ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲಿ ಸೋನಿಯಾ ಅಳಿಯ ವಾದ್ರಾ, ಚಿದಂಬರಂ? (Janata Party | Subramanian Swamy | P Chidambaram | Sonia Gandhi)
2ಜಿ ಹಗರಣದಲ್ಲಿ ಸೋನಿಯಾ ಅಳಿಯ ವಾದ್ರಾ, ಚಿದಂಬರಂ?
ಚೆನ್ನೈ, ಮಂಗಳವಾರ, 22 ಮಾರ್ಚ್ 2011( 11:47 IST )
ಎರಡನೇ ತಲೆಮಾರಿನ ಮೊಬೈಲ್ ತರಂಗಾಂತರ ಹಂಚಿಕೆ ಹಗರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲ್ಗೊಂಡಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಆರೋಪಿಸಿದ್ದಾರೆ. ಹಗರಣಗಳಲ್ಲಿ ಪಾಲ್ಗೊಂಡಿರುವ ವಾದ್ರಾ, ಸೋನಿಯಾ ಗಾಂಧಿ ಮತ್ತು ಪಿ. ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿಗಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಲಿದ್ದೇನೆ ಎಂದೂ ತಿಳಿಸಿದ್ದಾರೆ.
ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರು 2ಜಿ ತರಂಗಾಂತರ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರ ವಿರುದ್ಧ ಕ್ರಮಕ್ಕಾಗಿ ಅನುಮತಿ ನೀಡಬೇಕು ಎಂದು ನಾನು ಪ್ರಧಾನ ಮಂತ್ರಿಯವರನ್ನು ಮನವಿ ಮಾಡಲಿದ್ದೇನೆ. ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ವಿರುದ್ಧವೂ ಭ್ರಷ್ಟಾಚಾರಕ್ಕಾಗಿ ಕ್ರಮ ಕೈಗೊಳ್ಳಲು ಅನುಮತಿ ಕೋರಲಿದ್ದೇನೆ ಎಂದು ಸ್ವಾಮಿ ತಿಳಿಸಿದರು.
ಸೋನಿಯಾ ಗಾಂಧಿ ವಿರುದ್ಧ ಕ್ರಮಕ್ಕಾಗಿ ಪ್ರಧಾನಿಗೆ ಮಾಡಲಿರುವ ಮನವಿ ಯಾವುದಕ್ಕೆ ಸಂಬಂಧಿಸಿದ್ದು ಎಂದು ಬಹಿರಂಗಪಡಿಸಲು ಸ್ವಾಮಿ ನಿರಾಕರಿಸಿದರು.
PTI
ಚಿದಂಬರಂ ಮೇಲಿನ ಆರೋಪವೇನು? 2ಜಿ ತರಂಗಾಂತರದ ಮಾರಾಟ ಬೆಲೆಯನ್ನು ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಜತೆ ಕುಳಿತು ಮಾತುಕತೆ ನಡೆಸಿ ನಿರ್ಧರಿಸುವಂತೆ ಆಗಿನ ವಿತ್ತ ಸಚಿವ ಚಿದಂಬರಂ ಅವರಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೂಚಿಸಿದ್ದರು.
ಅದರಂತೆ ಮಾತುಕತೆ ನಡೆಸಿದ್ದ ಚಿದಂಬರಂ-ರಾಜಾ, ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ರೀತಿಯಲ್ಲಿ 2001ರ ಹಳೆಯ ದರದಲ್ಲಿ ತರಂಗಾಂತರ ಮಾರಾಟ ಮಾಡಲು ನಿರ್ಧರಿಸಿದ್ದರು. ಅದಕ್ಕಿಂತಲೂ ಹೆಚ್ಚಾಗಿ, 2008ರವರೆಗೆ ಈ ವಿಚಾರವನ್ನು ಪ್ರಧಾನಿಗೆ ಚಿದಂಬರಂ ತಿಳಿಸದೇ ಇರುವುದು.
ಎಟಿಸಲಾಟ್ ಮತ್ತು ಟೆಲಿನಾರ್ ಎಂಬ ಎರಡು ವಿದೇಶಿ ದೂರವಾಣಿ ಕಂಪನಿಗಳಿಗೆ ಭಾರತದಲ್ಲಿ ಅವಕಾಶ ನೀಡಬಾರದು ಎಂದು ಆಗಿನ ಗೃಹಸಚಿವ ಶಿವರಾಜ್ ಪಾಟೀಲ್ ಅವರು ಚಿದಂಬರಂ ಅವರಿಗೆ ಹೇಳಿದ್ದರು.
ಪಾಕಿಸ್ತಾನದ ಐಎಸ್ಐ ಮತ್ತು ದಾವೂದ್ ಇಬ್ರಾಹಿಂ ಜತೆ ಎಟಿಸಲಾಟ್ ಸಂಬಂಧ ಹೊಂದಿರುವುದು ಹಾಗೂ ಟೆಲಿನಾರ್ ಕಂಪನಿಗೆ ಚೀನಾ ಲಿಂಕ್ ಇರುವುದು ಇದಕ್ಕೆ ಕಾರಣವಾಗಿತ್ತು. ಈ ಮಾಹಿತಿಯನ್ನು ಚಿದಂಬರಂ ಅವರು ರಾಜಾಗೂ ಹೇಳಿರಲಿಲ್ಲ. ನಂತರ ಗೃಹಸಚಿವನಾದ ಮೇಲೂ ಚಿದಂಬರಂ ಈ ಮಾಹಿತಿಯನ್ನು ಗುಪ್ತವಾಗಿಟ್ಟಿದ್ದರು.
ಇಷ್ಟೆಲ್ಲ ಆರೋಪಗಳನ್ನು ಮಾಡಿರುವ, 2ಜಿ ತರಂಗಾಂತರ ಹಗರಣ ಹೊರಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿರುವ ಸುಬ್ರಮಣ್ಯನ್ ಸ್ವಾಮಿ, ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಮನವಿ ಮಾಡುತ್ತಿಲ್ಲ. ತಮಿಳುನಾಡು ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ಬಳಿಕ ನಾನು ಮನವಿ ಮಾಡುತ್ತೇನೆ. ಆಗ ಚಿದಂಬರಂ ಅವರಿಗೆ ರಾಜೀನಾಮೆ ನೀಡಲು ಸೂಕ್ತ ಸಮಯವಾಗುತ್ತದೆ ಎಂದು ಹೇಳಿದ್ದಾರೆ.
ಸೋನಿಯಾ ಅಳಿಯನ ಮೇಲಿನ ಆರೋಪವಿದು.. ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ 'ಆಶೀರ್ವಾದ'ದಿಂದ 2ಜಿ ತರಂಗಾಂತರ ಹಂಚಿಕೆಯಲ್ಲಿ ಭಾರೀ ಲಾಭ ಪಡೆದುಕೊಂಡಿದ್ದ ಕಂಪನಿಗಳಲ್ಲಿ ಒಂದಾಗಿರುವ 'ಯುನಿಟೆಕ್' ದೂರವಾಣಿ ಕಂಪನಿಯಲ್ಲಿ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್ ವಾದ್ರಾ ಶೇ.20ರ ಪಾಲು ಹೊಂದಿದ್ದಾರೆ.
ತರಂಗಾಂತರ ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಒಪ್ಪಂದಗಳಿಂದ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ವಾದ್ರಾ ಲಾಭ ಪಡೆದುಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.