ತೀವ್ರ ಕುತೂಹಲ ಮತ್ತು ವಿವಾದ ಹುಟ್ಟುಹಾಕಿರುವ ಅರುಷಿ ಕೊಲೆ ಪ್ರಕರಣ ಈಗ ಮತ್ತೊಂದು ಹೊಸ ತಿರುವು ಪಡೆದಿದ್ದು, ತನ್ನ ಪತಿಯನ್ನು ತಲ್ವಾರ್ ದಂಪತಿಗಳೇ ಹತ್ಯೆಗೈದಿರುವುದಾಗಿ ಅರುಷಿ ಜತೆ ಕೊಲೆಯಾಗಿದ್ದ ಹೇಮರಾಜ್‌ನ ಪತ್ನಿ ಸಿಬಿಐ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ತನ್ನ ಪತಿ ಹೇಮರಾಜ್‌ರನ್ನು ತಲ್ವಾರ್ ದಂಪತಿಗಳೇ ಕೊಂದಿರುವುದಾಗಿ ಆರೋಪಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯನ್ನು ಸ್ವೀಕರಿಸಿರುವ ನ್ಯಾಯಾಲಯ ಏಪ್ರಿಲ್ 27ರಂದು ತನ್ನ ತೀರ್ಪು ನೀಡುವುದಾಗಿ ತಿಳಿಸಿದೆ.
ಮೃತ ಹೇಮರಾಜ್ ಪತ್ನಿ 43ರ ಹರೆಯದ ಖುಮ್‌ಕಾಲಾ ನೇಪಾಳದ ಅರ್ಗಾಖಾಂಚಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಖುಮ್‌ಕಾಲಾ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಮ್ಮ ಮೇಲ್ಮನವಿ ಸಲ್ಲಿಸಿದ್ದಾರೆ. ತನಿಖೆ ಕೈಗೊಂಡ ಸಿಬಿಐ ಏಜೆನ್ಸಿ ಈಗಾಗಲೇ ತನ್ನ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಆಕೆ ತಿಳಿಸಿದ್ದಾರೆ. ಅಲ್ಲದೇ ಹೇಮರಾಜ್ ಕೊಲೆಯಾಗುವ 15 ದಿನದ ಮೊದಲು ತನ್ನೊಂದಿಗೆ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವುದಾಗಿಯೂ ವಿವರಿಸಿದ್ದಾರೆ.
ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ಅಪರಾಧ ದಂಡ ಸಂಹಿತೆ 311ರ ಅನ್ವಯ ದಾಖಲಿಸಿಕೊಳ್ಳಬೇಕೆಂದು ಆಕೆಯ ವಕೀಲರಾದ ನರೇಶ್ ಯಾದವ್ ತನಿಖಾ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ.
2008ರ ಮೇ 16ರಂದು, ತಲ್ವಾರ್ ದಂಪತಿಗಳ ಮಗಳು ಅರುಷಿಯ ಮೃತದೇಹವು ಅವರು ನೋಯ್ಡಾದಲ್ಲಿ ವಾಸಿಸುತ್ತದ್ದ ಜಲ್‌ವಾಯು ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಮರುದಿನವೇ ತಲ್ವಾರ್ ಮನೆ ಕೆಲಸದಾಳು ಹೇಮರಾಜ್ ಮೃತದೇಹ ಕೂಡ ಅಪಾರ್ಟ್‌ಮೆಂಟ್‌ನ ಟೆರಸ್ ಮೇಲೆ ಪತ್ತೆಯಾಗಿತ್ತು.