ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಿದಂಬರಂ, ಅಳಗಿರಿ ಓಟಿಗಾಗಿ ಕಾಸು ಕೊಟ್ಟಿದ್ದರು: ವಿಕಿಲೀಕ್ಸ್
(South Indian politics | cash-for-votes | WikiLeaks | Karti Chidambaram)
ಚಿದಂಬರಂ, ಅಳಗಿರಿ ಓಟಿಗಾಗಿ ಕಾಸು ಕೊಟ್ಟಿದ್ದರು: ವಿಕಿಲೀಕ್ಸ್
ಚೆನ್ನೈ, ಬುಧವಾರ, 16 ಮಾರ್ಚ್ 2011( 15:23 IST )
ಕೇಂದ್ರ ಗೃಹಸಚಿವ ಪಿ. ಚಿದಂಬರಂ ಪುತ್ರ, ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಪುತ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜಕಾರಣಿಗಳು-ರಾಜಕೀಯ ಪಕ್ಷಗಳು ಮತದಾರರಿಗೆ ಹಣ ಹಂಚಿರುವುದು ಬಯಲಾಗಿದೆ. ಪ್ರತಿ ಮತದಾರನಿಗೆ ಕನಿಷ್ಠ ಐದು ಸಾವಿರ ರೂಪಾಯಿಗಳನ್ನು ಹಂಚಲಾಗಿದೆ ಎಂದು ಅವರು ಹೇಳಿದ್ದಾರೆಂದು ಅಮೆರಿಕಾ ವರದಿ ಮಾಡಿದೆ.
ಚೆನ್ನೈಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ಪ್ರಮುಖ ಅಧಿಕಾರಿ ಫ್ರೆಡ್ರಿಕ್ ಜೆ. ಕಲ್ಪನ್ ಈ ಮಾಹಿತಿಗಳನ್ನು ಅಮೆರಿಕಾದ ಗೃಹ ಸಚಿವಾಲಯಕ್ಕೆ 2009ರ ಮೇ 13ರಂದು ಕಳುಹಿಸಿದ್ದರು. ಆ ದಾಖಲೆ ವಿಕಿಲೀಕ್ಸ್ ಕೈ ಸೇರಿದ ನಂತರ 'ದಿ ಹಿಂದೂ' ಪತ್ರಿಕೆಯ ಮೂಲಕ ಬಹಿರಂಗವಾಗಿದೆ.
ಚೆನ್ನೈ ರಾಯಭಾರ ಕಚೇರಿಗೆ ಭೇಟಿಯಾಗಲೆಂದು ಬಂದಿದ್ದ ಕಾಂಗ್ರೆಸ್‌ನ ಚಿದಂಬರಂ ಪುತ್ರ ಕಾರ್ತಿಕ್ ಚಿದಂಬರಂ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಎಂ.ಕೆ. ಅಳಗಿರಿ ಆಪ್ತ ಸ್ನೇಹಿತ-ಮಧುರೈ ಮಾಜಿ ಮೇಯರ್ ಎಂ. ಪಟ್ಟುರಾಜನ್, ಮಜ್ಲಿಸ್ ಇ ಇತ್ತೇನ್‌ಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಒವಾಯಿಸಿ ಈ ವಿಚಾರಗಳನ್ನು ಹೇಳಿದ್ದರು.
ಪತ್ರಿಕೆಗಳ ಮೂಲಕ ಹಣ ವಿತರಣೆ... ಕಂಪನಿಗಳು ಮತ್ತಿತರ ಮೂಲಗಳಿಂದ ನಿಧಿ ಸಂಗ್ರಹಿಸುವ ರಾಜಕೀಯ ಪಕ್ಷಗಳು, ಅದನ್ನು ನಗದು, ಉಪಕರಣಗಳು ಅಥವಾ ಇತರ ಸರಕುಗಳು ಅಥವಾ ಸೇವೆಗಳ ಮೂಲಕ ಮತದಾರರಿಗೆ ತಲುಪಿಸುತ್ತವೆ. ಇದು ಕೇವಲ ಒಂದು ರಾಜ್ಯದಲ್ಲಿ ಕಂಡು ಬಂದಿರುವುದಲ್ಲ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿವೆ. ಅವುಗಳಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಮುಖ್ಯವಾದುವು.
ಪಕ್ಷದ ಮೂಲಗಳಿಂದ ಹಣವನ್ನು ಪಡೆದುಕೊಳ್ಳುವ ಇದಕ್ಕೆ ಸಂಬಂಧಪಟ್ಟ ಏಜೆಂಟರುಗಳು ಅಕ್ಕಿ ಚೀಲದಲ್ಲಿ ಹಣವನ್ನು ತುಂಬಿಸಿಕೊಂಡು ನಿರ್ದಿಷ್ಟ ಕ್ಷೇತ್ರಗಳಿಗೆ ಮುಂಜಾನೆ ಹೊತ್ತಿಗೆ ಬರುತ್ತಾರೆ. ಈ ಹೊತ್ತಿಗೆ ಚುನಾವಣಾ ಆಯೋಗದ ಅಧಿಕಾರಿಗಳು ನಿದ್ದೆಗೆ ಜಾರಿರುತ್ತಾರೆ. ಆಗ ದಿನಪತ್ರಿಕೆಗಳ ಒಳಗೆ ಹಣವನ್ನು ತುರುಕಿ ಮತದಾರರಿಗೆ ತಲುಪಿಸಲಾಗುತ್ತದೆ. ಅದಕ್ಕೂ ಮೊದಲು, ಹಣ ಪಡೆಯುವ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಹೌದ್ರೀ, ಐದೈದು ಸಾವಿರ ಕೊಟ್ಟಿದ್ದೇವೆ... ಅಮೆರಿಕಾ ರಾಯಭಾರಿ ಜತೆ ಮಾತಿಗಿಳಿದಿದ್ದ ಅಳಗಿರಿ ಆಪ್ತ ಪಟ್ಟುರಾಜನ್ ಹೇಳಿರುವ ಮಾತು. ಅಳಗಿರಿ ಗೆಲ್ಲುವುದಕ್ಕೆ ಹಣವೇ ಕಾರಣ. ಈ ಹಿಂದೆಂದೂ ಕಾಣದ ರೀತಿಯಲ್ಲಿ ಹಣ ಹಂಚಲಾಗಿದೆ. 2009ರ ಚುನಾವಣೆಯಲ್ಲಿ ತಿರುಮಂಗಲಂ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಭಾರೀ ಹಣವನ್ನು ಹಂಚಿದ್ದೇವೆ.
