ಮುಂದಿನ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಸಿದ್ಧಾಂತವನ್ನು ಉಸಿರಾಡುತ್ತಿರುವವರನ್ನೇ ಉನ್ನತ ಸ್ಥಾನಗಳಲ್ಲಿ ನೋಡಲು ಬಯಸಿರುವ ರಾಹುಲ್ ಗಾಂಧಿ, ಈ ನಿಟ್ಟಿನಲ್ಲಿ ಕಠಿಣ ನೀತಿಗಳನ್ನು ಪಕ್ಷದ ವೇದಿಕೆಯಲ್ಲಿ ಜಾರಿಗೆ ತರಲು ಯತ್ನಿಸುತ್ತಿದ್ದಾರೆ. ಅದರಲ್ಲಿ ಮಹತ್ವವಾದುದು, ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಯುವ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಿರಬೇಕು ಎನ್ನುವುದು.
ಹೌದು, ಕಾಂಗ್ರೆಸ್ ಮೂಲಕ ಶಾಸಕ ಅಥವಾ ಸಂಸದರಾಗಬೇಕೆಂದಿರುವವರು ಈ ನೀತಿಗೆ ಒಳಪಡಲಿದ್ದಾರೆ. ಆದರೆ ಇದು ಅನ್ವಯವಾಗುವುದು 35ರ ಹರೆಯದ ಒಳಗಿನವರಿಗೆ ಮಾತ್ರ. 35ಕ್ಕಿಂತ ಮೇಲ್ಪಟ್ಟವರಿಗೆ ಯುವ ಕಾಂಗ್ರೆಸ್ ಅನುಭವ ಲೆಕ್ಕಕ್ಕೆ ಬರುವುದಿಲ್ಲ.
ಇದನ್ನು ಜಾರಿಗೆ ತರಲು ಹೊರಟಿರುವುದು ಮಹಾರಾಷ್ಟ್ರದಲ್ಲಿ. ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಗಳಲ್ಲಿ ಈ ಪ್ರಯೋಗಕ್ಕೆ ಚಾಲನೆ ನೀಡಲಾಗುತ್ತದೆ. ಯುವ ಕಾಂಗ್ರೆಸ್ ಸದಸ್ಯರಾಗಿರದ ಮತ್ತು ಅದರ ಚುನಾವಣೆಗಳಲ್ಲಿ ಸ್ಪರ್ಧಿಸದ 35ರ ಹರೆಯದೊಳಗಿನ ಯಾವುದೇ ಅಭ್ಯರ್ಥಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಟಿಕೆಟ್ ನೀಡಲಾಗುತ್ತಿಲ್ಲ.
ಈ ಬಗ್ಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ ರಾವ್ ಠಾಕ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಸ್ಥಳೀಯ ಚುನಾವಣೆಗಳಲ್ಲಿ ಜಾರಿಗೆ ತರಲಾಗುವ ಈ ನೀತಿಗಳು ಮುಂದಿನ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಗಳಿಗೂ ಅನ್ವಯವಾಗಲಿವೆ ಎಂದಿದ್ದಾರೆ.
'ಹೌದು, 35ರೊಳಗಿನ ಅಭ್ಯರ್ಥಿಗಳಿಗೆ ಇದು ಅನ್ವಯವಾಗುತ್ತದೆ. ಮುಂದಿನ 10-15 ವರ್ಷಗಳ ಅವಧಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವವರಲ್ಲಿ ಹೆಚ್ಚಿನವರು ಯುವ ಕಾಂಗ್ರೆಸ್‌ನಿಂದ ಬಂದಿರುವವರು ಆಗಿರುತ್ತಾರೆ. ಇದು ರಾಹುಲ್ ಗಾಂಧಿಯವರ ಯೋಚನೆ ಮತ್ತು ದೃಷ್ಟಿಕೋನ. ಅದು ಯಶಸ್ವಿಯಾಗಲಿದೆ' ಎಂದು ರಾಹುಲ್ ಗಾಂಧಿ ಜತೆ ಕೆಲಸ ಮಾಡಿರುವ ಯುವ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಹೀಗೆ ಮಾಡಿದಲ್ಲಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಶಾಸಕರು ಮತ್ತು ಸಂಸದರು ಯುವ ಕಾಂಗ್ರೆಸ್‌ನಿಂದಲೇ ಬಂದವರಾಗಿರುತ್ತಾರೆ. ಆಗ ರಾಜಕೀಯ ಅನನುಭವದ ಪ್ರಶ್ನೆ ಇರುವುದಿಲ್ಲ. ಪ್ರತಿಯೊಬ್ಬರೂ ತಳಮಟ್ಟದ ರಾಜಕೀಯವನ್ನು ತಿಳಿದುಕೊಂಡವರಾಗಿರುತ್ತಾರೆ. ಈಗಾಗಲೇ ಹಲವು ಸಂವಾದ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿರುವಂತೆ, ಯುವ ಜನತೆಗೆ ರಾಜಕೀಯದಲ್ಲಿ ಅವಕಾಶ ನೀಡುವ ಕುರಿತು ರಾಹುಲ್ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.