ಊರಿಗೆ ಬಂದ ನಾರಿ ನೀರಿಗೆ ಬರದೇ ಇರುತ್ತಾಳೆಯೇ ಎನ್ನುವುದು ನಿಜವಾಗಿದೆ. ಇದುವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಇಬ್ಬಂದಿತನವನ್ನು ಬಯಲು ಮಾಡುತ್ತಾ ಬಂದ ವಿಕಿಲೀಕ್ಸ್ ದಾಖಲೆಗಳು, ಈಗ ಪ್ರತಿಪಕ್ಷ ಬಿಜೆಪಿಯನ್ನು ಬೆನ್ನತ್ತುತ್ತಿದೆ. ಅದರ ಮೊದಲ ಅಂಗವೇ ಭಾರತ-ಅಮೆರಿಕಾ ನಡುವಿನ ಪರಮಾಣು ಒಪ್ಪಂದ.
ತಾನು ಅಮೆರಿಕಾವನ್ನು ಸಾರ್ವಜನಿಕವಾಗಿ ಟೀಕಿಸುತ್ತಿರುವುದು ಯುಪಿಎ ಸರಕಾರದ ವಿರುದ್ಧ ರಾಜಕೀಯ ಲಾಭ ಪಡೆದುಕೊಳ್ಳಲು. ಹಾಗಾಗಿ ನೀವೇನೂ ಹೆದರಬೇಕಾಗಿಲ್ಲ. ನಾವು ಅಧಿಕಾರಕ್ಕೆ ಬಂದಾಗ ಭಾರತ-ಅಮೆರಿಕಾ ಅಣು ಒಪ್ಪಂದಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದರು ಎಂದು ಅಮೆರಿಕಾ ರಾಯಭಾರಿ ಹೇಳಿರುವುದನ್ನು 'ವಿಕಿಲೀಕ್ಸ್' ಬಹಿರಂಗಪಡಿಸಿದೆ.
ವಿಕಿಲೀಕ್ಸ್ ಈ ರಹಸ್ಯ ದಾಖಲೆಯನ್ನು ಪ್ರಕಟಿಸಿರುವುದು 'ದಿ ಹಿಂದೂ' ಆಂಗ್ಲ ಪತ್ರಿಕೆ.
ಬಿಜೆಪಿ ಮೇಲೆ ಆರೋಪಗಳು ಬರುತ್ತಿದ್ದಂತೆ ಎಚ್ಚರಗೊಂಡಿರುವ ಕಾಂಗ್ರೆಸ್ ನಿರೀಕ್ಷೆಯಂತೆ ವಾಗ್ದಾಳಿ ನಡೆಸಿದೆ. ಇತ್ತೀಚಿನ ಕೆಲವು ದಿನಗಳಿಂದ ಸರಕಾರದ ವಿರುದ್ಧ ಮುಗಿ ಬೀಳುತ್ತಿರುವ ಬಿಜೆಪಿ ಸಂಸತ್ ಕಲಾಪಕ್ಕೆ ವಿನಾಕಾರಣ ಅಡ್ಡಿಪಡಿಸುತ್ತಿದೆ. ಇದೇ ನೀತಿಯನ್ನು ಆ ಪಕ್ಷವು ಅಳವಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ.
ಆದರೆ ಬಿಜೆಪಿ ಇಬ್ಬಂದಿತನ ಆರೋಪಗಳನ್ನು ನಿರಾಕರಿಸಿದೆ. ಪ್ರತಿಪಕ್ಷದ ನಿಲುವು ಸ್ಪಷ್ಟವಾಗಿ ಇರುವುದರಿಂದಲೇ ಸರಕಾರವು ನಾಗರಿಕ ಪರಮಾಣು ಬಾಧ್ಯತಾ ಮಸೂದೆಯಲ್ಲಿ 16 ತಿದ್ದುಪಡಿಗಳನ್ನು ಮಾಡಬೇಕಾಯಿತು ಎಂದು ತೇಪೆ ಹಚ್ಚಲು ಯತ್ನಿಸಿದೆ.
