ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆಯ ಮುಖವಾಣಿ 'ಸಾಮ್ನಾ', ಮರಾಠಿಗರ ಮೇಲೆ ಕನ್ನಡ ಭಾಷಿಗರು ಅತ್ಯಾಚಾರ ಎಸಗುತ್ತಿದ್ದಾರೆ; ದೌರ್ಜನ್ಯ ನಡೆಸಿ ಹಬ್ಬ ಮಾಡಲಾಗುತ್ತಿದೆ. ಕನ್ನಡಿಗರು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ ಎಂದು ವರದಿ ಮಾಡಿದೆ.
ಇಂದಿನ (ಮಾರ್ಚ್ 11) 'ಸಾಮ್ನಾ' ಮರಾಠಿ ಆವೃತ್ತಿಯ ಮುಖಪುಟದಲ್ಲಿ, 'ಬೆಳಗಾವಾತ್ ಮರಾಠಿ ಭಾಷಕಾಂವರ ಕಾನಡಿ ಅತ್ಯಾಚಾರಾಚಾ ವರವಂಟಾ' (ಬೆಳಗಾವಿ ಮರಾಠಿ ಭಾಷಿಗರ ಮೇಲೆ ಕನ್ನಡಿಗರಿಂದ ಅತ್ಯಾಚಾರ, ದೌರ್ಜನ್ಯ) ಎಂಬ ಶೀರ್ಷಿಕೆಯಡಿಯಲ್ಲಿ ಈ ಸುದ್ದಿ ಪ್ರಕಟವಾಗಿದೆ.
PR
ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಮರಾಠಿ ಭಾಷಿಗರ ಅಂಗಡಿ ಮತ್ತು ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ. ಧ್ವಂಸಗೊಂಡ ಜಾಗದ ಮೇಲೆ ಕನ್ನಡಿಗರು ಹಬ್ಬ ಮಾಡುತ್ತಿದ್ದಾರೆ. ಕನ್ನಡಿಗರು ಗೂಂಡಾ ವರ್ತನೆ ತೋರಿಸುತ್ತಿದ್ದಾರೆ. ಮರಾಠಿಗರ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಲಾಗುತ್ತಿದೆ ಎಂದು ಬಾಳ್ ಠಾಕ್ರೆ ಪಕ್ಷದ ಮುಖವಾಣಿ ಪತ್ರಿಕೆ ಆರೋಪಿಸಿದೆ.
ಮರಾಠಿಗರ ಅಂಗಡಿ ಮತ್ತು ಮನೆಗಳನ್ನು ಧ್ವಂಸ ಮಾಡಿರುವುದು ಕರ್ನಾಟಕ ಸರಕಾರ ಎಂದೂ ನೇರ ಆರೋಪ ಮಾಡಲಾಗಿದೆ.
ವಿಶ್ವ ಕನ್ನಡ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಿರುವುದರ ವಿರುದ್ಧವೂ ಮರಾಠಿ ಪತ್ರಿಕೆ ಕಿಡಿ ಕಾರಿದೆ. ಇದು ದುರುದ್ದೇಶದಿಂದ ಕೂಡಿದ್ದಾಗಿದೆ ಎಂದು ಆಪಾದಿಸಲಾಗಿದೆ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ತೋರಿಸಲು ಬೆಳಗಾವಿಯಲ್ಲೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ. ಅಲ್ಲದೆ ಸಮ್ಮೇಳನ ವಿಶೇಷ ಅಧಿಕಾರಿ ಐಎಂ ವಿಠಲಮೂರ್ತಿಯವರು ಮರಾಠಿಗರ ಹೊಟ್ಟೆ ಉರಿಸುವಂತೆ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಯುವಂತೆ ಮಾಡುತ್ತಿದ್ದಾರೆ ಎಂದು 'ಸಾಮ್ನಾ' ಹೇಳಿಕೊಂಡಿದೆ.
ಮರಾಠಿಗರ ಕುರಿತು ಬೆಳಗಾವಿಯಲ್ಲಿ ಹಾಕಲಾಗಿದ್ದ ಬ್ಯಾನರುಗಳನ್ನು ಕಿತ್ತು ಹಾಕಿ, ಆ ಜಾಗದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕನ್ನಡ ಸಾಹಿತಿಗಳ ಭಿತ್ತಿ ಪತ್ರಗಳನ್ನು ಹಾಕಲಾಗಿದೆ. ಸಮ್ಮೇಳನವನ್ನು ವಿರೋಧಿಸಿದವರಿಗೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ. ಮರಾಠಿಗರನ್ನು ನಿಯಂತ್ರಿಸಲೆಂದೇ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪತ್ರಿಕೆ ವರದಿಯಲ್ಲಿ ಆರೋಪಿಸಿದೆ.