ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೆನ್ನೈಯಲ್ಲಿ ಸುನಾಮಿ ಕಲರವ; ವಿಕಿರಣಪಾತ ವದಂತಿಗಳು (Tsunami | Chennai | radiation shower | India)
ಜಪಾನ್ ಕರಾವಳಿಯ ಮೇಲೆ ಸುನಾಮಿ ಬಡಿದಿದೆ ಎಂಬುದು ತಿಳಿದ ನಂತರ ಚೆನ್ನೈ ನಗರಿಯ ಬಹುತೇಕ ಮಂದಿಗೆ ನಿದ್ದೆ ಬೀಳುತ್ತಿಲ್ಲ. 2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಕೊಚ್ಚಿ ಹೋದ ನೂರಾರು ಮಂದಿಯ ನೆನಪುಗಳು ಅವರನ್ನು ಬಾಧಿಸುತ್ತಿವೆ. ಈ ನಡುವೆ ವಿಕಿರಣಪಾತದ ಸುದ್ದಿಗಳು ಅವರ ಧೃತಿಗೆಡಿಸಿವೆ. ಯಾರೋ ಕಿಡಿಗೇಡಿಗಳು ಇ-ಮೇಲ್ ಮುಖಾಂತರ ಬುದ್ಧಿವಂತರನ್ನೂ ಜೀವಭಯದಿಂದ ನರಳುವಂತೆ ಮಾಡುತ್ತಿದ್ದಾರೆ.

ಜಪಾನ್‌ನಲ್ಲಿನ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದಾಗಿ ಎರಡೆರಡು ಪರಮಾಣು ಸ್ಥಾವರಗಳಲ್ಲಿ ಸ್ಫೋಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ವಿಕಿರಣ ಸೋರಿಕೆಯಾಗಿದ್ದು, ಅದು ಚೆನ್ನೈಯಲ್ಲಿ ಮಳೆಯಾಗಿ ಸುರಿಯುತ್ತಿದೆ. ಇದರಿಂದ ಚರ್ಮ ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳು ಬರುತ್ತವೆ. ದಯವಿಟ್ಟು ಹೊರಗೆ ಹೋಗಬೇಡಿ ಎಂದು ಕಳೆದೆರಡು ದಿನಗಳಿಂದ ಬೆದರಿಸುವ ಇ-ಮೇಲುಗಳು ಹರಿದಾಡುತ್ತಿವೆ.

'ಮಳೆಯ ಜತೆ ವಿಕಿರಣಶೀಲ ಕಣಗಳು ಇರುವುದರಿಂದ, ಯಾರು ಕೂಡ ಮಳೆಯಲ್ಲಿ ಹೊರಗೆ ಹೋಗಬಾರದು. ಹಾಗೆ ಹೋದಲ್ಲಿ ಸುಟ್ಟಗಾಯವಾಗಬಹುದು, ಬೊಕ್ಕತಲೆ ನಿಮ್ಮದಾಗಬಹುದು ಅಥವಾ ಕ್ಯಾನ್ಸರ್ ಸೇರಿದಂತೆ ಮಾರಕ ರೋಗಗಳು ಬರಬಹುದು. ಮನೆಯಿಂದ ಹೊರಗಡೆ ಸಣ್ಣದಾಗಿ ಜಿಣುಗುವ ಮಳೆ ಸುರಿಯುತ್ತಿದ್ದರೂ ನೀವು ರೈನ್‌ಕೋಟ್, ಕೊಡೆ ಮತ್ತು ಸ್ಕಾರ್ಫು ಇಲ್ಲದೆ ಹೋಗಬೇಡಿ. ವಿಕಿರಣಶೀಲವುಳ್ಳ ನೀರು ಕೂಡ ಹಾನಿಕಾರಕ' ಎಂಬ ಅರ್ಥಗಳುಳ್ಳ ಅನಾಮಿಕ ಮೂಲಗಳಿಂದ ಹುಟ್ಟಿಕೊಂಡಿರುವ ಈ ಇ-ಮೇಲುಗಳು ಒಬ್ಬರಿಂದ ಮತ್ತೊಬ್ಬರಿಗೆ ಹೋಗುತ್ತಿವೆ.

2004ರ ಸುನಾಮಿಯಿಂದಾಗಿ ಚೆನ್ನೈಯಲ್ಲಿ ಕನಿಷ್ಠ 200 ಮಂದಿ ಸಾವನ್ನಪ್ಪಿದ್ದರು. ಒಟ್ಟಾರೆ ತಮಿಳುನಾಡಿನಲ್ಲಿ 7,500ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಎಲ್ಲಾ ಸುಳ್ಳು, ಏನೂ ಆಗಲ್ಲ: ತಜ್ಞರು
ಇ-ಮೇಲುಗಳಲ್ಲಿ ಹರಡುತ್ತಿರುವುದು ನಿಜವಲ್ಲ, ಅವುಗಳು ಕೇವಲ ವದಂತಿ ಮಾತ್ರ. ಅದಕ್ಕೆ ಯಾವುದೇ ತಲೆಬುಡಗಳಿಲ್ಲ. ವೈಜ್ಞಾನಿಕ ಆಧಾರಗಳಿಲ್ಲ. ಜನತೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಜಪಾನ್‌ನಲ್ಲಿ ಸ್ಫೋಟಗಳು ನಡೆದಿರುವುದು ಹೌದು. ಆದರೆ ಭಾರತದಲ್ಲಿನ ಜನರಿಗೆ ಬಾಧೆಯನ್ನುಂಟು ಮಾಡುವಷ್ಟು ವಿಕಿರಣ ಖಂಡಿತವಾಗಿಯೂ ಸೋರಿಕೆಯಾಗಿಲ್ಲ ಎಂದು ಭಾಭಾ ಅಣು ಸಂಶೋಧನಾ ಕೇಂದ್ರದ (ಬಿಎಆರ್‌ಸಿ) ಭೌತಶಾಸ್ತ್ರ ವಿಭಾಗದ ಮಾಜಿ ಸಹಾಯಕ ನಿರ್ದೇಶಕ ಡಾ. ಎಂ. ಶ್ರೀನಿವಾಸನ್ ಸ್ಪಷ್ಟಪಡಿಸಿದರು.

