ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಅಂಥವರಲ್ಲ, ಆದರೂ ತನಿಖೆಯಾಗಲಿ: ಒಮರ್ (Jammu and Kashmir | Omar Abdullah | Rahul Gandhi | Sonia Gandhi)
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ವಿಶ್ವಾಸ ಮತವನ್ನು ಖರೀದಿ ಮಾಡಿದ್ದಾರೆ ಎಂಬ ಆರೋಪಗಳು ನಿಜವೆಂದು ನನಗನ್ನಿಸುತ್ತಿಲ್ಲ. ಆದರೂ ಈ ಕುರಿತು ತನಿಖೆ ನಡೆಯಬೇಕು ಎಂದು ಬಯಸಿದ್ದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಪ್ರಧಾನ ಮಂತ್ರಿ ಅಥವಾ ಸೋನಿಯಾ ಗಾಂಧಿಯಂತಹ ಉನ್ನತ ಸ್ಥಾನಗಳಲ್ಲಿರುವವರು ಈ ರೀತಿಯಾಗಿ ಮತಗಳನ್ನು ಖರೀದಿಸುವ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ನಂಬುವುದಿಲ್ಲ. ಆದರೆ ಏನು ನಡೆಯಿತು ಎಂಬುದರ ಬಗ್ಗೆ ತನಿಖೆಯ ಅಗತ್ಯ ನನಗೆ ಕಂಡು ಬಂದಿದೆ ಎಂದು ಒಮರ್ ಟ್ವಿಟ್ಟರ್ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.

ಯುಪಿಎ ಸರಕಾರಕ್ಕೆ ತನ್ನ ಬೆಂಬಲವನ್ನು ಪುನರುಚ್ಛರಿಸಿರುವ ಅವರು, 2008ರ ವಿಶ್ವಾಸ ಮತ ಸಂದರ್ಭದಲ್ಲಿ ತನ್ನನ್ನು ರಾಹುಲ್ ಗಾಂಧಿ ಸಂಪರ್ಕಿಸಿರಲಿಲ್ಲ. ಬದಲಿಗೆ ನಾನೇ ಸಂಪರ್ಕಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜತೆ ನಡೆಸಿದ ಮಾತುಕತೆ ನೆನಪಿದೆ. ಆದರೆ ರಾಹುಲ್ ಗಾಂಧಿ ಜತೆಗಿನ ಮಾತುಕತೆ ನಿರ್ದಿಷ್ಟವಾಗಿ ನೆನಪಿಲ್ಲ. ಆದರೂ, ನಮ್ಮ ನ್ಯಾಷನಲ್ ಕಾನ್ಫರೆನ್ಸ್ ಬೆಂಬಲದ ಕುರಿತು ರಾಹುಲ್ ಜತೆ ನಡೆಸಿರುವ ಮಾತುಕತೆ ಬಗ್ಗೆ ಹೇಳುವುದಾದರೆ, ಅವರನ್ನು ಸಂಪರ್ಕಿಸಿದ್ದು ನಾನೇ. ನಮ್ಮ ಬೆಂಬಲ ನಿಮಗಿರುತ್ತದೆ. ಭಾರತಕ್ಕೆ ಪರಮಾಣು ಒಪ್ಪಂದದ ಅಗತ್ಯವಿರುವುದರಿಂದ ಸರಕಾರವನ್ನು ಉಳಿಸಲು ನಾನು ಬಯಸಿದ್ದೆ ಎಂದು ಪತ್ರಕರ್ತರಿಗೆ ಒಮರ್ ತಿಳಿಸಿದರು.

ಈ ಬಗ್ಗೆ ಶುಕ್ರವಾರ ಮತ್ತಷ್ಟು ಮಾತನಾಡಿರುವ ಒಮರ್ ಅಬ್ದುಲ್ಲಾ, ನನ್ನ ಚಿಂತನೆ-ನಿಲುವುಗಳು ಏನಿದೆಯೋ, ಅದನ್ನೇ ನಾನು ಜುಲೈ 22ರಂದು ಮಹತ್ವದ ವಿಶ್ವಾಸ ಮತದ ಸಂದರ್ಭದಲ್ಲಿ ಸಂಸತ್ತಿನಲ್ಲಿ ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೆ. ಸರಕಾರದ ಬೆಂಬಲಕ್ಕಾಗಿ ರಾಹುಲ್ ನನ್ನನ್ನು ಕೋರಿರುವ ಬಗ್ಗೆ ನನಗೆ ನೆನಪಿಲ್ಲ ಎಂದರು.

ವಿಕಿಲೀಕ್ಸ್ ರಹಸ್ಯ ದಾಖಲೆಗಳ ಪ್ರಕಾರ, ವಿಶ್ವಾಸ ಮತದ ಸಂದರ್ಭದಲ್ಲಿ ಸರಕಾರದ ಪರವಾಗಿ ಓಟು ಹಾಕಲು ಹಲವು ಸಂಸದರಿಗೆ ಲಂಚ ನೀಡಲಾಗುತ್ತದೆ. ಭಾರತ-ಅಮೆರಿಕಾ ನಡುವಿನ ಅಣು ಒಪ್ಪಂದದ ಸಂಬಂಧ ಯುಪಿಎ ಸರಕಾರ ಎದುರಿಸುತ್ತಿರುವ ವಿಶ್ವಾಸ ಮತ ಗೆಲ್ಲಲು ಕೆಲವು ಸಂಸದರಿಗೆ 50ರಿಂದ 60 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲು ಸಿದ್ಧವಾಗಿದೆ ಎಂದು ಸತೀಶ್ ಶರ್ಮಾ ಹೇಳಿದ್ದರು.

ಅನಿವಾಸಿ ಉದ್ಯಮಿ ಸಂತಾ ಛತ್ವಾಲ್ ಮತ್ತು ಇತರರ ಮೂಲಕ ಅಕಾಲಿದಳದ (8 ಸಂಸದರು) ಜತೆ ಕೆಲಸ ಕುದುರಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಇತರರು ಯತ್ನಿಸಿದ್ದರು. ಆದರೆ ಅದು ಕೈಗೊಡಲಿಲ್ಲ. ಶಿವಸೇನೆಯನ್ನು (12 ಸಂಸದರು) ಮತದಾನದಿಂದ ದೂರ ಉಳಿಸುವ ಸಂಬಂಧ ಪ್ರಚೋದಿಸಲಾಗುತ್ತಿದೆ. ಒಟ್ಟಾರೆ ಈ ಸಂಬಂಧ ಹಲವು ವಿಭಾಗಗಳಲ್ಲಿ ಯತ್ನಗಳು ಮುಂದುವರಿದಿವೆ. ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ಓಮರ್ ಅಬ್ದುಲ್ಲಾ ಜತೆ ಕೆಲಸ ಮಾಡುತ್ತಿದ್ದಾರೆ ಎಂದೂ ಶರ್ಮಾ ಅಮೆರಿಕಾ ರಾಯಭಾರಿಗೆ ಹೇಳಿದ್ದರು.
ಇವನ್ನೂ ಓದಿ