2ಜಿ ಹಗರಣ; ಸಿಬಿಐಯಿಂದ ಕನಿಮೋಳಿ, ಕರುಣಾನಿಧಿ ಪತ್ನಿ ವಿಚಾರಣೆ
ಚೆನ್ನೈ, ಶುಕ್ರವಾರ, 11 ಮಾರ್ಚ್ 2011( 17:51 IST )
2ಜಿ ತರಂಗಾಂತರ ಹಗರಣ ತನಿಖೆಯಲ್ಲಿ ಸಿಬಿಐ ತನ್ನ ಕುಣಿಕೆಯನ್ನು ದಿನೇದಿನೇ ಬಿಗಿಗೊಳಿಸುತ್ತಿದೆ. ಡಿಎಂಕೆ ಸಂಸದೆ - ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರಿ ಕನಿಮೋಳಿ ಹಾಗೂ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರನ್ನು ಸಿಬಿಐ ಶುಕ್ರವಾರ ವಿಚಾರಣೆಗೊಳಪಡಿಸಿದೆ.
ಚೆನ್ನೈಯಲ್ಲಿನ ಡಿಎಂಕೆ ಪ್ರಧಾನ ಕಚೇರಿಗೆ ಇಂದು ಬೆಳಗ್ಗೆ ಆಗಮಿಸಿದ ಸಿಬಿಐ ತಂಡವು, ಕರುಣಾನಿಧಿ ಮಾಲೀಕತ್ವದ ಕಲೈಂಞರ್ ಟಿವಿ ಚಾನೆಲ್‌ನಲ್ಲಿನ ದಯಾಳು ಅಮ್ಮಾಳ್ ಪಾಲು ಮತ್ತು 2ಜಿ ತರಂಗಾಂತರ ಹಂಚಿಕೆಯಲ್ಲಿನ ಆರೋಪಗಳ ಕುರಿತು ಹಲವರನ್ನು ವಿಚಾರಣೆಗೊಳಪಡಿಸಿತು. ಡಿಎಂಕೆ ಕಚೇರಿಯ ಕಟ್ಟಡದಲ್ಲೇ ಇರುವ ಅವರ ಟಿವಿ ಚಾನೆಲ್‌ನ ಆಡಳಿತ ನಿರ್ದೇಶಕ ಶರದ್ ಕುಮಾರ್ ಅವರನ್ನು ಕೂಡ ಪ್ರಶ್ನಿಸಲಾಗಿದೆ.
ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಅವರಿಂದ ಅಕ್ರಮವಾಗಿ ತರಂಗಾಂತರಗಳನ್ನು ಪಡೆದುಕೊಂಡಿರುವ ಕಂಪನಿಯ ಮಾಲೀಕ ಶಾಹಿದ್ ಬಲ್ವಾ ಅವರಿಂದ 214 ಕೋಟಿ ರೂಪಾಯಿಗಳನ್ನು ಟಿವಿ ಚಾನೆಲ್ ಕಲೈಂಞರ್ ಸ್ವೀಕರಿಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕನಿಮೋಳಿ, ದಯಾಳು ಅಮ್ಮಾಳ್ ಮತ್ತು ಶರತ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲಾಯಿತು.
ಈ ಟಿವಿ ಚಾನೆಲ್‌ನಲ್ಲಿ ದಯಾಳು ಅಮ್ಮಾಳ್ ಮತ್ತು ಕನಿಮೋಳಿ ಶೇ.80ರ ಶೇರನ್ನು ಹೊಂದಿದ್ದಾರೆ.
ಆದಾಯ ತೆರಿಗೆ ಇಲಾಖೆಯು ದೂರವಾಣಿ ಕದ್ದಾಲಿಕೆ ಮಾಡಿದ್ದ ಸಂದರ್ಭದಲ್ಲಿ ಬಹಿರಂಗವಾಗಿದ್ದ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ ಮತ್ತು ಕನಿಮೋಳಿ ನಡುವಿನ ಸಂಬಂಧದ ಕುರಿತು ಕನಿಮೋಳಿಯಲ್ಲಿ ಪ್ರಶ್ನಿಸಲಾಗಿದೆ. ಸಂಭಾಷಣೆಯಲ್ಲಿ ಬಹಿರಂಗವಾಗಿದ್ದ ಅಂಶಗಳನ್ನು ಪ್ರಶ್ನಾವಳಿಗೆ ಸೇರಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
2009ರಲ್ಲಿ ಕಲೈಂಞರ್ ಟಿವಿಗೆ ಸಿನಿಯುಗ್ ಫಿಲ್ಮ್ಸ್ ಸಂಸ್ಥೆಯಿಂದ 214 ಕೋಟಿ ರೂಪಾಯಿ ಸಂದಾಯವಾಗಿತ್ತು. ಸಿನಿಯುಗ್ ಸಂಸ್ಥೆಗೆ ಈ ಹಣವನ್ನು ಒದಗಿಸಿದ್ದು ಶಾಹಿದ್ ಬಲ್ವಾ ಅವರ ಸಂಬಂಧಿಕರು ನಿರ್ದೇಶಕರು ಮತ್ತು ಶೇರುದಾರರಾಗಿರುವ ಡಿಬಿ ಗ್ರೂಪ್ ಸಂಸ್ಥೆ ಎಂದು ಸಿಬಿಐ ಇತ್ತೀಚೆಗಷ್ಟೇ ನ್ಯಾಯಾಲಯವೊಂದಕ್ಕೆ ವಿವರಣೆ ನೀಡಿತ್ತು.
ಈಗಾಗಲೇ ಮಾಜಿ ಸಚಿವ, ಕರುಣಾನಿಧಿ ಆಪ್ತ ರಾಜಾ ಅವರನ್ನು ಬಂಧಿಸಿರುವ ಸಿಬಿಐ, ಅವರಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಈಗ ಕರುಣಾನಿಧಿ ಪುತ್ರಿ ಮತ್ತು ಪತ್ನಿಯನ್ನು ವಿಚಾರಣೆಗೊಳಪಡಿಸಿದೆ. ಇದರಿಂದ 2ಜಿ ಹಗರಣ ಕುರಿತ ಇನ್ನಷ್ಟು ಅಂಶಗಳು ಬಹಿರಂಗವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.