ಇದರಲ್ಲೇನೂ ರಹಸ್ಯವಿಲ್ಲ. ತಿರುಮಂಗಲಂನಲ್ಲಿ ಅಳಗಿರಿಯವರು ಪ್ರತಿ ಮತದಾರನಿಗೆ 5,000 ರೂಪಾಯಿಯಂತೆ ಕೊಟ್ಟಿದ್ದಾರೆ. ಡಿಎಂಕೆ ಪಕ್ಷವು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರಿಗೂ 'ದಿನಪತ್ರಿಕೆ' ಹಂಚಿದೆ. ಅದರಲ್ಲಿ ಯಾರಿಗೆ ಮತ ಹಾಕಬೇಕು ಎಂಬುದನ್ನು ಕೂಡ ಪ್ರತ್ಯೇಕ ಕಾಗದ ಪತ್ರದಲ್ಲಿ ಸೂಚಿಸಲಾಗಿತ್ತು. ಡಿಎಂಕೆಗೆ ಮತ ಹಾಕದ ವ್ಯಕ್ತಿಗಳಿಗೂ ಹಣ ತಲುಪುತ್ತದೆ. ಇದು ನಷ್ಟ ಹೌದಾದರೂ, ಗೆಲುವು ಖಚಿತಪಡಿಸುವಲ್ಲಿ ಮಹತ್ವದ್ದು ಎಂದು ಪಟ್ಟುರಾಜನ್ ಹೇಳಿದ್ದರು.
ಅದಕ್ಕೂ ಮೊದಲಿನ ಚುನಾವಣೆಯಲ್ಲಿ ಒಬ್ಬ ಮತದಾರನಿಗೆ 500 ರೂಪಾಯಿಗಳನ್ನು ನೀಡಲಾಗುತ್ತಿತ್ತು ಎಂದೂ ಅವರು ತಿಳಿಸಿದ್ದರು.
ಚಿದು ಕ್ಷೇತ್ರವೂ ಹೊರತಲ್ಲ... ಕೇಂದ್ರ ಸಚಿವ ಚಿದಂಬರಂ ಅವರ ಶಿವಗಂಗಾ ಲೋಕಸಭಾ ಕ್ಷೇತ್ರದ ಗೆಲುವಿನ ಉಸ್ತುವಾರಿ ಅವರ ಪುತ್ರ ಕಾರ್ತಿ ಚಿದಂಬರಂ ಅವರದ್ದು. ನಿರ್ದಿಷ್ಟವಾಗಿ ಮತದಾರರಿಗೆ ನಗದು ಹಣವನ್ನು ಕೊಟ್ಟಿರುವುದನ್ನು ಕಾರ್ತಿ ನಿರಾಕರಿಸಿದ್ದರು. ಆದರೆ ಅದಕ್ಕೆ ಯಾವುದೇ ನೈತಿಕ ಕಾರಣಗಳಿಲ್ಲ. ಬದಲಿಗೆ ಅದು ಕಷ್ಟ ಸಾಧ್ಯ ಎನ್ನುವುದು.
ಆದರೆ ತಮಿಳುನಾಡು ಯುವ ಕಾಂಗ್ರೆಸ್ ಅಧ್ಯಕ್ಷರು ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದರು. 'ಶಿವಗಂಗಾ ಕ್ಷೇತ್ರದಲ್ಲಿ ಕಾರ್ತಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ಮಾಡದ ಕೆಲಸ ಕಾರ್ತಿಯಿಂದ ನಡೆಯುತ್ತಿದೆ. ಕಾರ್ತಿ ಸ್ವತಃ ಜನರಿಗೆ ಹಣ ಹಂಚುತ್ತಿದ್ದಾರೆ' ಎಂದಿದ್ದರು.
ಇವೆಲ್ಲವನ್ನೂ ರಾಜಕಾರಣಿಗಳಿಂದಲೇ ಕೇಳಿ ತಿಳಿದುಕೊಂಡಿದ್ದ ರಾಯಭಾರ ಕಚೇರಿಯ ಅಧಿಕಾರಿ ಫ್ರೆಡ್ರಿಕ್ ಜೆ. ಕಲ್ಪನ್, ತನ್ನ ದೇಶ ಅಮೆರಿಕಾಕ್ಕೆ ವರದಿ ಮಾಡಿ ರವಾನಿಸಿದ್ದರು.