ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರನನ್ನು ಜೈಲಿಗಟ್ಟಿದ ಮಾಯಾ ಪೊಲೀಸರು; ಮದುವೆ ರದ್ದು! (Uttar Pradesh | wedding | police | Mayawati)
ಪೊಲೀಸರಿಂದ ನಡೆಯುವ ಆವಾಂತರಗಳೇನು ಚಿಕ್ಕದಲ್ಲ. ಪ್ರತಿದಿನ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುವ ಮಂದಿಯಲ್ಲಿ ಪೊಲೀಸರದ್ದೇ ಮೊದಲ ಸ್ಥಾನ. ಈಗ ಸುದ್ದಿಗೆ ಕಾರಣವಾಗಿರುವುದು ಪ್ರತಿಭಟನಾಕಾರರೆಂದು ಭಾವಿಸಿ ಮದುಮಗ ಮತ್ತು ಆತನ ಮನೆಯವರನ್ನು ಜೈಲಿಗೆ ಹಾಕಿ ಮದುವೆಯನ್ನು ರದ್ದು ಮಾಡಿರುವುದು!

ಘಟನೆ ನಡೆದಿರುವುದು ಮಾಯಾವತಿ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ. ಇಲ್ಲಿನ ಬಹುಜನ ಸಮಾಜ ಪಕ್ಷದ ಸರಕಾರದ ವಿರುದ್ಧ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಮೂರು ದಿನಗಳ ಪ್ರತಿಭಟನೆಗೆ ಕರೆ ನೀಡಿತ್ತು. ಅದರಂತೆ ಭಾರೀ ಪ್ರತಿಭಟನೆಗಳು ಎಲ್ಲೆಡೆ ಆರಂಭವಾಗಿದ್ದವು. ಪ್ರತಿಭಟನೆಯನ್ನು ಹತ್ತಿಕ್ಕಲು 'ಮಾಯಾ' ಪೊಲೀಸರೂ ಸರ್ವಸನ್ನದ್ಧರಾಗಿದ್ದರು.

ಆದರೆ ಭಾನುವಾರದ ದಿನ ಇಟಾದಲ್ಲಿನ ರವಿಕುಮಾರ್ ಮತ್ತು ಅವರ ಕುಟುಂಬಿಕರಿಗೆ ಇದು ಶನಿಯಾಗಿ ಕಾಡಿತು. ಯಾವುದೇ ತಪ್ಪು ಮಾಡದೆ, ಪ್ರತಿಭಟನೆಯನ್ನೂ ಮಾಡದೆ ಸುಖಾಸುಮ್ಮನೆ ಜೈಲು ಸೇರಬೇಕಾಯಿತು, ಮದುವೆಯನ್ನು ರದ್ದು ಮಾಡಬೇಕಾಯಿತು.

ಮಾಣಿಕ್‌ಪುರ್ ಸಮೀಪದ ತಮ್ಮ ಮನೆಯಿಂದ ರವಿ ಕುಮಾರ್ ತನ್ನ ಮನೆಯವರೊಂದಿಗೆ ಮದುವೆ ನಡೆಯಲಿರುವ ಪಕ್ಕದ ಊರಿಗೆ ಹೊರಟಿದ್ದರು. ಸುಮಾರು 25 ಮಂದಿ ಸಂಬಂಧಿಕರು ಜತೆಗಿದ್ದರು. ಎರಡು ವಾಹನಗಳಲ್ಲಿ ಸಾಗುತ್ತಿದ್ದ ಮದುವೆ ದಿಬ್ಬಣವನ್ನು ತಡೆದ ಪೊಲೀಸರು, ಯಾರ ಮಾತನ್ನೂ ಕೇಳದೆ ನೇರವಾಗಿ ಜೈಲಿಗೆ ತಳ್ಳಿದರು.

ನೀವು ಸಮಾಜವಾದಿ ಪಕ್ಷದ ಪರವಾಗಿ ಪ್ರತಿಭಟನೆ ನಡೆಸಲು ಮಾರುವೇಷದಲ್ಲಿ ಹೊರಟಿದ್ದೀರಿ ಎಂದು ಪೊಲೀಸರು 'ಪತ್ತೆ' ಹಚ್ಚಿದ್ದರು. ಮದು ಮಗ ಮತ್ತು ಆತನ ಕಡೆಯವರು ಮಾಡಿದ ಯಾವುದೇ ಮನವಿಗಳನ್ನು ಕೇಳುವ ಸ್ಥಿತಿ ಪೊಲೀಸರದ್ದಾಗಿರಲಿಲ್ಲ. ಪಕ್ಕದ ಊರಿನಲ್ಲಿ ವಧು ಮತ್ತು ಆಕೆಯ ಸಂಬಂಧಿಕರು ಕಾಯುತ್ತಿದ್ದಾರೆ ಎಂಬುದೂ ಅವರ ಕಿವಿಗಳಿಗೆ ಕೇಳಲಿಲ್ಲ.

ಜತೆಗಿದ್ದ ಮದ್ದಲೆ ತಂಡ ಕೂಡ ಪೊಲೀಸರ ಮನವೊಲಿಸಲು ಯತ್ನಿಸಿತ್ತು. ಸಂಗೀತ ವಾದ್ಯಗಳನ್ನು ನುಡಿಸಿ, ತಾವು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವವರು ಅಲ್ಲ, ಮದುವೆಯ ತಂಡದವರು ಎಂದು ಹೇಳಿದರೂ ಕೇಳಲಿಲ್ಲ. ಇಷ್ಟೆಲ್ಲ ನಡೆಯುವ ಹೊತ್ತಿಗೆ ಕಾದು ಕಾದು ಸುಸ್ತಾಗಿದ್ದ ವಧುವಿನ ಕಡೆಯವರು ಕೂಡ ಹುಡುಕಾಟ ಆರಂಭಿಸಿದ್ದರು.

ಕೊನೆಗೂ ಪೊಲೀಸರಿಂದ ವರನ ಕಡೆಯವರು ಬಿಡುಗಡೆ ಹೊಂದಿದರಾದರೂ, ಮುಹೂರ್ತ ಮೀರಿ ಹೋಗಿತ್ತು. ಮದುವೆ ರದ್ದು ಮಾಡಿದ ಅಪವಾದವನ್ನು ಪೊಲೀಸರೇ ಹೊತ್ತುಕೊಂಡರು!
ಇವನ್ನೂ ಓದಿ