ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಕಿಲೀಕ್ಸ್: ಸರ್ಕಾರ ಉಳಿವಿಗೆ ಕಾಂಗ್ರೆಸ್ ಲಂಚ!; ಕೋಲಾಹಲ (WikiLeaks | India WikiLeaks | UPA | Manmohan | Cash for Vote)
PTI
ಅತ್ತ ಕಡೆ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರದ ಆರೋಪಗಳು, ಇತ್ತ ಕಡೆ ಹಗರಣಗಳ ಸರಮಾಲೆಯಲ್ಲಿ ಮುಳುಗಿ ಹೋಗಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಇವೆಲ್ಲವುಗಳ ನಡುವೆ, ಅಣು ಒಪ್ಪಂದದ ಸಂದರ್ಭ ವಿಶ್ವಾಸಮತ ಯಾಚನೆ ವೇಳೆ ಸರಕಾರ ಉಳಿಯುವುದಕ್ಕೆ ಕಾಂಗ್ರೆಸ್ ಪಕ್ಷವು ಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂಬುದನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.

ಇದು ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಕೋಲಾಹಲವೆಬ್ಬಿಸಿದ್ದು, ಕೇಂದ್ರದ ಯುಪಿಎ ಸರಕಾರವು 2008ರಲ್ಲಿ 'ರಾಜಕೀಯ ಮಹಾ ಪಾತಕ'ದ ಫಲವಾಗಿ ಬದುಕುಳಿದಿತ್ತು. ಹೀಗಾಗಿ ಪ್ರಸ್ತುತ ಯುಪಿಎ ಸರಕಾರವು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ವಾಕ್ಪ್ರಹಾರ ನಡೆಸಿತು. ಬಿಜೆಪಿ ಮತ್ತು ಎಡಪಕ್ಷಗಳಂತೂ ಸರಕಾರದ ಮೇಲೆ ಮುಗಿಬಿದ್ದವು.

ಅಮೆರಿಕ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಎಡಪಕ್ಷಗಳು 2008ರಲ್ಲಿ ಯುಪಿಎ-I ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಅಂದು ಸರಕಾರವು ಅಲ್ಪ ಮತಕ್ಕೆ ಕುಸಿದಿತ್ತು. ಆದರೆ, ಆ ಬಳಿಕ ವಿಶ್ವಾಸಮತ ಯಾಚನೆಯ ಮತದಾನದ ಸಂದರ್ಭ, ಸಂಸತ್ತಿನಲ್ಲಿ ಭಾರೀ ಕೋಲಾಹಲ ನಡೆದಿತ್ತಲ್ಲದೆ, ತಮಗೆ ಕೋಟ್ಯಂತರ ರೂಪಾಯಿ ಹಣದ ಆಮಿಷ ಒಡ್ಡಲಾಗಿತ್ತು ಎಂದು ಸಂಸದರು ಹಣದ ಕಂತೆಗಳನ್ನೇ ಲೋಕಸಭೆಯಲ್ಲಿ ಪ್ರದರ್ಶಿಸಿದ್ದರು. ಇದು ಭಾರತದ ಪ್ರಜಾಸತ್ತೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.

'ಪಾಪ'ದ ಫಲ ಈ ಸರಕಾರ
ರಾಜ್ಯಸಭೆಯಲ್ಲಿ ಈ ಕುರಿತು ಧ್ವನಿಯೆತ್ತಿದ ಬಿಜೆಪಿ ನಾಯಕ ಅರುಣ್ ಜೇಟ್ಲಿ, ಕಾಂಗ್ರೆಸ್ ನೇತೃತ್ವದ ಸರಕಾರವು 2008ರಲ್ಲಿ ತನ್ನ ಸರಕಾರವನ್ನು ಉಳಿಸಿಕೊಳ್ಳಲು ಲಂಚದ ಹಣ ನೀಡಿರುವುದು ಸಾಬೀತಾಗಿದೆ. ಇದು ನಮ್ಮ ಅತ್ಯಂತ ಭಯಾನಕ ಆತಂಕವನ್ನು ನಿಜವಾಗಿಸಿದೆ. ಪಾಪದ ಫಲವಾಗಿ ಬದುಕುಳಿದಿತ್ತು ಅಂದಿನ ಸರಕಾರ. ಹೀಗಾಗಿ ಅದಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ, ಮನಮೋಹನ್ ಸಿಂಗ್ ಸರಕಾರವು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸೀತಾರಾಮ ಯೆಚೂರಿ, ಲಂಚ ಪ್ರಕರಣ ಅತಿದೊಡ್ಡ ಆಘಾತವಾಗಿದ್ದು, ಈ ಕುರಿತು ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರಲ್ಲದೆ, ಗಾಂಧಿ ಕುಟುಂಬದ ಹಿತಾಸಕ್ತಿ ಎಷ್ಟಿತ್ತು ಎಂಬುದರ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದರು.

