ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಣಿದ ಡಿಎಂಕೆ: ಸರ್ಕಾರ ಬಿದ್ರೂ ಜಗ್ಗಲ್ಲ ಎಂದಿತ್ತು ಕಾಂಗ್ರೆಸ್
(DMK | Congress | Tamil Nadu Elections 2011 | Sonia Gandhi | Karunanidhi | UPA)
ಮಣಿದ ಡಿಎಂಕೆ: ಸರ್ಕಾರ ಬಿದ್ರೂ ಜಗ್ಗಲ್ಲ ಎಂದಿತ್ತು ಕಾಂಗ್ರೆಸ್
ನವದೆಹಲಿ, ಗುರುವಾರ, 10 ಮಾರ್ಚ್ 2011( 11:44 IST )
ಕೇಂದ್ರ ಸರಕಾರವನ್ನೇ ಬ್ಲ್ಯಾಕ್‌ಮೇಲ್ ಮಾಡಿ, ಯುಪಿಎಯಿಂದ ಹೊರಬರುತ್ತೇವೆ ಎಂದೆಲ್ಲಾ ಢಾಣಾಡಂಗುರ ಸಾರಿದ್ದ ಡಿಎಂಕೆ, ಕೊನೆಗೂ ಮೆತ್ತಗಾಗಿ ತಮಿಳುನಾಡಿನಲ್ಲಿ 63 ಸೀಟುಗಳನ್ನು (ಕಳೆದ ಬಾರಿಗಿಂತ 15 ಸೀಟು ಹೆಚ್ಚು) ಕಾಂಗ್ರೆಸ್‌ಗೆ ಸ್ಪರ್ಧಿಸಲು ಬಿಟ್ಟುಕೊಟ್ಟಿರುವುದರ ಹಿಂದಿನ ರಹಸ್ಯವೇನು? ಏನೂ ಇಲ್ಲ, ನಿಮ್ಮ ಗೊಡ್ಡು ಬೆದರಿಕೆಗೆ ನಾವು ಮಣಿಯುವುದಿಲ್ಲ, ಸರಕಾರ ಬಿದ್ದರೂ ಪರವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿ ನಿಂತದ್ದೇ ಡಿಎಂಕೆಯು ಟಾಪ್ ಗೇರ್‌ನಿಂದ ನ್ಯೂಟ್ರಲ್‌ಗೆ ಬರಲು ಕಾರಣ ಎನ್ನುತ್ತವೆ ಮೂಲಗಳು.
ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರ "ಸರಕಾರದಿಂದ ಹೊರಬರುವ" ಘೋಷಣೆಗೆ ಜಗ್ಗದೆ, ಸರಕಾರ ಬಿದ್ದರೂ ಪರವಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮನ್ನು ಭೇಟಿಯಾದ ಡಿಎಂಕೆ ಸಚಿವರಾದ ಎಂ.ಕೆ.ಅಳಗಿರಿ ಮತ್ತು ದಯಾನಿಧಿ ಮಾರನ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದಿವೆ ಮೂಲಗಳು.
ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಮೈತ್ರಿಯೊಂದಿಗೆ ಚುನಾವಣಾ ಕಣಕ್ಕಿಳಿದದ್ದು ಕೇವಲ 48 ಕ್ಷೇತ್ರಗಳಲ್ಲಿ. ಈ ಬಾರಿ ಅದು ತನ್ನ ಪಾಲನ್ನು 63ಕ್ಕೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಶನಿವಾರ ರಾತ್ರಿ ಕರುಣಾನಿಧಿ, "ಕಾಂಗ್ರೆಸ್ ಪಕ್ಷವು ಯುಪಿಎಯಿಂದ ತಮ್ಮನ್ನು ಹೊರಹಾಕುವುದನ್ನೇ ಕಾಯುತ್ತಿದೆ" ಎಂಬ ಹೇಳಿಕೆ ನೀಡಿದ್ದೇ ಕಾಂಗ್ರೆಸ್ ಕೆರಳಿ ಕೆಂಡವಾಗಲು ಕಾರಣವಾಗಿತ್ತು. ಈ ಒತ್ತಡ ತಂತ್ರವೇ ಇದೀಗ ಡಿಎಂಕೆಗೆ ಬೂಮರಾಂಗ್ ಆಯಿತು ಎನ್ನಲಾಗುತ್ತಿದೆ. ಇದು ಸೀಟಿನ ಪ್ರಶ್ನೆಯಲ್ಲ, ಇದು ನಮ್ಮ ಪ್ರತಿಷ್ಠೆಯ ಪ್ರಶ್ನೆಯೂ ಅಲ್ಲ, ಇದು ಭಾರತ ರಾಷ್ಟ್ರೀಯ ಕಾಂಗ್ರೆಸಿನ ಪ್ರತಿಷ್ಠೆಗೆ ಹಾನಿ ತಂದಿತ್ತು ಎಂದು ಕರುಣಾನಿಧಿಯ ದೂತರಿಗೆ ಸೋನಿಯಾ ಗಾಂಧಿ ಸ್ಪಷ್ಟವಾಗಿ ಹೇಳಿದರೆಂದು ಗೊತ್ತಾಗಿದೆ.
ಕಾಂಗ್ರೆಸ್ 63 ಬೇಕೆಂದು ಹಠ ಹಿಡಿದಿದ್ದರೆ, ತಾನು 60 ಮಾತ್ರ ಕೊಡಬಲ್ಲೆ, ಉಳಿದ ಪಾಲುದಾರ ಪಕ್ಷಗಳಿಗೂ ಸ್ಥಾನ ಬಿಟ್ಟುಕೊಡಬೇಕಲ್ಲ ಎಂಬುದು ಡಿಎಂಕೆ ವಾದವಾಗಿತ್ತು. ಇದೀಗ ಡಿಎಂಕೆ ಬುಟ್ಟಿಯಿಂದ 1 ಹಾಗೂ ಮಿತ್ರ ಪಕ್ಷಗಳಾದ ಪಿಎಂಕೆ ಮತ್ತು ಮುಸ್ಲಿಂ ಲೀಗ್‌ನಿಂದ ತಲಾ ಒಂದೊಂದು ಸೀಟು ಕಸಿದುಕೊಂಡು, ಕಾಂಗ್ರೆಸ್‌ಗೆ ಬಿಟ್ಟುಬಿಡಲು ಒಪ್ಪಂದವೇರ್ಪಟ್ಟಿದೆ.
ಅತ್ತ ಕಡೆಯಿಂದ ಬದ್ಧ ಪ್ರತಿಸ್ಪರ್ಧಿ ಜಯಲಲಿತಾ ಅವರ ಎಐಎಡಿಎಂಕೆ ಮತ್ತು ವಿಜಯಕಾಂತ್ ಜತೆಗೆ ಒಪ್ಪಂದವೇರ್ಪಟ್ಟಿದ್ದು ಕೂಡ ಡಿಎಂಕೆಗೆ ಆತಂಕದ ಕ್ಷಣಗಳಿಗೆ ಕಾರಣವಾಗಿತ್ತು. ಅಲ್ಲದೆ, ಕಾಂಗ್ರೆಸ್ ಇಲ್ಲದ ಡಿಎಂಕೆ ದುರ್ಬಲ ಎಂಬುದು ಇತರ ಮಿತ್ರ ಪಕ್ಷಗಳಾದ ಪಿಎಂಕೆ ಮತ್ತು ವಿಸಿಕೆಗಳ ಅಭಿಪ್ರಾಯವಾಗಿತ್ತು.