ಗಡೀಪಾರುಗೊಂಡಿರುವ ಟಿಬೆಟ್ ಸರಕಾರದ ರಾಜಕೀಯ ಮುಖಂಡನ ಸ್ಥಾನದಿಂದ ತಾನು ಕೆಳಗಿಳಿಯುತ್ತಿರುವುದಾಗಿ ದಲೈ ಲಾಮಾ ಗುರುವಾರ ಪ್ರಕಟಿಸಿದ್ದಾರೆ. ಆದರೆ ಟಿಬೆಟ್‌ಗಾಗಿನ ಹೋರಾಟದಿಂದ ತಾನು ಹಿಂದಕ್ಕೆ ಸರಿಯುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಟಿಬೆಟ್ ರಾಷ್ಟ್ರೀಯ ದಂಗೆಯ ದಿನದ 52ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಲೈ ಲಾಮಾ, ಚುನಾಯಿತ ನಾಯಕನ ಔಪಚಾರಿಕ ಅಧಿಕಾರದಿಂದ ತಾನು ಹಿಂದಕ್ಕೆ ಸರಿಯುವ ಸಂಬಂಧ ಟಿಬೆಟ್ ಸನ್ನದಿಗೆ ತಿದ್ದುಪಡಿ ತರಲು ಮಾರ್ಚ್ 14ರಂದು ಆರಂಭವಾಗಲಿರುವ ಗಡೀಪಾರುಗೊಂಡಿರುವ 14ನೇ ಟಿಬೆಟ್ ಸಂಸತ್ತಿನ 11ನೇ ಅಧಿವೇಶನದ ಸಂದರ್ಭದಲ್ಲಿ ಔಪಚಾರಿಕ ಪ್ರಸ್ತಾವನೆ ಮಾಡಲಿರುವುದಾಗಿ ಹೇಳಿದರು.
ಟಿಬೆಟ್ ಜನರಿಂದ ಮುಕ್ತವಾಯಗಿ ಚುನಾಯಿಸಲ್ಪಡುವ ಒಬ್ಬ ನಾಯಕನ ಅಗತ್ಯ ಟಿಬೆಟಿಯನ್ನರಿಗೆ ಇದೆ. ಆ ವ್ಯಕ್ತಿಗೆ ತಾನು ಅಧಿಕಾರ ಹಸ್ತಾಂತರಿಸುವುದಾಗಿ 1960ರಿಂದಲೇ ದಲೈ ಲಾಮಾ ಆಗಾಗ ಹೇಳಿಕೊಂಡು ಬಂದಿದ್ದರು.
ಇದನ್ನು ಉಲ್ಲೇಖಿಸಿರುವ ಅವರು, ಈಗ ನಾವು ಸ್ಪಷ್ಟವಾಗಿ ಆ ಕಾಲಘಟ್ಟಕ್ಕೆ ತಲುಪಿದ್ದೇವೆ. ರಾಜಕೀಯ ನಾಯಕತ್ವದಲ್ಲಿ ಮುಂದುವರಿಯಬೇಕು ಎಂದು ಟಿಬೆಟ್ ಮತ್ತು ಇತರರ ಬೆಂಬಿಡದ ಮನವಿಗಳಿಗೆ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ನಾನು ಅಧಿಕಾರವನ್ನು ತ್ಯಜಿಸುವುದೆಂದರೆ ಅದರ ಅರ್ಥ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಎಂದಲ್ಲ ಎಂದು ಹೇಳಿದ್ದೇನೆ. ನನಗೆ ಯಾವುದೇ ರೀತಿಯಲ್ಲಿ ನೋವಾಗಿ ನಾನು ಈ ನಿರ್ಧಾರಕ್ಕೆ ಬಂದಿಲ್ಲ. ಇದರಿಂದ ಟಿಬೆಟ್ ಜನರಿಗೆ ಹಿತವಾಗಲಿದೆ ಎಂದರು.
ಚೀನಾ ಸೇನೆಯು ಟಿಬೆಟ್‌ಗೆ ದಾಳಿ ಮಾಡಿದ ನಂತರ 1950ರಲ್ಲಿ ದಲೈ ಲಾಮಾ ಅವರನ್ನು 'ರಾಷ್ಟ್ರ ನಾಯಕ' ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಆಗ ಅವರ ವಯಸ್ಸು ಕೇವಲ 15. ಚೀನಾ ಆಡಳಿತದ ವಿರುದ್ಧದ ಅವರ ಬಂಡಾಯ ವಿಫಲವಾದ ನಂತರ 1959ರಲ್ಲಿ ಟಿಬೆಟ್‌ನಿಂದ ಪರಾರಿಯಾಗಿದ್ದರು.
ಟಿಬೆಟಿಯನ್ನರು ನನ್ನ ಮೇಲೆ ಅಪಾರ ನಂಬಿಕೆ ಮತ್ತು ವಿಶ್ವಾಸ ಇಟ್ಟಿದ್ದಾರೆ. ಅವರ ಮತ್ತು ಟಿಬೆಟ್ ಹಿತಕ್ಕಾಗಿನ ನನ್ನ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾನು ಹೋರಾಟದಿಂದ ಹಿಂದಕ್ಕೆ ಸರಿಯುತ್ತಿಲ್ಲ. ನನ್ನ ನಿಲುವನ್ನು ಅರ್ಥ ಮಾಡಿಕೊಂಡು ನನ್ನ ನಿರ್ಧಾರವನ್ನು ಬೆಂಬಲಿಸುವ ನಂಬಿಕೆ ನನ್ನಲ್ಲಿದೆ ಎಂದು ತನ್ನ ನಿಲುವನ್ನು ದಲೈ ಲಾಮ ಸ್ಪಷ್ಟವಾಗಿಯೇ ತಿಳಿಸಿದ್ದಾರೆ.