ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಮಂಗಳವಾರ ಅಪರಾಹ್ನ ಸಾಮಾಜಿಕ ಸಂಪರ್ಕತಾಣ ಟ್ವಿಟ್ಟರ್ ಮೂಲಕ ಪ್ರಸಾರಗೊಂಡು ಭಾರೀ ಆವಾಂತರ ಸೃಷ್ಟಿಸಿತು.
ವಾಸ್ತವದಲ್ಲಿ ನಿಧನರಾಗಿರುವುದು ಅಬ್ದುಲ್ ಕಲಾಂ ಅವರ ಆಪ್ತ. ಇದನ್ನು ತಪ್ಪು ಅರ್ಥ ಮಾಡಿಕೊಂಡಿದ್ದ ಲೇಖಕಿ ಶೋಭಾ ಡೇ ಟ್ವಿಟ್ಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆ ತಕ್ಷಣವೇ ಅದನ್ನು ಡಿಲೀಟ್ ಮಾಡಿ, ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿದರು.
ಮಾಜಿ ರಾಷ್ಟ್ರಪತಿ ಕಲಾಂ ಅವರ ಶೈಕ್ಷಣಿಕ ಸಲಹೆಗಾರರಾಗಿದ್ದ ಖ್ಯಾತ ಖಗೋಳ ಶಾಸ್ತ್ರಜ್ಞ ಡಾ. ಹಫೀಜ್ ಸಲೇಹ್ ಮುಹಮ್ಮದ್ ಅಲ್ಲಾದೀನ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದರು. ಅವರಿಗೆ ಹೃದಯಾಘಾತವಾಗಿತ್ತು. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಕೆಲವರು, ಕಲಾಂ ನಿಧನರಾದರು ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದರು.
ಟ್ವಿಟ್ಟರಿನಲ್ಲಿ ಕಲಾಂ ಅವರ ನಿಧನದ ಕುರಿತ ಟ್ವೀಟ್‌ಗಳು ಹರಿದಾಡುತ್ತಿದ್ದಂತೆ, ಇದು ಮೊಬೈಲುಗಳ ಮೂಲಕವೂ ಹಲವರನ್ನು ತಲುಪಿದೆ. ಇತರ ಸಾಮಾಜಿಕ ಸಂಪರ್ಕತಾಣಗಳಲ್ಲೂ ದೊಡ್ಡ ಸುದ್ದಿ-ಚರ್ಚೆಗೆ ಕಾರಣವಾಗಿದೆ.
ಈ ಗಾಳಿಸುದ್ದಿ ಟ್ವಿಟ್ಟರಿನಲ್ಲಿ ಬರುತ್ತಿದ್ದಂತೆ ಸಾವಿರಾರು ಮಂದಿ ಶೋಧ ತಾಣ ಗೂಗಲ್‌ನಲ್ಲಿ ಅಬ್ದುಲ್ ಕಲಾಂ ಕುರಿತ ಸುದ್ದಿಗಳಿಗಾಗಿ ಶೋಧ ನಡೆಸಿದರು. ಗೂಗಲ್ ಇಂಡಿಯಾ ಸರ್ಚ್‌ನಲ್ಲಿ ಇದೇ ಇಂದಿನ ಅಗ್ರ ಸರ್ಚ್ ಕೀವರ್ಡುಗಳಾಗಿದ್ದವು.
ತಪ್ಪು ಸಂದೇಶಗಳನ್ನು ರವಾನಿಸಿದ ಶೋಭಾ ಡೇ ಸೇರಿದಂತೆ ಹಲವರ ವಿರುದ್ಧ ಈಗ ಟ್ವಿಟ್ಟರಿನಲ್ಲಿ ಭಾರೀ ದೂಷಣೆಗಳು ನಡೆಯುತ್ತಿವೆ. ಕಲಾಂ ಅವರನ್ನು ಡೇ ವಿನಾಕಾರಣ ಕೊಂದರು ಎಂದು ಟೀಕಿಸಲಾಗುತ್ತಿದೆ.
ಅದೇ ಹೊತ್ತಿಗೆ ಅತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ನಕಲಿ ಖಾತೆ diggyleaks ಇದನ್ನು ತನ್ನದೇ ಆದ ರೀತಿಯಲ್ಲಿ ಲೇವಡಿ ಮಾಡಿದೆ.
'ಕಲಾಂ ಅವರ ಸಲಹೆಗಾರ ಸಾಯುವುದಕ್ಕೆ ಎರಡು ಗಂಟೆ ಮುನ್ನ ನನಗೆ ಫೋನ್ ಮಾಡಿ, ಹಿಂದೂ ಭಯೋತ್ಪಾದಕರು ಕಲಾಂ ಅವರ ಸಾವಿನ ಕುರಿತ ಗಾಳಿ ಸುದ್ದಿಯನ್ನು ಹರಡಿಸಲು ಯತ್ನಿಸಬಹುದು ಎಂದು ಹೇಳಿದ್ದರು' ಎಂದು ಕುಟುಕಲಾಗಿದೆ.