ರಾಹುಲ್ ಗಾಂಧಿ ಒಬ್ಬ 'ವೈಯಕ್ತಿಕ ಸಮಸ್ಯೆ'ಗಳಿಂದ ಬಳಲುತ್ತಿರುವ ವ್ಯಕ್ತಿ ಮತ್ತು ಆತ ಯಾವತ್ತೂ ಈ ದೇಶದ ಪ್ರಧಾನ ಮಂತ್ರಿಯಾಗಲಾರ ಎಂದು ಖ್ಯಾತ ಪತ್ರಕರ್ತರೊಬ್ಬರು ಹೇಳಿರುವುದನ್ನು ಉಲ್ಲೇಖಿಸಿರುವ ಅಮೆರಿಕಾ ರಾಯಭಾರಿ, ತನ್ನದೇ ಪ್ರತಿಕ್ರಿಯೆಯನ್ನು ಬರೆಯುವಾಗ ಕಾಂಗ್ರೆಸ್ ಯುವ ನಾಯಕನನ್ನು ಹೊಗಳಿದ್ದಾರೆ.
ಇದು ಕೂಡ ವಿಕಿಲೀಕ್ಸ್‌ಗೆ ಸಿಕ್ಕಿರುವ ಅಮೆರಿಕಾಕ್ಕೆ ಸಂಬಂಧಪಟ್ಟ ರಹಸ್ಯ ದಾಖಲೆ. 03-03-2005ರಂದು ನವದೆಹಲಿಯ ಅಮೆರಿಕಾ ರಾಯಭಾರ ಕಚೇರಿಯಿಂದ ಡೇವಿಡ್ ಮುಲ್ಫೋರ್ಡ್ ಈ ದಾಖಲೆಯನ್ನು ಅಮೆರಿಕಾಕ್ಕೆ ರವಾನಿಸಿದ್ದರು. ಅದೀಗ 'ದಿ ಹಿಂದೂ' ಆಂಗ್ಲಪತ್ರಿಕೆಯ ಮೂಲಕ ಬಹಿರಂಗವಾಗಿದೆ.
ಪತ್ರಕರ್ತ ಹೇಳಿರುವುದೇನು? 2005ರ ಮಾರ್ಚ್ 1ರಂದು ಜನಪ್ರಿಯ ಅಂಕಣಕಾರ, ರಾಜಕೀಯ ವಿಶ್ಲೇಷಕ, ಪತ್ರಕರ್ತ ಸಯೀದ್ ನಖ್ವಿ ಅವರ ಜತೆ ಅಮೆರಿಕಾ ರಾಯಭಾರ ಕಚೇರಿಯ ಸಿಬ್ಬಂದಿ ಪೊಲಾಫ್ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಗ್ಗೆ ನಖ್ವಿಯವರು ಮಾತನಾಡಿದ್ದರು. ಅದನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ, ನಖ್ವಿ ಮಾತುಗಳಲ್ಲೇ ಓದಿ.
'ನಾನು ರಾಹುಲ್ ಗಾಂಧಿ ತಂದೆ, ರಾಜೀವ್ ಗಾಂಧಿಯವರ ಖಾಸಗಿ ಗೆಳೆಯನಾಗಿದ್ದವನು. ಆರಂಭದಲ್ಲಿ ರಾಹುಲ್ ಗಾಂಧಿಯನ್ನು ಉತ್ತರಾಧಿಕಾರಿಯನ್ನಾಗಿ ಸೋನಿಯಾ ಗಾಂಧಿ ಬಿಂಬಿಸಿದಾಗ ನನಗೆ ಸಂತೋಷವಾಗಿತ್ತು. ಆದರೆ ಅದು ಸುಳ್ಳಾಯಿತು'
'ರಾಹುಲ್ ಗಾಂಧಿ ಹಲವು ಕಾರಣಗಳಿಂದಾಗಿ ಪ್ರಧಾನ ಮಂತ್ರಿ ಆಗಲಾರರು ಎಂದು ಸೋನಿಯಾ ಗಾಂಧಿ ಸುತ್ತ ಇರುವವರು ಸೇರಿದಂತೆ ಕಾಂಗ್ರೆಸ್‌ನ ಹಲವು ಮಂದಿ ಅಂದುಕೊಳ್ಳುತ್ತಿದ್ದಾರೆ. ಭಾವನಾತ್ಮಕ ಅಥವಾ ಮನೋವೈಜ್ಞಾನಿಕ ಸ್ವರೂಪಗಳ ವೈಯಕ್ತಿಕ ಸಮಸ್ಯೆಗಳಿಂದ ರಾಹುಲ್ ಗಾಂಧಿ ಬಳಲುತ್ತಿದ್ದಾರೆ. ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲು ಇದೇ ಸಾಕು'
'ಗಾಂಧಿ ಕುಟುಂಬದ ಗಟ್ಟಿ ನೆಲೆಯಾಗಿರುವ ಅಮೇಠಿಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ರಾಹುಲ್ ಸಂಸದರಾಗಿಯೂ ವಿಫಲರಾಗಿದ್ದಾರೆ ಎಂದು ನನ್ನ ಕಾಂಗ್ರೆಸ್ ಸ್ನೇಹಿತರು ಹೇಳುತ್ತಿದ್ದಾರೆ. ಗಾಂಧಿ ಕುಡಿ ರಾಹುಲ್ ಅವರನ್ನು ಬಳಸಿಕೊಂಡು ಉತ್ತರ ಪ್ರದೇಶದಲ್ಲಿ ಚೇತರಿಕೆ ಕಾಣುವ ಭರವಸೆ ಕಾಂಗ್ರೆಸ್ಸಿನದ್ದಾಗಿತ್ತು. ಆದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವುದರಿಂದ, ಅದನ್ನೀಗ ಮರೆತು ಬಿಟ್ಟಿದೆ'
