ಐಪಿಎಲ್‌ನ ಚಿಯರ್ ಗರ್ಲ್ಸ್ ಸೇರಿದಂತೆ ಭಾರತೀಯ ಸಂಸ್ಕೃತಿ ರಕ್ಷಣೆಯ ಮಾತುಗಳನ್ನು ಅವಕಾಶ ಸಿಕ್ಕಿದಾಗಲೆಲ್ಲ ಆಡುತ್ತಾ ಬಂದಿರುವ ಶಿವಸೇನೆ ವರಿಷ್ಠ ಬಾಳ್ ಠಾಕ್ರೆ ತೀವ್ರ ಮುಖಭಂಗಕ್ಕೀಡಾಗಿದ್ದು, ಅವರ ಮೊಮ್ಮಗ ನಿಹಾರ್ ಠಾಕ್ರೆ ಮಾಲೀಕತ್ವದ ಬಾರೊಂದರಿಂದ ಒಂಬತ್ತು ಹುಡುಗಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಬೈ ಉಪ ನಗರಿ ಸಂತಾಕ್ರೂಜ್‌ನಲ್ಲಿನ ನಿಹಾರ್ ಬಾರಿಗೆ ಮಧ್ಯರಾತ್ರಿ ಹೊತ್ತಿಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಬಾರ್ ಹುಡುಗಿಯರು ಅಶ್ಲೀಲ ರೀತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ಅರ್ಜುನ್ ಶೆಟ್ಟಿ ಎಂಬ ಮೂವರನ್ನು ಬಂಧಿಸಲಾಗಿದೆ. ಒಂಬತ್ತು ಬಾರ್ ಬಾಲೆಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
'ಸಂಗೀತ್ ಬಾರ್'ಗೆ ರಾತ್ರಿ 12.30ಕ್ಕೆ ದಾಳಿ ಮಾಡಲಾಗಿತ್ತು. ಮೂವರು ಸಿಬ್ಬಂದಿಗಳನ್ನು ನಾವು ಬಂಧಿಸಿದ್ದೇವೆ. ನಿಹಾರ್ ಠಾಕ್ರೆ, ಅನು ಶೆಟ್ಟಿ, ಜೈರಾಜ್ ಶುಕ್ಲಾ ಮತ್ತು ಜಗನ್ನಾಥ್ ಮಿಶ್ರಾ ಎಂಬವರು ಪರಾರಿಯಾಗಿದ್ದಾರೆ. ನಿಯಮಗಳ ಪ್ರಕಾರ ಬಾರ್ ಬಾಲೆಯರು ರಾತ್ರಿ ಒಂಬತ್ತರವರೆಗೆ ಮಾತ್ರ ಗ್ರಾಹಕರಿಗೆ ಸೇವೆ ಒದಗಿಸಬಹುದು. ಆದರೆ ನಾವು ದಾಳಿ ಮಾಡುತ್ತಿದ್ದಾಗ ಹುಡುಗಿಯರು ಬಾರಿನಲ್ಲೇ ಇದ್ದರು ಮತ್ತು ಆಕ್ಷೇಪಕಾರಿ ವರ್ತನೆ ತೋರಿಸುತ್ತಿದ್ದರು ಎಂದು ಸಂತಾಕ್ರೂಜ್ ಪೊಲೀಸ್ ಠಾಣೆಯ ಎಸ್ಐ ಮಧುಕರ್ ಚೌಧರಿ ತಿಳಿಸಿದ್ದಾರೆ.
ಬಾಳ್ ಠಾಕ್ರೆ ಹಿರಿಯ ಪುತ್ರ ಬಿಂದು ಮಾಧವ್ ಅವರ ಮಗ ನಿಹಾರ್ ಠಾಕ್ರೆ. ಮಾಧವ್ ಅವರು 1996ರಲ್ಲಿ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಪ್ರಸಕ್ತ ಈ ಸಂಗೀತ ಬಾರಿನ ಮಾಲೀಕ ನಿಹಾರ್. ಬಾರಿನಲ್ಲಿ ಹುಡುಗಿಯರು ಸಿಕ್ಕಿರುವ ಪ್ರಸಂಗ ಶಿವಸೇನೆಗೆ ಆಗಿರುವ ಮಹತ್ವದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ಮುಂಬೈಯಲ್ಲಿನ ಬಹುತೇಕ ಲೇಡಿಸ್ ಬಾರುಗಳು ತೋರಿಕೆಗೆ ಮಾತ್ರ ಇರುತ್ತವೆ. ಅಲ್ಲಿ ನಡೆಯುವುದು ನಿಷೇಧಿತ ಅಶ್ಲೀಲ ನೃತ್ಯ ಮತ್ತು ವೇಶ್ಯಾವಾಟಿಕೆ. ಈ ಬಾರುಗಳಲ್ಲಿನ ಅನೈತಿಕ ಚಟುವಟಿಕೆಗಳ ವಿರುದ್ಧ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿರುವುದರಿಂದ ಘಟಾನುಘಟಿಗಳ ಮಾಲೀಕತ್ವದ ಬಾರುಗಳ ಹಿಂದಿನ ವ್ಯವಹಾರಗಳು ಬಯಲಾಗುತ್ತಿವೆ.
'ಸಂಗೀತ್ ಬಾರ್ ಎಂಡ್ ರೆಸ್ಟಾರೆಂಟ್' ಮೇಲೆ ಇದೇ ಮೊದಲ ಬಾರಿ ದಾಳಿ ನಡೆದಿರುವುದಲ್ಲ. ಈ ಹಿಂದೆ 2007ರ ಮಾರ್ಚ್ ತಿಂಗಳಲ್ಲಿ ದಾಳಿ ನಡೆಸಿ 17 ಬಾರ್ ಬಾಲೆಯರನ್ನು ಬಂದಿಸಲಾಗಿತ್ತು. ಬಾಂಬೆ ಪೊಲೀಸ್ ಕಾಯ್ದೆಯ ಹಲವು ನಿಯಮಗಳ ಅಡಿಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿತ್ತು.