ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಜತೆ ನನಗೆ ಯಾವುದೇ ರೀತಿಯ ವಿಶೇಷ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ನನಗೆ ಮತ್ತು ರಾಹುಲ್ ಗಾಂಧಿಗೆ ಇರುವ ಏಕೈಕ ಸಂಬಂಧವೆಂದರೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ನಾನು, ಅವರು ಸಂಸದರಾಗಿರುವ ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್‌ಗೆ ಉಸ್ತುವಾರಿಯಾಗಿರುವುದು ಎಂದು ಪತ್ರಕರ್ತರಿಗೆ ತಿಳಿಸಿದರು.
ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುವುದನ್ನು ನೀವು ಎದುರು ನೋಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ಯುವ ಕಾಂಗ್ರೆಸ್ ನಾಯಕ ಉನ್ನತ ಸ್ಥಾನಕ್ಕೆ ಏರಬೇಕೆನ್ನುವ ಬಯಕೆಯಿದೆ ಎಂದರು.
ತಾನು ಪ್ರಧಾನ ಮಂತ್ರಿಯಾಗಲು ಬಯಸುತ್ತಿದ್ದೇನೆ ಎಂದು ಇದುವರೆಗೂ ರಾಹುಲ್ ಎಲ್ಲಿಯೂ ಹೇಳಿಲ್ಲ ಎಂದು ಇದೇ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್‌ಗೆ ಪತ್ರಕರ್ತರು ನೆನಪಿಸಿದರು. ಹಾಗೆಂದು ಪ್ರಧಾನ ಮಂತ್ರಿ ಆಗುವುದಿಲ್ಲ ಎಂದು ರಾಹುಲ್ ಎಲ್ಲಾದರೂ ಹೇಳಿದ್ದಾರೆಯೇ ಎಂದು ಸಿಂಗ್ ಮರು ಪ್ರಶ್ನೆ ಹಾಕಿದರು.
ಕೇಂದ್ರ ಗೃಹಸಚಿವ ಪಿ. ಚಿದಂಬರಂ ಜತೆ ಯಾವುದೇ ಭಿನ್ನಮತವಿರುವುದನ್ನು ಕೂಡ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದರು.
ನಾನು ಚಿದಂಬರಂ ಜತೆ ಯಾವತ್ತೂ ಗಲಾಟೆ ಮಾಡಿಲ್ಲ. ಮುಂದಿನ ದಿನಗಳಲ್ಲೂ ಅವರ ಜತೆ ಯಾವುದೇ ರೀತಿಯಲ್ಲಿ ಕಿತ್ತಾಡಲು ನಾನು ಬಯಸುವುದಿಲ್ಲ. ನಮ್ಮ ನಡುವೆ ಯಾವುದೇ ಜಗಳಗಳು ಇಲ್ಲ ಮತ್ತು ಇರುವುದಿಲ್ಲ ಎಂದರು.
ತನ್ನ ಜತೆ ಕಾರ್ಯ ನಿರ್ವಹಿಸಿದ ಸಚಿವರೊಬ್ಬರನ್ನು ಜೈಲಿಗೆ ಕಳುಹಿಸಿರುವುದಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಇದೇ ಸಂದರ್ಭದಲ್ಲಿ ದಿಗ್ವಿಜಯ್ ಕೊಂಡಾಡಿದರು. ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರ ಕುರಿತೇ ಈ ಮಾತನ್ನು ಹೇಳಿರುವುದು ಸ್ಪಷ್ಟವಾದರೂ, ಹೆಸರು ಹೇಳಲಿಲ್ಲ.