'ಗಾಂಧಿ ಕುಟುಂಬವು ರಾಹುಲ್ ಗಾಂಧಿಗಿಂತ ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ರಾಜಕೀಯಕ್ಕೆ ತರುವ ಬಗ್ಗೆ ಒಲವು ಹೊಂದಿತ್ತು. ಅದಕ್ಕಿರುವ ಕಾರಣ ಆಕೆ ಜಾಣೆ ಮತ್ತು ಹೆಚ್ಚಿನ ಅರಿವು ಹೊಂದಿರುವುದು. ಆದರೆ ಸೋನಿಯಾ ಗಾಂಧಿ ಎಲ್ಲಾ ಭಾರತೀಯ ತಾಯಂದಿರಂತೆ, ತನ್ನ ಮಗನ ಮೇಲೆಯೇ ಹೆಚ್ಚು ಮಮಕಾರ ತೋರಿಸಿ, ಅತ್ಯುತ್ತಮ ನಿರ್ಧಾರವನ್ನು ಧಿಕ್ಕರಿಸಿ ರಾಹುಲ್ ಗಾಂಧಿಯನ್ನೇ ಉತ್ತರಾಧಿಕಾರಿಯನ್ನಾಗಿ ಆರಿಸಿದರು'
ಅಮೆರಿಕಾ ಅಭಿಪ್ರಾಯವೇನು? 'ನಾವು ಬೇರೆಲ್ಲೂ ಕೇಳದ ರೀತಿಯ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಪತ್ರಕರ್ತ ನಖ್ವಿಯವರು ನೀಡಿದ್ದಾರೆ. ಸೋನಿಯಾ ಗಾಂಧಿಯವರನ್ನು ದೂರದೃಷ್ಟಿಯುಳ್ಳ ನಾಯಕಿ ಎಂದು ಬಣ್ಣಿಸುತ್ತಿರುವ ನಮ್ಮ ಕಾಂಗ್ರೆಸ್‌ನ ಮೂಲಗಳು, ಇದೇ ಮಾತನ್ನು ರಾಹುಲ್ ಗಾಂಧಿಯವರಿಗೂ ಹೇಳುತ್ತಿವೆ'
'ರಾಜಕೀಯದಲ್ಲಿರುವ ಸಮಕಾಲೀನರಂತೆ ವರ್ತಿಸದ ರಾಹುಲ್ ಗಾಂಧಿ ದೆಹಲಿಯ ಸಾಮಾಜಿಕ ಸಂಪ್ರದಾಯಗಳನ್ನು ಧಿಕ್ಕರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಂತೂ ತೀರಾ ಸಾಮಾನ್ಯ ವ್ಯಕ್ತಿಯಂತೆ ಅವರು ಗುರುತಿಸಿಕೊಂಡದ್ದನ್ನು ನಾವು ನೋಡಿದ್ದೇವೆ'
'ರಾಹುಲ್ ಬಗ್ಗೆ ಪಕ್ಷದೊಳಗೆ ಅತೃಪ್ತಿ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತಿರುವ ಹೊರತಾಗಿಯೂ ಯುವ ಕಾಂಗ್ರೆಸ್ ತರಬೇತಿ ಶಿಬಿರಗಳಲ್ಲಿ ಅವರು ಪಾಲ್ಗೊಂಡಿರುವುದು ಮತ್ತು ಅವರ ಚಟುವಟಿಕೆಗಳು ಮಾಧ್ಯಮಗಳಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಅವರನ್ನು ಯುವ ಭಾರತದ ನಾಯಕ ಮತ್ತು ಜನನಾಯಕನಾಗಿ ಹೊರ ಹೊಮ್ಮುತ್ತಿರುವ ವ್ಯಕ್ತಿ ಎಂದು ಬಣ್ಣಿಸಲಾಗುತ್ತಿದೆ'
ಕೋಲಾ ಉತ್ಪನ್ನಗಳಲ್ಲಿನ ಕ್ರಿಮಿನಾಶಕ ಅಂಶಗಳ ಕುರಿತು ಚರ್ಚೆ ನಡೆಸಿದರೂ, ಭಾರತ ಸರಕಾರದ ಜಾಗತೀಕರಣ ನೀತಿ ಮತ್ತು ಆರ್ಥಿಕ ಸುಧಾರಣೆ ನೀತಿಗಳನ್ನು ಗಮನದಲ್ಲಿಟ್ಟುಕೊಂಡು, ಕೋಲಾ ಫ್ಯಾಕ್ಟರಿಗಳನ್ನು ಮುಚ್ಚುವುದನ್ನು ವಿರೋಧಿಸಿದವರು ರಾಹುಲ್ ಗಾಂಧಿ. ಈ ರೀತಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ರಾಹುಲ್ ಗಾಂಧಿ ಬಗ್ಗೆ ನಖ್ವಿಯವರು ಹೇಳುವಂತೆ ನಾವು ಈಗಲೇ ಅಂತಿಮ ಮೊಳೆ ಹೊಡೆಯಲು ಸಿದ್ಧರಾಗಿಲ್ಲ ಎಂದು ಅಮೆರಿಕಾ ರಾಯಭಾರಿಗಳು ತಮ್ಮ ದೇಶಕ್ಕೆ ಬರೆದಿದ್ದರು.