ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟು ಖರೀದಿಸಿದ್ದು ನನಗೆ ಗೊತ್ತೇ ಇರಲಿಲ್ಲ: ಪ್ರಧಾನಿ ಸಿಂಗ್ (Manmohan Singh | Wikileaks | 2008 trust vote | Cash for Vote)
ವಿಕಿಲೀಕ್ಸ್ ಬಹಿರಂಗಪಡಿಸಿರುವ ರಾಜತಾಂತ್ರಿಕರ ಪತ್ರ ವ್ಯವಹಾರದ ಸತ್ಯಾಸತ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಕಾಸು ಕೊಟ್ಟು ಓಟು ಖರೀದಿಸಲು ನಾನು ಯಾರಿಗೂ ಅಧಿಕಾರ ಕೊಟ್ಟಿರಲಿಲ್ಲ ಮತ್ತು ಅಂತಹ ಯಾವುದೇ ವ್ಯವಹಾರಗಳಲ್ಲಿ ನಾನು ಪಾಲ್ಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

2008ರ ವಿಶ್ವಾಸ ಮತ ಸಾಬೀತಿನ ಸಂದರ್ಭದಲ್ಲಿ ಸಂಸದರಿಗೆ ಕೋಟಿಗಟ್ಟಲೆ ಹಣ ಕೊಟ್ಟು ಓಟು ಹಾಕಿಸಲಾಗಿತ್ತು ಎಂಬ ವರದಿಗಳಿಗೆ ಪುಷ್ಠಿ ನೀಡುವ ವಿವರಗಳನ್ನು ವಿಕಿಲೀಕ್ಸ್ ದಾಖಲೆಗಳು ಬಹಿರಂಗಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು, 'ವಿಕಿಲೀಕ್ಸ್ ರಹಸ್ಯ ಬಯಲಿನಿಂದ ತೊಂದರೆಗೊಳಗಾದವರು ಈಗಾಗಲೇ ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಯಭಾರಿಗಳು ಕಳುಹಿಸಿರುವ ದಾಖಲೆಗಳಲ್ಲಿ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆಯ ಕುರಿತು ಗಂಭೀರ ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ' ಎಂದು ಸರಕಾರವನ್ನು ಸಮರ್ಥಿಸಿಕೊಂಡರು.

ನಾನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳುತ್ತಿದ್ದೇನೆ - ಇಂತಹ 'ಖರೀದಿ'ಯ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಆ ರೀತಿ ಕಾಸಿಗಾಗಿ ಓಟು ಖರೀದಿಸಲು ನಾನು ಯಾರಿಗೂ ಸೂಚಿಸಿರಲಿಲ್ಲ. ಇಂತಹ ಓಟು ಖರೀದಿ ಬಗ್ಗೆ ನನಗೇನೂ ಗೊತ್ತಿಲ್ಲ. ಖಂಡಿತಾ ಇಂತಹ ಯಾವುದೇ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದು ಅಥವಾ ಅದರ ಬಗ್ಗೆ ಯೋಚಿಸುವುದನ್ನು ನಾನು ಮಾಡಿಲ್ಲ ಎಂದು 'ಇಂಡಿಯಾ ಟುಡೇ ಶೃಂಗ'ದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಪ್ರಶ್ನೆಗಳಿಗೆ ಉತ್ತರಿಸಿದರು.

2008ರ ಜುಲೈ 22ರ ಸರಕಾರದ ಪರ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಕಾಸಿಗಾಗಿ ಓಟು ಖರೀದಿ ವ್ಯವಹಾರ ನಡೆದಿಲ್ಲ ಎಂಬ ಬಗ್ಗೆ ಸ್ಪಷ್ಟ ಹೇಳಿಕೆ ಪ್ರಧಾನಿಯವರ ಉತ್ತರದಿಂದ ಬಂದಿಲ್ಲ.

ವಿಕಿಲೀಕ್ಸ್ ವಿವಾದದ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ನಡೆಯುತ್ತಿದ್ದಾಗ ಸುಮ್ಮನಿದ್ದ ಪ್ರಧಾನಿ, ಈಗಲೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ವಿಕಿಲೀಕ್ಸ್ ಮತ್ತು ಕಳೆದ ಕೆಲವು ದಿನಗಳಿಂದ ತೀವ್ರ ಕಳವಳಕ್ಕೆ ಕಾರಣವಾಗಿರುವ ಪ್ರಸಂಗಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಮತ್ತು ಈಗ ನಡೆಯುತ್ತಿರುವ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಇದೆಲ್ಲ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕಾದ ವಿಚಾರಗಳು. ನಾನು ಏನಾದರೂ ಹೇಳುವುದಿದ್ದರೆ, ಅದನ್ನು ಸಂಸತ್ತಿನಲ್ಲೇ ಮೊದಲು ಹೇಳುತ್ತೇನೆ ಎಂದರು.
ಇವನ್ನೂ ಓದಿ