ನೀವು ತಲೆಬಿಸಿ ಮಾಡಬೇಡಿ... ಹೀಗೆಂದು ಅಮೆರಿಕಾ ರಾಯಭಾರಿ ರಾಬರ್ಟ್ ಬ್ಲೇಕ್ ಅವರಿಗೆ ಹೇಳಿರುವುದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶೇಷಾದ್ರಿ ಚಾರಿ. ಹೇಳಿರುವುದು 2005ರ ಡಿಸೆಂಬರ್ 28ರಂದು. ಅದೇ ದಿನ ಬ್ಲೇಕ್ ಅವರು ಶೇಷಾದ್ರಿ ಹೇಳಿಕೆಯನ್ನು ಅಮೆರಿಕಾಕ್ಕೆ ರವಾನಿಸಿದ್ದರು.
2005ರ ಡಿಸೆಂಬರ್ 26 ಮತ್ತು 27ರಂದು ಮುಂಬೈಯಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಯುಪಿಎ ಸರಕಾರದ ವಿದೇಶಾಂಗ ನೀತಿಯನ್ನು ಟೀಕಿಸಲಾಗಿತ್ತು. ಬಳಿಕ ಪಕ್ಷವು ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಆದರೆ ಈ ಬಗ್ಗೆ ಅಮೆರಿಕಾ ರಾಯಭಾರಿ ಜತೆ ಖಾಸಗಿಯಾಗಿ ಮಾತನಾಡಿದ್ದ ಶೇಷಾದ್ರಿ, ಇದು 'ನಮ್ಮ ರಾಜಕೀಯ ಸಾಧನ'ವಷ್ಟೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದರು.
ನಮ್ಮ ಪಕ್ಷವು ಅಂಗೀಕರಿಸಿರುವ ವಿದೇಶಾಂಗ ನೀತಿ ಗೊತ್ತುವಳಿ, ಅದರಲ್ಲೂ ಅಮೆರಿಕಾದ ಜತೆಗಿನ ಸಂಬಂಧಗಳ ಬಗೆಗಿನ ಕುರಿತಾದ ವಿವರಣೆಗಳುಳ್ಳ ಭಾಗದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅದು ಯುಪಿಎ ಸರಕಾರದ ವಿರುದ್ಧ ರಾಜಕೀಯ ಲಾಭ ಪಡೆದುಕೊಳ್ಳಲು ನಾವು ಅನುಸರಿಸುತ್ತಿರುವ ಸಾಮಾನ್ಯ ನಡೆ ಎಂದಿದ್ದರು.
ಈ ಹೇಳಿಕೆ ಪ್ರತಿಧ್ವನಿಸುವ ರೀತಿಯ ಮಾತು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಅವರಿಂದಲೂ ಬಂದಿತ್ತು. ಬಿಜೆಪಿಯು ಭಾರತ-ಅಮೆರಿಕಾ ಸಂಬಂಧದ ಕುರಿತು ವಾಸ್ತವದಲ್ಲಿ ಅಸಮಾಧಾನಗೊಂಡಿಲ್ಲ. ಆದರೆ ಭಾರತ ಮತ್ತು ಅಮೆರಿಕಾ ಸರಕಾರಗಳ ನಡುವಿನ ಪರಮಾಣು ನೀತಿಯ ಯಾವುದೇ ಒಪ್ಪಂದಗಳು ಹೆಚ್ಚೆಚ್ಚು ಮಾಹಿತಿಗಳನ್ನು ಒದಗಿಸುವಂತಿರಬೇಕು ಎಂದು ಜಾವಡೇಕರ್ ಹೇಳಿದ್ದರು.
ಇದನ್ನು ಕೂಡ ಅಮೆರಿಕಾ ರಾಯಭಾರಿ ತನ್ನ ದಾಖಲೆಯಲ್ಲಿ ನಮೂದು ಮಾಡಿದ್ದರು. ಇವೆರಡನ್ನೂ ಒಟ್ಟು ಮಾಡಿ ವಿಶ್ಲೇಷಣೆ ಮಾಡಿದ್ದ ಬ್ಲೇಕ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಂತಹ ವಿಚಾರಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ ಎಂದು ಹೇಳಿದ್ದರು.