ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಗರಣದಲ್ಲಿ ಚಿದಂಬರಂ; ಮತ್ತೆ ಇಕ್ಕಟ್ಟಿನಲ್ಲಿ ಪ್ರಧಾನಿ ಸಿಂಗ್‌ (Subramanian Swamy | Manmohan Singh | P. Chidambaram | 2G scam)
ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಪ್ರಕರಣದಲ್ಲಿ ಈ ಹಿಂದೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದ ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿ ಮತ್ತೊಮ್ಮೆ ಅದೇ ರೀತಿಯ ಪ್ರಸಂಗವನ್ನು ಮರುಕಳಿಸುವ ಮುನ್ಸೂಚನೆ ನೀಡಿದ್ದಾರೆ. 2ಜಿ ಹಗರಣದಲ್ಲಿ ಗೃಹಸಚಿವ ಪಿ. ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕೆಂದು ಈ ಬಾರಿ ಅವರು ಮನವಿ ಮಾಡಿದ್ದಾರೆ.

2ಜಿ ತರಂಗಾಂತರ ಪರವಾನಗಿ ನೀಡುವಾಗ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ವಿಫಲರಾಗಿರುವುದು ಮತ್ತು ರಾಜಾ ಜತೆ ಪಿತೂರಿ ನಡೆಸಿರುವ ಆರೋಪವನ್ನು ಚಿದಂಬರಂ ಮೇಲೆ ಹೊರಿಸಿರುವ ಸುಬ್ರಮಣ್ಯನ್ ಸ್ವಾಮಿ, ಅವರ ವಿರುದ್ಧ ಕ್ರಮಕ್ಕೆ ಅನುಮತಿ ನೀಡಬೇಕು ಎಂದು ಪ್ರಧಾನಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಸ್ವಾಮಿ, 2003ರ ಸಚಿವ ಸಂಪುಟದ ನಿರ್ಧಾರದ ಪ್ರಕಾರ ತರಂಗಾಂತರ ದರ ನಿಗದಿ ಮಾಡಿರುವುದು ದೂರಸಂಪರ್ಕ ಮತ್ತು ವಿತ್ತ ಸಚಿವರು ಎಂದು ಆಪಾದಿಸಿದರು.

2001ರಲ್ಲಿ ನಿಗದಿಪಡಿಸಲಾಗಿದ್ದ ದರವನ್ನೇ 2007-08ರಲ್ಲಿ ಮೆಗಾಹರ್ಟ್ಸ್‌ಗೆ ಪ್ರವೇಶ ಶುಲ್ಕ ಮತ್ತು ತರಂಗಾಂತರ ದರಗಳೆಂದು ಸಂಯೋಜಿತ ದರವನ್ನಾಗಿ ರಾಜಾ ಮತ್ತು ಚಿದಂಬರಂ ನಿಗದಿ ಮಾಡಿದ್ದರು. ಇದು 2007 ಆಗಸ್ಟ್ 28ರಂದು ಟ್ರಾಯ್ ಮಾಡಿದ್ದ ಶಿಫಾರಸಿನ ಉಲ್ಲಂಘನೆ. ಮಾರುಕಟ್ಟೆಯ ಬೆಳವಣಿಗೆಯನ್ನು ಆಧರಿಸಿ ತರಂಗಾಂತರ ದರ ಮತ್ತು ಪ್ರವೇಶ ಶುಲ್ಕವನ್ನು ಪ್ರತ್ಯೇಕವಾಗಿ ನಿಗದಿ ಮಾಡಬೇಕು ಎಂದು ಟ್ರಾಯ್ ಹೇಳಿತ್ತು ಎಂದು ಸ್ವಾಮಿ ತನ್ನ ಆರೋಪಿದರು.

ಚಿದಂಬರಂ ಮೇಲಿನ ಆಪಾದನೆಯಿದು...
2ಜಿ ತರಂಗಾಂತರದ ಮಾರಾಟ ಬೆಲೆಯನ್ನು ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಜತೆ ಕುಳಿತು ಮಾತುಕತೆ ನಡೆಸಿ ನಿರ್ಧರಿಸುವಂತೆ ಆಗಿನ ವಿತ್ತ ಸಚಿವ ಚಿದಂಬರಂ ಅವರಿಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೂಚಿಸಿದ್ದರು.

