ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿಯಾಗೋದು ಜನ್ಮಸಿದ್ಧ ಹಕ್ಕೇ?: ಆಡ್ವಾಣಿಗೆ ಸಿಂಗ್ (Manmohan Singh | LK Advani | cash-for-vote scam | Sushma Swaraj)
ಕಾಸಿಗಾಗಿ ಓಟು ಹಗರಣದ ಕುರಿತು ತನ್ನ ವಿರುದ್ಧ ಟೀಕಿಸಿದ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿಯವರನ್ನು ತರಾಟೆಗೆ ತೆಗೆದುಕೊಂಡ ರೀತಿಯಿದು.

ಬುಧವಾರ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸುತ್ತಿದ್ದ ಅವರು ತಮ್ಮ ಎಂದಿನ ಧಾಟಿಯನ್ನು ಬಿಟ್ಟು ನೇರ ವಾಗ್ದಾಳಿಯನ್ನು ಆಯ್ದುಕೊಂಡಿದ್ದರು.

'ನಾವು ಆಕ್ರಮಣಕಾರರು ಎಂಬ ಧೋರಣೆಯನ್ನು ಪ್ರಮುಖ ಪ್ರತಿಪಕ್ಷ 2004ರಿಂದಲೇ ತಳೆದಿದೆ. ತಾನು ಪ್ರಧಾನ ಮಂತ್ರಿಯಾಗುವುದು ಜನ್ಮಸಿದ್ಧ ಹಕ್ಕು ಎಂದು ಆಡ್ವಾಣಿಯವರು ನಂಬಿದ್ದಾರೆ. ಪ್ರಧಾನಿ ಪಟ್ಟ ಸಿಗದೇ ಇರುವ ಕಾರಣದಿಂದ ಅವರು ನನ್ನನ್ನು ಕ್ಷಮಿಸುವುದೇ ಇಲ್ಲ' ಎಂದು ಪ್ರಧಾನಿ ಸಿಂಗ್ ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರ ಮೇಜುಗಳಿಂದ ಭಾರೀ ಸದ್ದು ಬಂತು.

ಆಡಳಿತ ಪಕ್ಷದ ಕರಾಡತನದ ನಡುವೆಯೇ ಮಾತು ಮುಂದುವರಿಸಿದ ಅವರು, 'ಮುಕ್ತ ಮತ್ತು ನ್ಯಾಯಸಮ್ಮತ ಚುನವಾಣೆಯಲ್ಲಿ ಭಾರತದ ಜನತೆ ನಮಗೆ ಮತ ಚಲಾಯಿಸಿದ್ದಾರೆ. ಹಾಗಾಗಿ ನೀವು ಪ್ರಧಾನಿ ಆಗಲೇ ಬೇಕೆಂದಿದ್ದರೆ ಇನ್ನು ಮೂರುವರೆ ವರ್ಷಗಳ ವರೆಗೆ ಕಾಯಿರಿ ಎಂದು ನಾನು ಆಡ್ವಾಣಿಯವರಿಗೆ ಹೇಳಲು ಬಯಸುತ್ತಿದ್ದೇನೆ' ಎಂದರು.

ಈ ರೀತಿಯಾಗಿ ಪ್ರಧಾನಿಯವರು ಪ್ರತಿಪಕ್ಷದ ಮೇಲೆ ಮುಗಿ ಬೀಳುತ್ತಿರುವುದನ್ನು ಕಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಸಿಮುಸಿ ನಗುತ್ತಿದ್ದರು. ವಿತ್ತಸಚಿವ ಪ್ರಣಬ್ ಮುಖರ್ಜಿಯವರ ಪ್ರತಿಕ್ರಿಯೆಯೂ ಇದೇ ಆಗಿತ್ತು. ಆಡ್ವಾಣಿ ಕೂಡ ಮುಗುಳ್ನಕ್ಕರು.

ವಿಕಿಲೀಕ್ಸ್ ದಾಖಲೆಗಳ ಕುರಿತು ಭಾರೀ ಕೋಲಾಹಲ ಎಬ್ಬಿಸುತ್ತಿರುವ ಪ್ರತಿಪಕ್ಷಗಳನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಕಾಸಿಗಾಗಿ ಓಟು ಹಗರಣವನ್ನು ಮತ್ತೊಮ್ಮೆ ಅಲ್ಲಗಳೆದರು. ಅಲ್ಲದೆ, ವಿಕಿಲೀಕ್ಸ್ ಹೇಳುತ್ತಿರುವ ರಾಜತಾಂತ್ರಿಕ ಸಂಪರ್ಕಗಳ ದಾಖಲೆಗಳನ್ನು ನಂಬಲಾಗದು ಎಂದರು.

ವಿಪಕ್ಷಗಳು ಮಾಡುತ್ತಿರುವುದು ಅನಗತ್ಯ ಪ್ರಲಾಪನೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಕೋಲಾಹಲ ಎಬ್ಬಿಸಲಾಗುತ್ತಿದೆ. ಅಮೆರಿಕಾ ಜತೆಗಿನ ಸಂವಹನ ಮಾಹಿತಿಗಳ ಸಾಚಾತನವೇ ಪ್ರಶ್ನಾರ್ಹವಾಗಿದೆ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿದರು.

ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ತೀಕ್ಷ್ಣ ಟೀಕೆಗಳಿಗೆ, ದ್ವಿಪದಿಗಳ ಲೇವಡಿಗೂ ಪ್ರಧಾನಿ ಸಿಂಗ್ ತಿರುಗೇಟು ನೀಡಲು ಯತ್ನಿಸಿದರು. ಪ್ರಧಾನಿ ಕೂಡ ಉರ್ದು ದ್ವಿಪದಿಯನ್ನು ಉಲ್ಲೇಖಿಸಿದರು.
ಇವನ್ನೂ ಓದಿ