ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸಿಎಂ' ಪ್ರೇರಣಾ ಟ್ರಸ್ಟ್ ವಿವಾದ; ಸಂಸತ್ತಿನಲ್ಲಿ ಗೌಡರ ಗದ್ದಲ
(HD Deve Gowda | Karnataka | BS Yeddyurappa | Prerana trust scam)
'ಸಿಎಂ' ಪ್ರೇರಣಾ ಟ್ರಸ್ಟ್ ವಿವಾದ; ಸಂಸತ್ತಿನಲ್ಲಿ ಗೌಡರ ಗದ್ದಲ
ನವದೆಹಲಿ, ಬುಧವಾರ, 16 ಮಾರ್ಚ್ 2011( 13:08 IST )
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದದ ಕುರಿತು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು, ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಗೌಡರ ಆರೋಪಕ್ಕೆ ಬಿಜೆಪಿ ಸದಸ್ಯರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕದನ ಪರಿಸ್ಥಿತಿ ಕಂಡು ಬಂತು.
ಇಂದು ಲೋಕಸಭೆಯ ಶೂನ್ಯವೇಳೆಯಲ್ಲಿ ದೇವೇಗೌಡರು ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದದ ಕುರಿತು ಪ್ರಸ್ತಾಪಿಸಲು ಮುಂದಾಗಿದ್ದರು. ಆದರೆ ಇದಕ್ಕೆ ಬಿಜೆಪಿಯ ಎಲ್ಲಾ ಸದಸ್ಯರು ಒಕ್ಕೊಲಿನ ವಿರೋಧ ವ್ಯಕ್ತಪಡಿಸಿದ್ದರಿಂದ ಕಲಾಪವನ್ನು ಸ್ಪೀಕರ್ ಮೀರಾ ಕುಮಾರ್ ಅವರು ಮುಂದೂಡಿದರು.
ಕಲಾಪ ಮತ್ತೆ ಆರಂಭವಾದಾಗ ಗೌಡರು ಮತ್ತೆ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಂಪನಿಗಳ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರೇರಣಾ ಟ್ರಸ್ಟ್‌ಗೆ ಕಂಪನಿಗಳಿಂದ ಬಂದಿರುವ ಹಣ ದಾನದ ಮೂಲಕ ಬಂದಿಲ್ಲ. ಈ ಕುರಿತು ನನ್ನಲ್ಲಿ ದಾಖಲೆಗಳಿವೆ ಎಂದು ಸದನದಲ್ಲಿ ಹಲವು ಪುಟಗಳ ದಾಖಲೆಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಭಾರೀ ಆಕ್ಷೇಪ ವ್ಯಕ್ತಪಡಿಸಿದರು. ಗೌಡರು ಪ್ರೇರಣಾ ಟ್ರಸ್ಟ್ ವಿವಾದವನ್ನು ಪ್ರಸ್ತಾಪಿಸದಂತೆ ಅಡ್ಡಿಪಡಿಸಿದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಅವರು, ಗದ್ದಲದ ನಡುವೆಯೇ ಹಲವು ಆರೋಪಗಳನ್ನು ಮಾಡಿದರು.
ನಾನು ಮಾಡಿರುವ ಆರೋಪಗಳನ್ನು ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಗೌಡರಿಗೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳ ಸದಸ್ಯರು ಬೆಂಬಲ ಸೂಚಿಸಿದರು. ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಬಸುದೇವ್ ಆಚಾರ್ಯ ಮುಂತಾದ ಹಿರಿಯ ಸಂಸದೀಯರು ಗೌಡರ ಬೆನ್ನಿಗೆ ನಿಂತರು.
ಏನಿದು ಪ್ರೇರಣಾ ವಿವಾದ? ಶಿವಮೊಗ್ಗದಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಶಿಕ್ಷಣ ಟ್ರಸ್ಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಜಯಶಂಕರ್, ದೊರೆಸ್ವಾಮಿ ಹಾಗೂ ಜವಾಹರ್ ಟ್ರಸ್ಟಿಗಳು. ಈ ಟ್ರಸ್ಟ್‌ಗೆ ನಷ್ಟದಲ್ಲಿರುವ ಹಲವು ಕಂಪನಿಗಳು ಕೋಟ್ಯಂತರ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದವು.
ಆದರ್ಶ ಡೆವಲಪರ್ಸ್ 1.37 ಕೋಟಿ, ಇಂಡಸ್ಟ್ರಿಯಲ್ ಟೆಕ್ನೋಲ್ಯಾಂಡ್ ಟವರ್ 3.4 ಕೋಟಿ, ಆದರ್ಶ ಡೆವಲಪರ್ಸ್ ಎಂ.ಡಿ. ಜೈಶಂಕರ್ 4.3 ಕೋಟಿ, ರಿಯಲ್ ಟೆಕ್ನಿಕಲ್ ಸಲ್ಯೂಷನ್ 3.2 ಕೋಟಿ, ಸೌತ್ ವೆಸ್ಟ್ ಮೈನಿಂಗ್ ಕಂಪನಿ 10 ಕೋಟಿ, ಜೈಭಾರತ್ ಟೆಕ್ನಿಕಲ್ 3.4 ಕೋಟಿ, ಪ್ರೊ. ದೊರೆಸ್ವಾಮಿ 50 ಲಕ್ಷ, ಜವಾಹರ್ ಅವರಿಂದ 50 ಲಕ್ಷ ರೂ ಹಣ ದೇಣಿಗೆ ರೂಪದಲ್ಲಿ ಸಂದಾಯವಾಗಿತ್ತು. ಇದರ ಒಟ್ಟಾರೆ ಮೊತ್ತ 27.18 ಕೋಟಿ ರೂಪಾಯಿ ಎಂದು ಕೆಲ ದಿನಗಳ ಹಿಂದಷ್ಟೇ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.