ಅದರಂತೆ ಮಾತುಕತೆ ನಡೆಸಿದ್ದ ಚಿದಂಬರಂ-ರಾಜಾ, ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ರೀತಿಯಲ್ಲಿ 2001ರ ಹಳೆಯ ದರದಲ್ಲಿ ತರಂಗಾಂತರ ಮಾರಾಟ ಮಾಡಲು ನಿರ್ಧರಿಸಿದ್ದರು. ಅದಕ್ಕಿಂತಲೂ ಹೆಚ್ಚಾಗಿ, 2008ರವರೆಗೆ ಈ ವಿಚಾರವನ್ನು ಪ್ರಧಾನಿಗೆ ಚಿದಂಬರಂ ತಿಳಿಸದೇ ಇರುವುದು.

ಎಟಿಸಲಾಟ್ ಮತ್ತು ಟೆಲಿನಾರ್ ಎಂಬ ಎರಡು ವಿದೇಶಿ ದೂರವಾಣಿ ಕಂಪನಿಗಳಿಗೆ ಭಾರತದಲ್ಲಿ ಅವಕಾಶ ನೀಡಬಾರದು ಎಂದು ಆಗಿನ ಗೃಹಸಚಿವ ಶಿವರಾಜ್ ಪಾಟೀಲ್ ಅವರು ಚಿದಂಬರಂ ಅವರಿಗೆ ಹೇಳಿದ್ದರು.

ಪಾಕಿಸ್ತಾನದ ಐಎಸ್ಐ ಮತ್ತು ದಾವೂದ್ ಇಬ್ರಾಹಿಂ ಜತೆ ಎಟಿಸಲಾಟ್ ಸಂಬಂಧ ಹೊಂದಿರುವುದು ಹಾಗೂ ಟೆಲಿನಾರ್ ಕಂಪನಿಗೆ ಚೀನಾ ಲಿಂಕ್ ಇರುವುದು ಇದಕ್ಕೆ ಕಾರಣವಾಗಿತ್ತು. ಈ ಮಾಹಿತಿಯನ್ನು ಚಿದಂಬರಂ ಅವರು ರಾಜಾಗೂ ಹೇಳಿರಲಿಲ್ಲ. ನಂತರ ಗೃಹಸಚಿವನಾದ ಮೇಲೂ ಚಿದಂಬರಂ ಈ ಮಾಹಿತಿಯನ್ನು ಗುಪ್ತವಾಗಿಟ್ಟಿದ್ದರು ಎನ್ನುವುದು ಸ್ವಾಮಿ ಆರೋಪ.

ಮತ್ತೆ ಸಂಕಟದಲ್ಲಿ ಪ್ರಧಾನಿ?
1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಹಗರಣವನ್ನು ಭಾಗಶಃ ಹೊರಗೆಳೆದ ಕೀರ್ತಿ ಸ್ವಾಮಿಯವರದ್ದು. 2ಜಿ ಹಗರಣ ನಡೆದಿದೆ ಮತ್ತು ಈ ಸಂಬಂಧ ರಾಜಾ ವಿರುದ್ಧ ಕ್ರಮಕ್ಕಾಗಿ ಅನುಮತಿ ನೀಡಬೇಕು ಎಂದು ಪ್ರಸಕ್ತ ಚಿದಂಬರಂ ಪ್ರಕರಣದಲ್ಲಿ ಮನವಿ ಮಾಡಿರುವಂತೆ ಕೆಲವು ವರ್ಷಗಳ ಹಿಂದೆ ಸ್ವಾಮಿಯವರು ಪ್ರಧಾನಿಗೆ ಮನವಿ ಮಾಡಿದ್ದರು.

ಆದರೆ ಇದನ್ನು ಪ್ರಧಾನಿಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಧಾನಿಯವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮುಖಭಂಗಕ್ಕೀಡಾಗಿತ್ತು.

ಈಗ ಮತ್ತೆ ಅದೇ ರೀತಿಯ ಪ್ರಸಂಗ ಪ್ರಧಾನಿಯವರಿಗೆ ಎದುರಾಗಿದೆ. ಚಿದಂಬರಂ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಸ್ವಾಮಿ ಮನವಿ ಮಾಡಿದ್ದಾರೆ. ಇದು ಯಾವ ರೀತಿಯಲ್ಲಿ ಅಂತ್ಯ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇವನ್ನೂ ಓದಿ