'ಅಮ್ಮ' ಸವ್ವಾ ಸೇರು; ಚಿನ್ನ, ಲ್ಯಾಪ್‌ಟಾಪ್, ಮದುವೆ ಖರ್ಚು
ಚೆನ್ನೈ, ಗುರುವಾರ, 24 ಮಾರ್ಚ್ 2011( 15:56 IST )
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಗೆಲ್ಲಬೇಕು, ಗೆದ್ದು ಮುಖ್ಯಮಂತ್ರಿಯಾಗಬೇಕು ಎಂದು ಹಠಕ್ಕೆ ಬಿದ್ದಿರುವ ತಮಿಳುನಾಡಿನ ಎರಡು ರಾಜಕೀಯ ಪಕ್ಷಗಳ ಮುಖಂಡರು 'ಉಚಿತ ಕೊಡುಗೆ'ಗಳ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಡಿಎಂಕೆಯ ಕರುಣಾನಿಧಿ ಹಲವು ಕೊಡುಗೆಗಳನ್ನು ಪ್ರಕಟಿಸಿದ ಬೆನ್ನಿಗೆ ತಾನೇನು ಕಡಿಮೆಯಲ್ಲ ಎಂದು ಜಯಲಲಿತಾ ಕೊಡುಗೆಗಳ ಮೇಲೆ ಕೊಡುಗೆಗಳನ್ನು ಘೋಷಿಸಿದ್ದಾರೆ.
ಬಿಪಿಎಲ್ ಕುಟುಂಬಕ್ಕೆ ಕೇಜಿಗೆ ಒಂದು ರೂಪಾಯಿಯಂತೆ ತಿಂಗಳಿಗೆ 35 ಕೇಜಿ ಅಕ್ಕಿ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಮಹಿಳೆಯರಿಗೆ ಮಿಕ್ಸಿ ಅಥವಾ ಗ್ರೈಂಡರ್, ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ಉಚಿತ ಮುಂತಾದ ಆಶ್ವಾಸನೆಗಳನ್ನು ಮುಖ್ಯಮಂತ್ರಿ ಕರುಣಾನಿಧಿ ತನ್ನ ಪಕ್ಷದ ಪರವಾಗಿ ನೀಡಿದ್ದರು.
ಇದನ್ನು ಕೇಳಿಸಿಕೊಂಡ ಎಐಎಡಿಎಂಕೆಯ ಜಯಲಲಿತಾ, ತಾನು ಕೂಡ ಕಡಿಮೆಯಿಲ್ಲ ಎಂದು ಹಲವು ಆಶ್ವಾಸನೆಗಳನ್ನು ನೀಡಿದ್ದಾರೆ. ದೇಗುಲಗಳ ನಗರಿ ಶ್ರೀರಂಗಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಅವರು ಹಲವು ಉಚಿತ ಕೊಡುಗೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಎಐಡಿಎಂಕೆ ನೀಡಿರುವ ಆಶ್ವಾಸನೆಗಳು: * 11ನೇ ತರಗತಿಯ ನಂತರದ ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್. * ಉಚಿತ ಫ್ಯಾನ್, ಮಿಕ್ಸರ್ ಮತ್ತು (ಅಥವಾ ಅಲ್ಲ) ಗ್ರೈಂಡರ್. * ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ 20 ಲೀಟರ್ ಮಿನರಲ್ ವಾಟರ್. * ಒಂದು ರೂಪಾಯಿಯಂತೆ 20 ಕೇಜಿ ಅಕ್ಕಿ. * ಬಡ ಮಹಿಳೆಯರಿಗೆ ನಾಲ್ಕು ಗ್ರಾಂ ಚಿನ್ನದ 'ತಾಳಿ'. * ರಿಯಾಯಿತಿ ದರದಲ್ಲಿ ಕೇಬಲ್ ಟಿವಿ ಸಂಪರ್ಕ. * 58ಕ್ಕೆ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಬಸ್ ಪಾಸ್. * ಪ್ರತಿ ಟನ್ ಕಬ್ಬಿಗೆ 2,500 ರೂಪಾಯಿ ದರ. * ಪ್ರತಿಯೊಬ್ಬರಿಗೂ ವಿನೂತನ ಆರೋಗ್ಯ ವಿಮೆ. * ಶ್ರೀಲಂಕಾ ನಿರಾಶ್ರಿತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆ. * ಶಾಲಾ ಮಕ್ಕಳಿಗೆ ನಾಲ್ಕು ಸೆಟ್ ಸಮವಸ್ತ್ರ ಮತ್ತು ಬೂಟುಗಳು. * ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಮತ್ತು 12,000 ರೂಪಾಯಿ ಭತ್ಯೆ * 10ನೇ ತರಗತಿಯ ನಂತರದ ವಿದ್ಯಾಭ್ಯಾಸಕ್ಕೆ 5,000 ರೂಪಾಯಿವರೆಗೆ ಸಹಾಯಧನ. * ಬೀದಿಗೆ ಬಂದಿರುವ ವೃದ್ಧರಿಗೆ ಉಚಿತ ಆಶ್ರಯ, ಊಟ, ವೈದ್ಯಕೀಯ ಸೌಲಭ್ಯ. * 3 ಲಕ್ಷ ಬಿಪಿಎಲ್ ಕುಟುಂಬಗಳಿಗೆ 1.8 ಲಕ್ಷ ರೂ. ವೆಚ್ಚದಲ್ಲಿ 300 ಚದರ ಅಡಿಯ ಉಚಿತ ಮನೆ. * 6,000 ಕುಟುಂಬಗಳಿಗೆ ಉಚಿತ ಹಸು ವಿತರಣೆ. * ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಲಕ್ಷದವರೆಗೆ ಸಾಲ. ಅದರಲ್ಲಿ ಶೇ.75ರಷ್ಟು ಮಾತ್ರ ಮರು ಪಾವತಿ. * ಬಡ ಯುವತಿಯರ ಮದುವೆಗಾಗಿ 25,000 ರೂಪಾಯಿ. * ಡಿಪ್ಲೋಮಾ ಮಾಡಿದ ಮಹಿಳೆಯರ ಮದುವೆಗೆ 50,000 ರೂಪಾಯಿ. * ಮೀನುಗಾರರಿಗೆ ಕೆಲಸವಿಲ್ಲದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು 4,000 ರೂ. ಸಹಾಯಧನ.