ಮಗ ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ, ಮೊಮ್ಮಗ ಯುವಸೇನೆಯ ಅಧ್ಯಕ್ಷ, ತಾನು ಸಂಸ್ಥಾಪಕ -- ಆದರೂ ಕಾಂಗ್ರೆಸ್‌ನ ಕುಟುಂಬ ರಾಜಕೀಯವನ್ನು ಬಾಳ್ ಠಾಕ್ರೆ ಸಹಿಸುವುದಿಲ್ಲವಂತೆ. ಇದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಂಶ ರಾಜಕಾರಣವನ್ನು ಮಾಡುವ ಮೂಲಕ ಇಡೀ ದೇಶದ ರಾಜಕಾರಣವನ್ನೇ ಕಾಂಗ್ರೆಸ್ ಹಾಳು ಮಾಡುತ್ತಿದೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ'ಕ್ಕೆ ನೀಡಿರುವ ಸಂದರ್ಶನದಲ್ಲಿ ಠಾಕ್ರೆ ಟೀಕಿಸಿದ್ದಾರೆ.
ಬಾಳ್ ಠಾಕ್ರೆ 1966ರಲ್ಲಿ ಅಸ್ತಿತ್ವಕ್ಕೆ ತಂದ ಶಿವಸೇನೆಯ ಕಾರ್ಯಕಾರಿ ಅಧ್ಯಕ್ಷ ಅವರ ಪುತ್ರ ಉದ್ಧವ್ ಠಾಕ್ರೆ. ಮೊಮ್ಮಗ ಆದಿತ್ಯ ಠಾಕ್ರೆ (ಉದ್ಧವ್ ಠಾಕ್ರೆ ಮಗ) ಶಿವಸೇನೆಯ ಯುವವಾಹಿನಿ 'ಯುವಸೇನೆ'ಯ ಅಧ್ಯಕ್ಷ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನೂ ತನ್ನ ಸಂದರ್ಶನದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಠಾಕ್ರೆಯವರು, ಆಕೆ ತನ್ನ ಹೆಸರಿನಲ್ಲಿ ಯಾವೊಂದು ಸಾಧನೆಯನ್ನೂ ಹೊಂದಿಲ್ಲ ಎಂದಿದ್ದಾರೆ.
ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ ಈ ದೇಶದ ಪೀಡೆ. ಭ್ರಷ್ಟಾಚಾರದಿಂದ ಮುಳುಗಿರುವ ಮತದಾನ ಪ್ರಕ್ರಿಯೆಯನ್ನು ಬದಲಾಯಿಸಬೇಕಾದ ಅಗತ್ಯವಿದೆ. ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಕುರಿತು ಕೂಡ ನಮ್ಮ ಆಕ್ಷೇಪವಿದೆ. ಇಲ್ಲಿ ಸಾಕಷ್ಟು ಮೋಸಗಳು ನಡೆಯುತ್ತಿವೆ. ನಮಗೆ ವಿದ್ಯುನ್ಮಾನ ಮತ ಯಂತ್ರ ಬೇಡ. ನಾವು ಹಿಂದಿನಂತೆ ಬ್ಯಾಲೆಟ್ ಪೇಪರ್ ಮೇಲೆ ಮತ ಚಲಾಯಿಸುತ್ತೇವೆ ಎಂದು ಒಲವು ತೋರಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಗಮನಿಸಿದಾಗ ರಾಜಕೀಯಕ್ಕೆ ಬಂದುದಕ್ಕೆ ಪಶ್ಚಾತಾಪವಿದೆಯೇ ಎಂಬ ಪ್ರಶ್ನೆಗೆ, ನಾನು ರಾಜಕೀಯದಲ್ಲಿಲ್ಲ. ನಾನೊಬ್ಬ ರಾಜಕೀಯ ವ್ಯಂಗ್ಯ ಚಿತ್ರಕಾರ ಎಂದು ಠಾಕ್ರೆ ಹೇಳಿಕೊಂಡಿದ್ದಾರೆ.
ಈಗಿನ ಪರಿಸ್ಥಿತಿಯನ್ನು ನೋಡಿದಾಗ ಕೆರಳುತ್ತದೆ. ಆದರೆ ನನ್ನ ಕೈಗಳು ಈ ಹಿಂದಿನಂತೆ ಚಟುವಟಿಕೆಯಿಂದ ಕೂಡಿಲ್ಲ. ನನಗೆ ವ್ಯಂಗ್ಯ ಚಿತ್ರಗಳನ್ನು ಬಿಡಿಸುವುದು ಸಾಧ್ಯವಾಗುತ್ತಿಲ್ಲ. ಇಲ್ಲದೇ ಇದ್ದರೆ, ನನ್ನ ಕೋಪವನ್ನು ಕಾರ್ಟೂನ್ ಬಿಡಿಸುವ ಮೂಲಕ ಅವರ ಮೇಲೆ ತೀರಿಸಿಕೊಳ್ಳುತ್ತಿದ್ದೆ ಎಂದಿದ್ದಾರೆ.