ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಣಕ್ಕಾಗಿ ಮಿತ್ರನ ಖತಂ; ಇದು 9 ಶಾಲಾ ಬಾಲಕರ ಕೃತ್ಯ!
(Yash Singhal | Cambridge School | Southeast Delhi | Murder for money)
ಹಣಕ್ಕಾಗಿ ಮಿತ್ರನ ಖತಂ; ಇದು 9 ಶಾಲಾ ಬಾಲಕರ ಕೃತ್ಯ!
ನವದೆಹಲಿ, ಮಂಗಳವಾರ, 15 ಮಾರ್ಚ್ 2011( 11:30 IST )
ಹಣದೆಡೆಗಿನ ಮೋಹ ಮತ್ತು ಅದು ಮಕ್ಕಳ ಕೈಯಲ್ಲಿ ದಾಳವಾಗಿರುವ ರೀತಿ ಯಾವ ಮಟ್ಟದ ಕಳವಳಕಾರಿ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂಬುದಕ್ಕೆ ಉದಾಹರಣೆಯಿದು. ತೀರಿಸದ ಸಾಲವನ್ನು ಕೇಳಿದ್ದ ಏಕೈಕ ಕಾರಣಕ್ಕೆ ಗೆಳೆಯನನ್ನು ಒಂಬತ್ತು ಮಂದಿ ಬಾಲಕರು ಇರಿದು ಕೊಂದು, ಇದೀಗ ಜೈಲು ಸೇರಿದ್ದಾರೆ.
ಈ ಘಟನೆ ನಡೆದಿರುವುದು ಆಗ್ನೇಯ ದೆಹಲಿಯಲ್ಲಿ. ಸಾದರ್ ಬಜಾರ್‌ನಲ್ಲಿ ಎಂಬ್ರಾಯ್ಡರಿ ಅಂಗಡಿ ಹೊಂದಿರುವ ಮನಮೋಹನ್ ಗುಪ್ತಾ ಅವರ ಪುತ್ರ ಯಶ್ ಸಿಂಘಾಲ್ ಎಂಬ 15ರ ಹುಡುಗ ಬಲಿಯಾದ ದುರ್ದೈವಿ. ಮನೆಯ ಪಕ್ಕದಲ್ಲೇ ಚೂರಿಯಿಂದ ಇರಿದು ಅವನದ್ದೇ ಪ್ರಾಯದ ಹುಡುಗರು ಕೊಲೆ ಮಾಡಿದ್ದಾರೆ.
ಹತ್ಯೆಗೀಡಾದ ಯಶ್ ಇಲ್ಲಿನ ಶ್ರೀನಿವಾಸಪುರಿಯಲ್ಲಿನ ಕೇಂಬ್ರಿಜ್ ಸ್ಕೂಲಿನಲ್ಲಿ 10ನೇ ತರಗತಿ ವಿದ್ಯಾರ್ಥಿ. ಮುಂಬರುವ ಸಿಬಿಎಸ್ಇ ಪರೀಕ್ಷೆಗಳಿಗಾಗಿ 'ಕಂಬೈನ್ಡ್ ಸ್ಟಡಿ'ಗಾಗಿ ಗೆಳೆಯನೊಬ್ಬನ ಮನೆಗೆ ಹೋಗುತ್ತಿದ್ದಾಗ ಸಂಜೆ ಹೊತ್ತಿಗೆ ದಾಳಿ ಮಾಡಲಾಗಿತ್ತು.
ಹಣವೇ ಕೊಲೆಗೆ ಹೇತು... ಆಗ್ನೇಯ ದೆಹಲಿಯ ಹೆಚ್ಚುವರಿ ಪೊಲೀಸ್ ಆಯುಕ್ತ ವೀರೇಂದ್ರ ಚಹಾಲ್ ಅವರ ಪ್ರಕಾರ ಬಾಲಕ ಯಶ್ ಹತ್ಯೆಗೆ ಕಾರಣ ಹಣ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಗೆಳೆಯನೊಬ್ಬ ಯಶ್ ಕೈಯಿಂದ 2,500 ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ ಅದನ್ನು ಹಿಂತಿರುಗಿಸಿರಲಿಲ್ಲ. ಈ ಸಂಬಂಧ ಯಶ್ ಮತ್ತು ಆ ಹುಡುಗ ಜಗಳ ಕೂಡ ಮಾಡಿಕೊಂಡಿದ್ದರು. ಪ್ರಕರಣ ಯಶ್ ತಂದೆಯ ಕಿವಿಗೂ ಬಿದ್ದಿತ್ತು.
ಇದು ತೀವ್ರ ಸ್ವರೂಪಕ್ಕೆ ಹೋದಾಗ ಹುಡುಗ ತನ್ನ ಇತರ ಗೆಳೆಯರ ಜತೆ ಸೇರಿ ಸಂಚು ರೂಪಿಸಿದ್ದಾನೆ. ಒತ್ತಾಯಪೂರ್ವಕವಾಗಿ 'ಕಂಬೈನ್ಡ್ ಸ್ಟಡಿ'ಗಾಗಿ ಯಶ್‌ನನ್ನು ಮನೆಯಿಂದ ಹೊರಗೆ ಕರೆಸಿ ವಿದ್ಯಾರ್ಥಿಗಳ ಗುಂಪು ಥಳಿಸಿದೆ. ಅವರಲ್ಲೊಬ್ಬ ಚೂರಿಯಿಂದ ಇರಿದಿದ್ದಾನೆ. ಇಷ್ಟಾಗುತ್ತಿದ್ದಂತೆ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಸ್ತೆಯಲ್ಲೇ ಬಿದ್ದಿದ್ದ ಯಶ್ ತನ್ನ ಇನ್ನೊಬ್ಬ ಗೆಳೆಯನಿಗೆ ಕರೆ ಮಾಡಿ, ನಡೆದಿರುವುದನ್ನು ವಿವರಿಸಿದ್ದಾನೆ. ನನಗೆ ಗೆಳೆಯರು ಚೂರಿಯಿಂದ ಇರಿದಿದ್ದಾರೆ, ನಾನು ರಸ್ತೆಯಲ್ಲಿ ರಕ್ತಸಿಕ್ತವಾಗಿ ಹೊರಳಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆ ಹೊತ್ತಿಗೆ ಮನೆಗೆ ವಾಪಸ್ಸಾಗುತ್ತಿದ್ದ ಯಶ್ ಹೆತ್ತವರಿಗೆ ಗೆಳೆಯ ಮಾಹಿತಿ ನೀಡಿದ ಬಳಿಕ, ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ವಿಫಲವಾಗಿ ರಾತ್ರಿ 9.30ರ ಹೊತ್ತಿಗೆ ಯಶ್ ಕೊನೆಯುಸಿರೆಳೆದಿದ್ದಾನೆ.
ಕೃತ್ಯದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದವರಲ್ಲ. ಎಲ್ಲರೂ ಒಂಬತ್ತರಿಂದ ಹನ್ನೆರಡನೇ ತರಗತಿಯ ಒಳಗಿನ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.