ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಲಿತ ಮುಸ್ಲಿಂ, ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಪಟ್ಟ ಅಸಾಧ್ಯ? (Dalit Muslims | Dalit Christians | Scheduled Castes | Manmohan Singh)
ಹಿಂದೂ ಧರ್ಮದಿಂದ ಕ್ರೈಸ್ತ ಮತ್ತು ಮುಸಲ್ಮಾನ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಿಂದೇಟು ಹಾಕುತ್ತಿದೆ. ಇದಕ್ಕಿರುವ ಕಾರಣ, ಮತಾಂತರಗೊಂಡ ನಂತರವೂ ತಾರತಮ್ಯ-ಅಸ್ಪ್ರಶ್ಯತೆ ಮುಂದುವರಿದೆ ಎಂಬುದನ್ನು ತೋರಿಸಲು ಪುರಾವೆ ಬೇಕೆನ್ನುವುದು!

ಹಿಂದೂ ಧರ್ಮದಲ್ಲಿ ನಮ್ಮನ್ನು ಅಸ್ಪ್ರಶ್ಯರನ್ನಾಗಿ ನೋಡಲಾಗುತ್ತಿದೆ ಎಂಬ ಕಾರಣವನ್ನು ಮುಂದೊಡ್ಡಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಳ್ಳುವ ದಲಿತರು, ಅಲ್ಲೂ ತಮ್ಮ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಹೇಳಬೇಕು ಮತ್ತು ಅದಕ್ಕೆ ಪುರಾವೆ ಒದಗಿಸಬೇಕು. ಹಾಗೆ ಮಾಡಿದಲ್ಲಿ, ಅವರಿಗೆ ಪರಿಶಿಷ್ಟ ಜಾತಿಯಲ್ಲಿ ಸ್ಥಾನ ಒದಗಿಸಬಹುದು ಎನ್ನುವುದು ಕೇಂದ್ರದ ಅಭಿಪ್ರಾಯ.

ಹಿಂದೂಗಳು/ಸಿಖ್ಖರಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಸೀಮಿತಗೊಳಿಸಿರುವ ಸಾಂವಿಧಾನಿಕ ಕರಾರು ತಾರತಮ್ಯದಿಂದ ಕೂಡಿದೆ ಎಂಬ ವಾದವನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿ ತೀರ್ಪು ನೀಡಿರುವುದನ್ನು ಇದಕ್ಕೆ ಕೇಂದ್ರ ಕಾನೂನು ಸಚಿವಾಲಯವು ಉದಾಹರಣೆಯಾಗಿ ತೋರಿಸುತ್ತಿದೆ. ಇದೇ ಹೆದರಿಕೆಯಿಂದ ಕೇಂದ್ರವು ಮತಾಂತರಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಹೆದರುತ್ತಿದೆ.

ಸಂವಿಧಾನದ ಮೂರನೇ ಪರಿಚ್ಛೇದದ (ಪರಿಶಿಷ್ಟ ಜಾತಿ) ಪ್ರಕಾರ, ಹಿಂದೂ ಧರ್ಮದ ಹೊರತು ಬೇರೆ ಯಾವುದೇ ಧರ್ಮದ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ಪರಿಗಣನೆ ಮಾಡಬಾರದು. ಇದು ಮೂಲ ಸಂವಿಧಾನದಲ್ಲಿರುವ ಕಟ್ಟಳೆ. ಆದರೆ ಇದಕ್ಕೆ ನಂತರ ತಿದ್ದುಪಡಿ ಮಾಡಿ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಸೇರ್ಪಡೆ ಮಾಡಲಾಯಿತು.

ಪ್ರಸಕ್ತ ಎದುರಾಗಿರುವ ಸಮಸ್ಯೆಗೆ ಇರುವ ಪರಿಹಾರವೆಂದರೆ ಸಂವಿಧಾನದ ಮೂರನೇ ಪರಿಚ್ಛೇದವನ್ನೇ ರದ್ದು ಮಾಡುವುದು. ಇದೇ ಒತ್ತಾಯವನ್ನು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮುಂತಾದವರು ಮಾಡುತ್ತಿದ್ದಾರೆ. ಇನ್ನೊಂದು ಇರುವ ಪರಿಚ್ಛೇದದಲ್ಲಿನ ಪರಿಶಿಷ್ಟ ಜಾತಿಗಳಿಗೆ ಮತಾಂತರಿಗಳನ್ನೂ ಸೇರಿಸುವುದು.

ಇದೇ ನಿಟ್ಟಿನಲ್ಲಿ ಕೇಂದ್ರವೂ ಮುಂದುವರಿಯುವ ಚಿಂತನೆಯಲ್ಲಿದೆ. ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ ಇದಕ್ಕಿರುವ ಮಾರ್ಗ. ಆದರೆ ಅದು ಸುಲಭವಲ್ಲ. ಸಂವಿಧಾನವನ್ನು ಯಾವುದೋ ಕಾರಣ ನೀಡಿ ತಿದ್ದುಪಡಿ ಮಾಡಲಾಗದು. ಅದಕ್ಕೊಂದು ಪ್ರಬಲ ಕಾರಣ ಬೇಕು. ಆ ಕಾರಣ ಹುಡುಕಲು ಹೋದಾಗ ಸಿಕ್ಕಿರುವುದೇ, ಮತಾಂತರವಾದ ಮೇಲೂ ಅಸ್ಪ್ರಶ್ಯತೆ ಮುಂದುವರಿದಿದೆ ಎನ್ನುವುದು.

ಈ ಕಾರಣಕ್ಕೆ ಸ್ಪಷ್ಟ ಪುರಾವೆಯನ್ನು ಒದಗಿಸಲು ಸಾಧ್ಯವಾದರೆ, ತಿದ್ದುಪಡಿ ಯೋಚನೆ ಮಾಡಬಹುದು. ಈ ವಿಚಾರ ಪ್ರಸಕ್ತ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ಯಾವುದೂ ಹೇಳಿದಷ್ಟು ಸುಲಭವಿಲ್ಲ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಈಗ ಇರುವ ಧರ್ಮಗಳು ಹಿಂದೂ, ಸಿಖ್ ಮತ್ತು ಬೌದ್ಧ ಮಾತ್ರ. ಸಂವಿಧಾನಕ್ಕೆ ತಿದ್ದುಪಡಿ ತಂದರೆ, ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರನ್ನು ಸೇರ್ಪಡೆಗೊಳಿಸಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ಎದುರಾಗುವ ಇನ್ನೊಂದು ಸಮಸ್ಯೆ ಸರಕಾರಿ ಉದ್ಯೋಗದಲ್ಲಿನ ಮೀಸಲಾತಿ. ಪ್ರಸಕ್ತ ಇರುವ ಶೇ.15ರ ಮೀಸಲಾತಿಯಿಂದ ಅವರು ವಂಚಿತರಾಗಬಹುದು. ಇದಕ್ಕೂ ದಲಿತರ ವಿರೋಧವಿದೆ.

ಇಷ್ಟೆಲ್ಲ ಗೋಜಲುಗಳಿರುವುದರಿಂದ, ಸದ್ಯಕ್ಕಂತೂ ಹಿಂದೂ ಧರ್ಮದಿಂದ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಪಟ್ಟ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಇವನ್ನೂ ಓದಿ