ಭಾರತೀಯ ಮುಸ್ಲಿಮರ ಬಗ್ಗೆ ನನಗೆ ಯಾವುದೇ ರೀತಿಯ ದ್ವೇಷವಿಲ್ಲ ಎಂದು ಹೇಳಿರುವ ಶಿವಸೇನೆ ವರಿಷ್ಠ ಬಾಳ್ ಠಾಕ್ರೆ, ವಿದೇಶಗಳಿಂದ ಬಂದು ಇಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವ ಮುಸ್ಲಿಮರ ಬಗ್ಗೆ ಮಾತ್ರ ನನಗೆ ಕೋಪವಿದೆ ಎಂದು ಹೇಳಿದ್ದಾರೆ.
ನನಗೆ ಭಾರತದ ಮುಸ್ಲಿಮರ ವಿರುದ್ಧ ಯಾವುದೇ ದೂರು, ವಿರೋಧ ಅಥವಾ ದ್ವೇಷವಿಲ್ಲ ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಕಟವಾಗಿರುವ ಎರಡನೇ ಭಾಗದ ಸಂದರ್ಶನದಲ್ಲಿ ಠಾಕ್ರೆ ಒತ್ತಿ ಹೇಳಿದ್ದಾರೆ.
ಅವರ ಕೋಪ ಇರುವುದು ದೇಶದ ಹೊರಗಿನಿಂದ ಬಂದು ಇಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವವರ ವಿರುದ್ಧ ಮಾತ್ರ.
ಕಳೆದ ಹಲವಾರು ತಲೆಮಾರುಗಳಿಂದ ಇಲ್ಲೇ ಬದುಕುತ್ತಿರುವ ಮುಸ್ಲಿಮರ ವಿರುದ್ಧ ನನಗೆ ಯಾವುದೇ ರೀತಿಯ ದ್ವೇಷ ಅಥವಾ ವಿರೋಧಗಳಿಲ್ಲ. ಆದರೆ ಹೊರದೇಶಗಳಿಂದ ನಮ್ಮ ದೇಶಕ್ಕೆ ನುಸುಳಿರುವವರ ಬಗ್ಗೆ ಆಕ್ಷೇಪಗಳಿವೆ. ಅವರನ್ನು ಹಿಡಿದು ಗಲ್ಲಿಗೇರಿಸಬೇಕು ಇಲ್ಲವೇ ಹೊರಗೆ ಹಾಕಬೇಕು ಎಂದು ನುಡಿದರು.
ಅವರ ಪ್ರಕಾರ ಈ ರೀತಿಯಾಗಿ ವಿದೇಶಗಳಿಂದ ನುಸುಳುತ್ತಿರುವ ಮುಸ್ಲಿಮರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರು.
ಅವರು ಹೊರ ದೇಶದಿಂದ ನಮ್ಮ ದೇಶಕ್ಕೆ ಬಂದು ನಮ್ಮ ಮುಸ್ಲಿಮರನ್ನು ಪ್ರಚೋದಿಸುತ್ತಾರೆ. ಕೊಂಕಣ ಪ್ರದೇಶದಲ್ಲಿ (ಮಹಾರಾಷ್ಟ್ರ ಕರಾವಳಿ) ಹೊರಗಿನಿಂದ ಒಳ ನುಸುಳಿರುವ ತೀವ್ರವಾದಿ ಶಕ್ತಿಗಳು ನಮ್ಮ ಕೊಂಕಣಿ ಮುಸ್ಲಿಮರನ್ನು ಬಡಿದೆಬ್ಬಿಸುತ್ತಿದ್ದಾರೆ ಮತ್ತು ಅವರನ್ನು ಹಾಳು ಮಾಡುತ್ತಿದ್ದಾರೆ. ಈ ರೀತಿಯಾಗಿ ಹೊರಗಿನಿಂದ ಬಂದ ಮುಸ್ಲಿಮರಿಗೆ ಸಹಾಯ ಮಾಡುವ ಮುಸ್ಲಿಮರನ್ನು ಕೂಡ ಸಮಾನ ತಪ್ಪಿತಸ್ಥರು ಎಂದು ಪರಿಗಣಿಸಬೇಕು ಎಂದು ಸಂದರ್ಶನದಲ್ಲಿ ಒತ್ತಾಯಿಸಿದ್ದಾರೆ.