ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜೀವಚ್ಛವವಾದ ಕರ್ನಾಟಕದ ಅರುಣಾಗೆ ದಯಾಮರಣ ಇಲ್ಲ (Euthanasia | Supreme Court | Pinki Virani | Mercy Killing | Aruna Shanbaug)
ಅತ್ಯಾಚಾರಕ್ಕೀಡಾಗಿ, ಮೆದುಳಿನ ಸಮಸ್ಯೆಯಿಂದ ಕಳೆದ 37 ವರ್ಷಗಳಿಂದ ಜೀವಚ್ಛವವಾಗಿ ಬದುಕುತ್ತಿರುವ ಕರ್ನಾಟಕ ಮೂಲದ ಅರುಣಾ ಶಾನುಭಾಗ್ ದಯಾಮರಣ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟು ತಿರಸ್ಕರಿಸಿದ್ದು, ಇಂಜೆಕ್ಷನ್ ಮೂಲಕ ದಯಾಮರಣ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಮತ್ತು ಅತ್ಯಂತ ಗಂಭೀರಾವಸ್ಥೆಯಲ್ಲಿರುವ ರೋಗಿಗಳ ಪ್ರಕರಣಕ್ಕೆ ಸಂಬಂಧಿಸಿ ದಯಾಮರಣಕ್ಕಾಗಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಮುಂದಿಟ್ಟಿದೆ.
ಸದ್ಯಕ್ಕೆ ಮುಂಬೈಯ ಕೆಇಎಂ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ಬಿದ್ದುಕೊಂಡಿರುವ ಅರುಣಾಗೆ ದಯಾ ಮರಣಕ್ಕೆ ಅನುಮತಿ ನೀಡಬೇಕು (ಆತ್ಮಹತ್ಯೆಯು ಅಪರಾಧವಾಗಿರುವುದರಿಂದ ಸಾಯಲು ಅನುಮತಿ ನೀಡಬೇಕು) ಎಂದು ಆಕೆಯ ಪರವಾಗಿ ಗೆಳತಿ, ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ಪಿಂಕಿ ವೀರಾನಿ ಅರ್ಜಿ ಸಲ್ಲಿಸಿದ್ದರು. ಈಗ 64 ವರ್ಷ ವಯಸ್ಸಿನ ಅರುಣಾ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದವರಾಗಿದ್ದು, 37 ವರ್ಷದಿಂದ ಕೋಮಾ ಸ್ಥಿತಿಯಲ್ಲಿದ್ದಾರೆ.
ಅರುಣಾ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ಸಂಗ್ರಹಿಸಲೆಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮಾರ್ಕಾಂಡೇಯ ಕಾಟ್ಜು ಮತ್ತು ಜ್ಞಾನಸುಧಾ ಮಿಶ್ರಾ ಅವರು ಡಾ.ಜೆ.ವಿ.ದಿವಾತಿಯಾ, ಡಾ.ರೂಪ ಗುರ್ಷಾನಿ ಮತ್ತು ಡಾ.ನೀಲೇಶ್ ಶಾ ಅವರ ತಂಡವೊಂದನ್ನು ನಿಯಮಿಸಿದ್ದರು. ಇದೀಗ ನ್ಯಾಯಾಲಯವು, ಸಾಧಕ ಬಾಧಕಗಳನ್ನೆಲ್ಲಾ ಪರಿಶೀಲಿಸಿದ ಸುಪ್ರೀಂ ಕೋರ್ಟು, ದಯಾಮರಣಕ್ಕೆ ಅವಕಾಶವೇ ಇಲ್ಲ ಎಂದಿದೆ.
ನರ್ಸ್ ಆಗಿದ್ದ ಅರುಣಾ ಶಾನ್‌ಭಾಗ್ ಮೇಲೆ ಮುಂಬೈಯ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ವಾರ್ಡ್‌ಬಾಯ್ ಆಗಿದ್ದ ಸೋಹನ್‌ಲಾಲ್ ಭಾರ್ತಾ ವಾಲ್ಮೀಕಿ ಎಂಬಾತ 1973ರ ನವೆಂಬರ್ 27ರಂದು ಬರ್ಬರವಾಗಿ ಅತ್ಯಾಚಾರ ಎಸಗಿದ್ದ. ಆಕೆ ತನ್ನ ಶಿಫ್ಟ್‌ಗೆ ತೆರಳಲು ಕೊಠಡಿಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಆತ ಈ ಕೃತ್ಯ ಎಸಗಿದ್ದ. ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆರೋಪಿಯು, ನಾಯಿಗೆ ಹಾಕುವ ಸರಪಳಿಯಿಂದ ಆಕೆಯನ್ನು ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ್ದ. ನಾಯಿಯ ಸರಪಳಿಯನ್ನು ಬಲವಾಗಿ ಬಿಗಿದ ಹಿನ್ನೆಲೆಯಲ್ಲಿ ಆಕೆಯ ಮೆದುಳಿಗೆ ಆಮ್ಲಜನಕ ಪೂರೈಕೆಯೇ ತಪ್ಪಿ ಹೋಗಿತ್ತು. ಇದರಿಂದ ಮೆದುಳು ನಿಷ್ಕ್ರಿಯಗೊಂಡಿತ್ತು ಮತ್ತು ಆಕೆಯ ದೃಷ್ಟಿಯೂ ಹೋಗಿತ್ತು.
ಆರೋಪಿ ಸೋಹನ್‌ಲಾಲ್ ವಿರುದ್ಧ ಅತ್ಯಾಚಾರ ಕೇಸು ದಾಖಲಾಗಲೇ ಇಲ್ಲ. ಬದಲಾಗಿ, ಕೊಲೆಯತ್ನ, ದರೋಡೆ ಕೇಸು ದಾಖಲಾಗಿ, ಆತ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಸೋಹನ್‌ಲಾಲ್ ಇತ್ತೀಚೆಗಷ್ಟೇ ಏಡ್ಸ್‌ಗೆ ತುತ್ತಾಗಿ ಸಾವನ್ನಪ್ಪಿದ್ದ.
ಇದೀಗ ಕಳೆದ 37 ವರ್ಷಗಳಿಂದ ಏನೂ ಮಾಡಲಾಗದೆ, ಪ್ರಪಂಚದ ಪರಿಜ್ಞಾನವೇ ಇಲ್ಲದೆ ಜೀವಂತ ಶವದಂತೆ ಬದುಕುತ್ತಿರುವ ಅರುಣಾಳಿಗೆ ದಯಾಮರಣ ಒದಗಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಪಿಂಕಿ ವೀರಾನಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರುಣಾಳ ಪ್ರಿಯಕರನೂ ಆಕೆಯಿಂದ ದೂರವಾಗಿ ಬೇರೆ ಮದುವೆಯಾಗಿದ್ದಲ್ಲದೆ, ಹೆತ್ತವರೂ ಆಕೆಯಿಂದ ದೂರವಾಗಿದ್ದರು.
ಅತ್ಯಾಚಾರ ಎಸಗಿದವರಿಗೆ ಮರಣದಂಡನೆಯೇ ಸೂಕ್ತ ಎಂದು ಸುಪ್ರೀಂ ಕೋರ್ಟು ಕೂಡ ಇತ್ತೀಚೆಗೆ ತನ್ನ ಅಭಿಪ್ರಾಯವನ್ನು ಹೊರಗೆಡಹಿತ್ತು ಎಂಬುದು ಇಲ್ಲಿ ಸ್ಮರಣಾರ್ಹ.