'ಕಾಸಿಗಾಗಿ ಓಟು' ಹಗರಣದ ತನಿಖೆ ನಡೆಯುತ್ತಿರುವ ಹೊರತಾಗಿಯೂ 'ಏನೂ ಗೊತ್ತಿಲ್ಲ' ಎನ್ನುವುದಾದರೆ, ನೀವು ಪ್ರಧಾನಿ ಯಾಕಾಗಿರಬೇಕು? -- ವಿಕಿಲೀಕ್ಸ್‌ನಿಂದ ಕೆದಕಲ್ಪಟ್ಟಿರುವ ಹಗರಣದ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನೀಡಿದ ವಿವಾದಿತ ಹೇಳಿಕೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಎತ್ತಿರುವ ಪ್ರಶ್ನೆಯಿದು.
ಪ್ರತಿಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದಿದ್ದ ಪ್ರಧಾನಿ ಸಿಂಗ್, 'ಕಾಸಿಗಾಗಿ ಓಟು ಪ್ರಸಂಗವೇ ಸುಳ್ಳು, ಅಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ. ಇದಕ್ಕೆ ಜನತಾ ನ್ಯಾಯಾಲಯವೇ ಸಾಕ್ಷಿ' ಎಂದು ಸರಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ಇದನ್ನು ತೀವ್ರವಾಗಿ ವಿರೋಧಿಸಿದ್ದ ಪ್ರತಿಪಕ್ಷ, ಸಂಸತ್ತಿನ ದಾರಿ ತಪ್ಪಿಸಿದ ಆರೋಪದ ಮೇಲೆ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿತ್ತು. ಪ್ರಧಾನಿ ವಿವಾದಿತ ಹೇಳಿಕೆ ಕುರಿತು ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ.
ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತಾ ಮತ್ತು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕೋಲಾಹಲ ಎಬ್ಬಿಸಿದರು.
ರಾಜಕೀಯ ಘಾತುಕರಿಂದ ಸಂಸದರ ಖರೀದಿ... ಹೀಗೆಂದು ಆರೋಪಿಸಿರುವುದು ಸಿಪಿಐಎಂನ ಗುರುದಾಸ್ ದಾಸ್‌ಗುಪ್ತಾ. ಸಂಸತ್ತಿನ ಕೆಲವು ಸದಸ್ಯರನ್ನು ಅಪರಹರಣ ಮಾಡಿರುವುದರಿಂದ ಇದು ಸಂಸದೀಯ ಪೈರಸಿ ಪ್ರಕರಣ. ಇಲ್ಲಿ ರಾಜಕೀಯ ಪಾತಕಿಗಳ ಸಂಘಟಿತ ಗುಂಪೊಂದು ಕಾರ್ಯಾಚರಣೆ ನಡೆಸಿರುವ ಶಂಕೆಯಿದೆ ಎಂದರು.
ಪ್ರಧಾನ ಮಂತ್ರಿಯವರ ಹೇಳಿಕೆ ನಿಖರವಾಗಿತ್ತು ಮತ್ತು ಸಮರ್ಪಕವಾಗಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಸಾಮಾನ್ಯವಾಗಿ ಅವರಲ್ಲಿ ಇರದೇ ಇರುವ ಖಚಿತತೆ, ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸುವಾಗ ಇತ್ತು. ಅವರದ್ದು ಪೊಳ್ಳು ಸಮರ್ಥನೆ ಎಂದು ಆಪಾದಿಸಿದರು.
ಪ್ರಧಾನಿ ಯಾಕಾಗಿದ್ದೀರಾ?: ಸುಷ್ಮಾ ಕಿಶೋರ್ ಚಂದ್ರ ದೇವ್ ನೇತೃತ್ವದ ಸಮಿತಿಯ ತನಿಖೆಯನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಸುಷ್ಮಾ ಸ್ವರಾಜ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
'ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮಾರ್ಚ್ 17ರ ವರದಿಯೇ ಸರಕಾರದ ವಿರುದ್ಧದ ಸಾಕ್ಷಿಗೆ ಸಾಕು. ಹೆಚ್ಚಿನ ತನಿಖೆ ನಡೆಸಬೇಕು ಎಂದು ಹೇಳಿದ್ದ ಕಿಶೋರ್ ಚಂದ್ರ ಸಮಿತಿಯ ವರದಿಯನ್ನು ಪ್ರಧಾನಿ ನೋಡಬೇಕು. ಆದರೆ ಅದು ನಡೆಯಲಿಲ್ಲ. ಇನ್ನೂ ಹೆಚ್ಚಿನ ತನಿಖೆ ನಡೆಯಬೇಕು ಎಂದು ಸೋಮನಾಥ ಚಟರ್ಜಿ ತನ್ನ ಆತ್ಮಕಥೆಯಲ್ಲಿ ಬರೆದಿದ್ದರು. 2009ರ ಮಾರ್ಚ್ 22ರಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಯಿತು. ಪ್ರಧಾನ ಮಂತ್ರಿ ಇದರ ಹಿಂದಿನ ಸತ್ಯವನ್ನು ಬಯಲಿಗೆ ಎಳೆಯಬೇಕಿತ್ತು'
'ಪ್ರಕರಣದಲ್ಲಿ ಪಾಲ್ಗೊಂಡಂಡವರ ಹೆಸರನ್ನು ವಿಕಿಲೀಕ್ಸ್ ವರದಿ ಬಹಿರಂಗಪಡಿಸಿದೆ. ಸಮಿತಿಯು ತನಿಖೆಗೆ ಸಲಹೆ ನೀಡಿದೆ. ಪ್ರಕರಣವೊಂದು ದಾಖಲಾಗಿದೆ. ಈ ವಿವರಗಳನ್ನು ನಿಮಗೆ ಯಾರೂ ನೀಡಿಲ್ಲವೇ ಪ್ರಧಾನ ಮಂತ್ರಿಯವರೇ? ದೆಹಲಿ ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಟೇಪುಗಳು ನಕಲಿ ಅಲ್ಲ ಎಂದು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ಖಚಿತಪಡಿಸಿದೆ. ಇವೆಲ್ಲದರ ಬಗ್ಗೆ ಗೊತ್ತಿಲ್ಲದೆ ಪ್ರಧಾನ ಮಂತ್ರಿಯಾಗಿ ನೀವು ಹೇಗೆ ಹೇಳಿಕೆ ನೀಡಿದಿರಿ?'
'ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನ ಮಂತ್ರಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಜವಾಬ್ದಾರಿಗಳಿಂದ ಅವರು ನುಣುಚಿಕೊಳ್ಳಬಾರದು. ಏನು ನಡೆದಿದೆ ಎಂಬುದರ ಕುರಿತು ಗೊತ್ತಿಲ್ಲದೇ ಇದ್ದರೆ, ಅವರು ಯಾಕೆ ಪ್ರಧಾನಿ ಆಗಿರಬೇಕು?'
ಹೀಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿವಾದಿತ ಹೇಳಿಕೆ ಕುರಿತು ಸುಷ್ಮಾ ಸ್ವರಾಜ್ ತರಹೇವಾರಿ ತೀಕ್ಷ್ಣ ಪ್ರಶ್ನೆಗಳನ್ನೆಸೆದರು.