ ಹಿಂದೆ, 2ಜಿ ಪ್ರಕರಣದಲ್ಲಿ ರಾಜಾ ಅವರ ರಾಜೀನಾಮೆ ನೀಡಬೇಕಿದ್ದರೆ, ಡಿಎಂಕೆ ಪಕ್ಷ ಸರಕಾರದಿಂದ ಹೊರಬರುತ್ತದೆ ಎಂದು ಹೆದರಿಸಿದ ಸಂದರ್ಭ, ಸರಕಾರ ಬೀಳದಂತೆ ತಾನು ರಕ್ಷಿಸುವುದಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ಹೇಳಿಕೆ ನೀಡಿದ್ದರು. ಮರುದಿನವೇ ಡಿಎಂಕೆ ಸುಮ್ಮನಾಗಿತ್ತು.

ಇದಕ್ಕೂ ಮೊದಲು, ಸಚಿವ ಪಟ್ಟದ ವಿತರಣೆ ಸಂದರ್ಭವೂ ಡಿಎಂಕೆ ಈ ರೀತಿ ಬ್ಲ್ಯಾಕ್‌ಮೇಲ್ ಮಾಡಿ, ಸರಕಾರದಲ್ಲಿ ಪಾಲ್ಗೊಳ್ಳುವುದಿಲ್ಲ, ಹೊರಗಿನಿಂದ ಮಾತ್ರ ಬೆಂಬಲ ನೀಡುತ್ತೇನೆ ಎಂದಿತ್ತು.

ಲೋಕಸಭೆಯ ಸಂಖ್ಯಾ ಬಲ:
ಲೋಕಸಭೆಯಲ್ಲಿರುವ 543 ಸದಸ್ಯರಲ್ಲಿ ಯುಪಿಎಗೆ ಬಹುಮತದಲ್ಲಿರಲು 273 ಮತಗಳು ಬೇಕಿವೆ. ಡಿಎಂಕೆಯಲ್ಲಿ 18 ಮಂದಿ ಇದ್ದಾರೆ.

ಕಾಂಗ್ರೆಸ್‌ನ 207 ಮಂದಿ ಹಾಗೂ ಇತರ 68 ಮಂದಿ ಬಲದೊಂದಿಗೆ ಕಾಂಗ್ರೆಸ್ ಪಕ್ಷವು ಮೈತ್ರಿಕೂಟದ ನೇತೃತ್ವ ವಹಿಸಿ ಅಧಿಕಾರ ಚಲಾಯಿಸುತ್ತಿತ್ತು. 22 ಮಂದಿ ಸಮಾಜವಾದಿ ಪಕ್ಷ ಸದಸ್ಯರು, 23 ಮಂದಿ ಬಿಎಸ್ಪಿ ಸದಸ್ಯರು ಕೇಂದ್ರದಲ್ಲಿ ಇನ್ನೂ ಇದ್ದಾರೆ.

ಚುನಾವಣೆಗಳ ಸಂದರ್ಭ ನಾನ್ಯಾರೋ ನೀನ್ಯಾರೋ ಎನ್ನುತ್ತಾ ಸ್ಪರ್ಧಿಸಿ, ಕೊನೆಗೆ ಅಧಿಕಾರ ಸಿಗುವಾಗ ಮತ್ತೆ ಒಂದಾಗುವುದು ತಮಿಳುನಾಡಿನ ರಾಜಕೀಯದಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂಬುದು ಕೂಡ ಅಷ್ಟೇ ಸತ್ಯ.
ಇವನ್ನೂ ಓದಿ