ಪ್ರಧಾನಿ ರಾಜೀನಾಮೆ ನೀಡಬೇಕು: ಸುಷ್ಮಾ
ಲೋಕಸಭೆಯಲ್ಲಿ ಗದ್ದಲಕ್ಕೆ ಚಾಲನೆ ನೀಡಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಲಂಚ ಕೊಟ್ಟು ಸರಕಾರ ಉಳಿಸಿಕೊಂಡ ಪ್ರಧಾನಮಂತ್ರಿಗೆ ಅಧಿಕಾರದಲ್ಲಿ ಉಳಿಯುವ ಯಾವುದೇ ನೈತಿಕ ಹಕ್ಕಿಲ್ಲ, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಹೌದು, ನಮಗೂ ಲಂಚದ ಆಫರ್ ಇತ್ತು: ಶಿವಸೇನೆ
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರಕಾರದ ರಕ್ಷಣೆಗಾಗಿ, ವಿಶ್ವಾಸಮತ ಯಾಚನೆ ವೇಳೆ ಸರಕಾರದ ಪರ ಮತ ನೀಡಲು ನಮಗೂ ಲಂಚದ ಆಫರ್ ಬಂದಿತ್ತು ಎಂಬುದನ್ನು ಶಿವಸೇನೆ ದೃಢಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ನಮ್ಮ ಸಂಸದರಿಗೂ ಲಂಚದ ಆಮಿಷ ಒಡ್ಡಲಾಗಿತ್ತು. ಆದರೆ ನಮ್ಮ ಸಂಸದರು ಪಕ್ಷ ನಿಷ್ಠೆ ತೋರಿದರು ಎಂದರು.

ಇಲ್ಲ, ನಾವೇನೂ ಲಂಚ ಪಡೆದಿಲ್ಲ ಎಂದ ಆರ್ಎಲ್‌ಡಿ
ರಾಷ್ಟ್ರೀಯ ಲೋಕದಳಕ್ಕೆ ಲಂಚದ ಹಣ ನೀಡಲಾಗಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅದರ ಅಧ್ಯಕ್ಷ ಅಜಿತ್ ಸಿಂಗ್, ನಮಗೇನೂ ಹಣ ಬಂದಿಲ್ಲ, ನಾವು ಪರಮಾಣು ಒಪ್ಪಂದದ ವಿರುದ್ಧವೇ ಮತ ಚಲಾಯಿಸಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಲೋಕಸಭೆಯಲ್ಲಿ, 10 ಕೋಟಿ ಪಡೆದಿರುವ ಆರೋಪ ಹೊತ್ತಿರುವ ಆರ್ಎಲ್‌ಡಿ ಬಳಿ ಮೂವರು ಸಂಸದರು ಇದ್ದರು.

ಇದೀಗ, ಯಾರ ಭ್ರಷ್ಟಾಚಾರದ ವಿರುದ್ಧ ಯಾರು ಧ್ವನಿಯೆತ್ತುವುದು ಎಂಬ ಸಂದಿಗ್ಧದಲ್ಲಿರುವುದು ಭಾರತದ ಬಡ ಮತದಾರ!
ಇವನ್ನೂ ಓದಿ