ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಸನ್ ಅಲಿ ಭಯೋತ್ಪಾದನಾ ಕಾಯ್ದೆ ಇಲ್ಲವೇಕೆ?: ಸು.ಕೋರ್ಟ್ (Black Money | Hasan Ali Khan | CBI | POTA | Supreme Court | Tax Ivasion)
ಹಸನ್ ಅಲಿ ಭಯೋತ್ಪಾದನಾ ಕಾಯ್ದೆ ಇಲ್ಲವೇಕೆ?: ಸು.ಕೋರ್ಟ್
ನವದೆಹಲಿ, ಮಂಗಳವಾರ, 8 ಮಾರ್ಚ್ 2011( 13:37 IST )
PTI
ಕಪ್ಪು ಹಣದ ಕುರಿತಾಗಿ ಮಂಗಳವಾರ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ಹರಿಹಾಯ್ದಿರುವ ಸುಪ್ರೀಂ ಕೋರ್ಟು, ಕುಖ್ಯಾತ ತೆರಿಗೆ ವಂಚಕ, ವಿದೇಶದ ಶಸ್ತ್ರಾಸ್ತ್ರ ಡೀಲರ್‌ಗಳೊಂದಿಗೆ, ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿರುವವರೊಂದಿಗೆ ಸಂಪರ್ಕವಿರುವ ಹಸನ್ ಅಲಿ ಮೇಲೆ ಅತ್ಯಂತ ಕಠಿಣವಾದ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಕೇಸು ದಾಖಲಿಸಿಕೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿದೆ.
50 ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಹಸನ್ ಅಲಿ ಖಾನೆ ಮೇಲೆ ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆ - ಫೆಮಾ, ಕಪ್ಪು ಹಣ ಬಿಳುಪು ಮಾಡುವ ಕುರಿತಾದ ಕಾಯ್ದೆ ಮತ್ತು ಭಯೋತ್ಪಾದನಾ ನಿಗ್ರಹ ಕಾಯ್ದೆ - ಪೋಟಾವನ್ನೇಕೆ ಪ್ರಯೋಗಿಸುತ್ತಿಲ್ಲ ಎಂದು ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದೆ.
ಅನುಷ್ಠಾನ ನಿರ್ದೇಶನಾಲಯವು ಸಂಗ್ರಹಿಸಿದ ಮಾಹಿತಿಯ ಅನ್ವಯ, ಸಶಸ್ತ್ರ ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆಯ ಆತಂಕದ ವಿಷಯವೂ ಇಲ್ಲಿ ಎದ್ದುಕಾಣುತ್ತಿದೆ. ಹೀಗಾಗಿ ಪೋಟಾವನ್ನೇಕೆ ಜಾರಿಗೊಳಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟು ಕೇಳಿದೆ.
ಇದಲ್ಲದೆ ಅಲಿ ವಿರುದ್ಧ ಇರುವ ಪಾಸ್‌ಪೋರ್ಟ್ ಪ್ರಕರಣದ ಕುರಿತು ಸಿಬಿಐ ತನಿಖೆಯೇಕೆ ನಡೆಸುತ್ತಿಲ್ಲ ಎಂದು ಕೂಡ ಇಬ್ಬರು ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಹಾಗೂ ಎಸ್.ಎಸ್.ನಿಜ್ಜರ್ ಅವರನ್ನೊಳಗೊಂಡ ನ್ಯಾಯಪೀಠವು ಯುಪಿಎಯನ್ನು ಕೇಳಿತು.
ಈ ಮಧ್ಯೆ, ಅನುಷ್ಠಾನ ನಿರ್ದೇಶನಾಲಯದ ವಶದಲ್ಲಿರುವ ಹಸನ್ ಅಲಿ, ತಾನು ಮುಗ್ಧ, ತನ್ನ ಮೇಲೆ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎನ್ನುತ್ತಿದ್ದು, ಇದೀಗ ಎದೆನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸೋಮವಾರ ಸಂಜೆ ಆರು ಗಂಟೆ ವಿಚಾರಣೆ ನಡೆಸಿದ ಬಳಿಕ ಅಲಿಯನ್ನು ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆ ಬಳಿಕ ಆತ ಬಿಪಿ, ಎದೆನೋವು ಎಂದೆಲ್ಲಾ ಹೇಳಿದ್ದರಿಂದ ಇಂದು ಮೂರು ಬಾರಿ ಜೆಜೆ ಆಸ್ಪತ್ರೆಗೆ ಒಯ್ದು ತಪಾಸಣೆಗೆ ಒಳಪಡಿಸಲಾಯಿತು.
ಇದೀಗ ಅನುಷ್ಠಾನ ನಿರ್ದೇಶನಾಲಯದ ನಿರ್ದೇಶಕ ಅರುಣ್ ಮಾಥುರ್ ಅವರೇ ಈ ಕೇಸಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಅಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಆತನನ್ನು ತಮ್ಮ ವಶಕ್ಕೊಪ್ಪಿಸುವಂತೆ ಕೇಳಲಿದ್ದಾರೆ ಎಂದು ಸರಕಾರದ ಪರ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಹ್ಮಣ್ಯಂ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಮುಂದಿನ ವಿಚಾರಣೆಯನ್ನು ಮಾರ್ಚ್ 18ಕ್ಕೆ ನಿಗದಿಪಡಿಸಲಾಗಿದೆ.