ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದೂರಸಂಪರ್ಕ ಖಾತೆಯ ಮಾಜಿ ಸಚಿವ ಎ. ರಾಜಾ ಆಪ್ತ ಹಾಗೂ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐಯಿಂದ ವಿಚಾರಣೆಗೊಳಗಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಾಧಿಕ್ ಬಾಚಾ ಅವರ ಕಳೇಬರವು ಚೆನ್ನೈಯಲ್ಲಿನ ತನ್ನ ಮನೆಯಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಾಚಾ ಅವರು ಸಾವನ್ನಪ್ಪಿದ್ದಾರೆ ಎಂದು ಚೆನ್ನೈಯ ಅಪೋಲೋ ಆಸ್ಪತ್ರೆ ಖಚಿತಪಡಿಸಿದೆ. ಮರಣೋತ್ತರ ಪರೀಕ್ಷೆಗಾಗಿ ರಾಯ್‌ಪೇಟಾದಲ್ಲಿನ ಸರಕಾರಿ ಆಸ್ಪತ್ರೆಗೆ ಕಳೇಬರವನ್ನು ಸಾಗಿಸಲಾಗಿದೆ ಎಂದು ವರದಿಗಳು ಹೇಳಿವೆ.
ಸಾಧಿಕ್ ಬಾಚಾ ಅವರು 'ಗ್ರೀನ್ ಹೌಸ್ ಪ್ರಮೋಟರ್ಸ್' ರಿಯಲ್ ಎಸ್ಟೇಟ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದರು. ಮಾಜಿ ಸಚಿವ ರಾಜಾ ಅವರ ಬೇನಾಮಿ ಸಂಸ್ಥೆಯಿದು ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿತ್ತು.
ರಾಜಾ ಅವರ ಪತ್ನಿ ಎಂ.ಎ. ಪರಮೇಶ್ವರಿ 2008ರ ಜೂನ್ ತಿಂಗಳಲ್ಲಿ ಈ ಕಂಪನಿಯ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜಾ ಅವರ ಅಳಿಯ ಆರ್.ಪಿ. ಪರಮೇಶ್ ಕುಮಾರ್, ರಾಜಾ ಸಹೋದರ ಎ. ಕಳಿಯಪರುಮಾಳ್ ಮುಂತಾದವರು ನಿರ್ದೇಶಕರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಾಜಾ ಆಪ್ತರೇ ಈ ಸಂಸ್ಥೆಯಲ್ಲಿ ಹೆಚ್ಚಿನ ಶೇರುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
ರಾಜಾ ಅವರು ಯುಪಿಎ ಮೊದಲ ಅವಧಿಯಲ್ಲಿ ಪರಿಸರ ಖಾತೆ ಸಚಿವರಾದ ಕೆಲವೇ ವಾರಗಳಲ್ಲಿ ಗ್ರೀನ್ ಹೌಸ್ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತ್ತು.
2ಜಿ ಹಗರಣ ಸಂಬಂಧ ಬಾಚಾ ಅವರನ್ನು ಇತ್ತೀಚೆಗಷ್ಟೇ ಸಿಬಿಐ ಸುದೀರ್ಘ ವಿಚಾರಣೆಗೊಳಪಡಿಸಿತ್ತು. ಹಗರಣದಲ್ಲಿ ರಾಜಾ ಪಾತ್ರದ ಬಗ್ಗೆ ಬಾಚಾ ಹೆಚ್ಚಿನ ವಿವರಣೆ ನೀಡಿದ್ದರು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಚಾ ಸಾವು ಭಾರೀ ನಿಗೂಢತೆಗೆ ಕಾರಣವಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದಿಲ್ಲವಾದರೂ, ಸಿಬಿಐ ವಿಚಾರಣೆಯ ಒತ್ತಡವು ಪ್ರಮುಖ ಎಂದು ಹೇಳಲಾಗುತ್ತಿದೆ.
ಇಂದು ಅವರು ದೆಹಲಿಯಲ್ಲಿ ಮತ್ತೆ ಸಿಬಿಐ ಎದುರು ವಿಚಾರಣೆಗಾಗಿ ಹಾಜರಾಗಬೇಕಿತ್ತು. ಸಿಬಿಐ ಮೂಲಗಳ ಪ್ರಕಾರ, ಬಾಚಾ ತನಿಖೆಗೆ ಸಹಕರಿಸುತ್ತಿದ್ದರು. ಹಲವು ಅಂಶಗಳನ್ನು ವಿಚಾರಣೆ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು.
ಇದು ಕೊಲೆಯಾಗಿರಬಹುದು... 1.76 ಲಕ್ಷ ಕೋಟಿ ರೂಪಾಯಿ ಮೌಲ್ಯದ 2ಜಿ ಹಗರಣದಲ್ಲಿ ನಡೆದಿರುವ ಮೊದಲ ಸಾವಿನ ಪ್ರಕರಣವಿದು. ಪ್ರಮುಖ ಕುಳಗಳೇ ಇದರಲ್ಲಿ ಪಾಲ್ಗೊಂಡಿರುವುದರಿಂದ ಬಾಚಾ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಹಗರಣವನ್ನು ಬಯಲಿಗೆಳೆದಿದ್ದ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಅವರಿಗೆ ಈ ಕುರಿತು ಶಂಕೆಗಳಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ಸಾಧಿಕ್ ಓರ್ವ ದುರ್ಬಲ ವ್ಯಕ್ತಿಯಲ್ಲ. ಅವರು ಕಠಿಣ ವ್ಯಕ್ತಿತ್ವ ಹೊಂದಿದ್ದವರು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸಂಶಯಗಳಿವೆ ಎಂದಿದ್ದಾರೆ.