ಇದಕ್ಕೆ ಅವರು ಉದಾಹರಣೆಯನ್ನಾಗಿ ನೀಡಿರುವುದು ಚೆರ್ನೊಬಿಲ್ ಪರಮಾಣು ದುರಂತ. ವಿಶ್ವದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿನ ಪ್ರಮುಖ ದುರಂತವಾಗಿರುವ ಇದು 1986ರಲ್ಲಿ ನಡೆದಿತ್ತು. ಭಾರೀ ಪ್ರಮಾಣದ ವಿಕಿರಣ ಇದರಿಂದ ಸೋರಿಕೆಯಾಗಿತ್ತು. ಆದರೂ ಇದರಿಂದ ತೊಂದರೆಗೀಡಾಗಿರುವುದು ಪಕ್ಕದ ರಾಷ್ಟ್ರಗಳು ಮಾತ್ರ. ವಿಶ್ವದ ಇತರ ಭಾಗಗಳಿಗೆ ಸಮಸ್ಯೆಯಾಗಿಲ್ಲ.

ಜಪಾನ್‌ನಲ್ಲಿ ವಿಕಿರಣ ಸೋರಿಕೆಯಾದರೂ, ಅದು ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದವೇ ಹಾಸ್ಯಾಸ್ಪದ. ನಾವು ಆ ದೇಶಕ್ಕಿಂತ ತುಂಬಾ, ತುಂಬಾ ದೂರದಲ್ಲಿದ್ದೇವೆ ಎಂದು ಶ್ರೀನಿವಾಸನ್ ವಿವರಣೆ ನೀಡಿದ್ದಾರೆ.

ಜಪಾನ್‌ನಲ್ಲಿ ಭಾರೀ ಪ್ರಮಾಣದ ವಿಕಿರಣ ಸೋರಿಕೆಯಾಗದ ಹೊರತು, ಆ ಕಡೆಯಿಂದ ಭಾರತದತ್ತ ಭಾರೀ ಗಾಳಿ ಬರದ ಹೊರತು, ನಮ್ಮ ದೇಶದ ಮೇಲೆ ವಿಕಿರಣ ದುಷ್ಪರಿಣಾಮ ಬೀರುವ ಸಾಧ್ಯತೆಯೇ ಇಲ್ಲ. ಭಾರತ ಮತ್ತು ಜಪಾನ್ ನಡುವಿನ ಅಂತರವನ್ನು ಇಲ್ಲಿ ಗಮನಿಸಬೇಕು. ನಾವು ಅಪಾಯಕಾರಿ ಸ್ಥಾನದಲ್ಲಿಲ್ಲ ಎಂದರು.

ಇತರ ಹಲವು ತಜ್ಞರು ಕೂಡ ಶ್ರೀನಿವಾಸನ್ ಅವರ ಅಭಿಪ್ರಾಯವನ್ನೇ ಹೊರಗೆಡವಿದ್ದಾರೆ.

ಜಪಾನ್‌ನಲ್ಲಿ ಭೂಕಂಪ ಸಂಭವಿಸಿದ ನಂತರ ಭೂಕಂಪ ಅಥವಾ ಸುನಾಮಿ ಕಟ್ಟೆಚ್ಚರ ರವಾನಿಸದ ರಾಷ್ಟ್ರಗಳಲ್ಲಿ ಭಾರತವೂ ಒಂದು. ಅಲ್ಲಿನ ಸುನಾಮಿಯಿಂದ ನಮ್ಮಲ್ಲಿ ಯಾವುದೇ ರೀತಿಯ ಸಮಸ್ಯೆಗಳುಂಟಾಗುವುದು ಸಾಧ್ಯವಿಲ್ಲ. ಹರಡುತ್ತಿರುವುದು ಶುದ್ಧ ವದಂತಿಗಳು. ಅವುಗಳನ್ನು ತಕ್ಷಣವೇ ತಡೆಯಬೇಕು. ಜನರಲ್ಲಿ ಭೀತಿ ಸೃಷ್ಟಿಸುವ ಬದಲು, ಭೂಕಂಪ ಪೀಡಿತರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಯೋಜಿಸಬೇಕು ಎಂದು ತಿಳಿಸಿದ್ದಾರೆ.
ಇವನ್ನೂ ಓದಿ