ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ರಾಹುಲ್ ಗಾಂಧಿ ವೇಸ್ಟ್, ಪ್ರಿಯಾಂಕಾ ಗಾಂಧಿ ಬಂದ್ರೆ ಬೆಸ್ಟ್' (Congress | Rahul Gandhi | Priyanka Gandhi | India)
ಪ್ರಸಕ್ತ ಕಾಂಗ್ರೆಸ್ ಪಾಲಿಗೆ 'ಕಾಯುತ್ತಿರುವ ಪ್ರಧಾನಿ'ಯಾಗಿರುವ ರಾಹುಲ್ ಗಾಂಧಿಯ ಬಗ್ಗೆ ಕೆಲವು ವರ್ಷಗಳ ಹಿಂದೆ ಪಕ್ಷದಲ್ಲಿ ತೀವ್ರ ಅಸಮಾಧಾನವಿತ್ತು. ಅವರ ಸಾಧನೆ ಏನೇನೂ ಸಾಲದು, ಮಾತಿನಲ್ಲೂ ಹಿಡಿತವಿಲ್ಲ. ಅವರ ಬದಲಿಗೆ ಪ್ರಿಯಾಂಕಾ ಗಾಂಧಿಯನ್ನೇ ಮುಂಚೂಣಿಗೆ ತಂದರೆ ಉತ್ತಮ ಎಂಬ ಅಭಿಪ್ರಾಯವಿತ್ತು. ಹಾಗೆಂದು ಅಮೆರಿಕಾ ರಾಯಭಾರಿ ತನ್ನ ದೇಶಕ್ಕೆ ವರದಿ ಮಾಡಿದ್ದರು.

2007ರಲ್ಲಿ ರಾಜಕೀಯ ರಂಗದಲ್ಲಿ ಸಾಕಷ್ಟು ಅವಿವೇಕತನದ ಮಾತುಗಳನ್ನು ಆಡಿದ ನಂತರ ಇಂತಹ ಒಂದು ಯೋಚನೆ ಕಾಂಗ್ರೆಸ್‌ನೊಳಗಿತ್ತು. ಗಾಂಧಿ ಕುಟುಂಬದ ಉತ್ತರಾಧಿಕಾರಿಯೇ ಬೇಕು ಎಂಬ ನಿಟ್ಟಿನಲ್ಲಿ ರಾಹುಲ್ ಬದಲು ಪ್ರಿಯಾಂಕಾ ಗಾಂಧಿಯೇ ಬರಲಿ ಎಂದು ಕಾಯುತ್ತಿರುವವರ ಸಂಖ್ಯೆ ದೊಡ್ಡದಿತ್ತು ಎಂದು 23-04-2007ರಂದು ಅಮೆರಿಕಾದ ದೆಹಲಿ ರಾಯಭಾರ ಕಚೇರಿಯ ಜೆಫ್ರಿ ಪ್ಯಾಟ್ ವಾಷಿಂಗ್ಟನ್‌ಗೆ ವರದಿ ರವಾನೆ ಮಾಡಿದ್ದರು.

ಅದು ವಿಕಿಲೀಕ್ಸ್ ಕೈಗೆ ಸೇರಿದ ನಂತರ ಈಗ 'ದಿ ಹಿಂದೂ' ಆಂಗ್ಲ ಪತ್ರಿಕೆಯ ಮೂಲಕ ಬಹಿರಂಗವಾಗಿದೆ.

ರಾಹುಲ್ ಗಾಂಧಿ ಒಬ್ಬ ಅನನುಭವಿ. ಪ್ರಧಾನ ಮಂತ್ರಿ ಆಗಬೇಕಾದ ಯಾವುದೇ ಅರ್ಹತೆಗಳು ಅವರಲ್ಲಿಲ್ಲ ಎಂದು ದೂರಿಕೊಂಡಿದ್ದ ಕಾಂಗ್ರೆಸ್‌ನೊಳಗಿನ ಮಂದಿ, ಅದೇ ಕುಟುಂಬದ ಪ್ರಿಯಾಂಕಾ ರಾಜಕೀಯ ಪ್ರವೇಶಕ್ಕೆ ಕಾಯುತ್ತಿದ್ದರು.

ರಾಹುಲ್ ಗಾಂಧಿ 2007ರ ಆಸುಪಾಸಿನಲ್ಲಿ ನೀಡಿದ್ದ ಕೆಲವು ಹೇಳಿಕೆಗಳನ್ನು ಕೂಡ ರಾಯಭಾರಿ ತನ್ನ ದಾಖಲೆಯಲ್ಲಿ ಸೇರಿಸಿದ್ದರು.

'ಯಾವತ್ತೂ ಹಿಮ್ಮೆಟ್ಟದ ಮತ್ತು ತನ್ನ ಮಾತುಗಳಿಂದ ಹಿಂದಕ್ಕೆ ಸರಿಯದ ಕುಟುಂಬಕ್ಕೆ ಸೇರಿದ ವ್ಯಕ್ತಿ ನಾನು. ನನ್ನ ಕುಟುಂಬದ ಯಾವುದೇ ಸದಸ್ಯ ಏನಾದರೂ ಮಾಡಬೇಕೆಂದು ನಿರ್ಧರಿಸಿದರೆ, ಅದನ್ನು ಮಾಡಿಯೇ ತೀರುತ್ತಾನೆ. ಅದು ಸ್ವಾತಂತ್ರ್ಯ ಹೋರಾಟವಿರಬಹುದು ಅಥವಾ ಪಾಕಿಸ್ತಾನದ ವಿಭಜನೆಯಿರಬಹುದು (ಪಾಕಿಸ್ತಾನ-ಬಾಂಗ್ಲಾದೇಶ ವಿಭಜನೆ) ಅಥವಾ ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವಲ್ಲಿ ಇರಬಹುದು' - ಇದು 15-04-2007ರಲ್ಲಿ ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ರಾಹುಲ್ ನೀಡಿದ್ದ ಹೇಳಿಕೆ.

ಪಾಕಿಸ್ತಾನ ವಿಭಜನೆಯಲ್ಲಿ ಗಾಂಧಿ ಕುಟುಂಬದ ಪಾತ್ರವಿದೆ ಎಂಬುದನ್ನು ರಾಹುಲ್ ಒಪ್ಪಿಕೊಂಡಿರುವುದಕ್ಕೆ ಪಾಕಿಸ್ತಾನ ಕೂಡ ಪ್ರತಿಕ್ರಿಯೆ ನೀಡಿತ್ತು.

ಭಾರತವು ಪಾಕಿಸ್ತಾನದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಕ್ಕೆ ಮತ್ತು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂಬ ನಮ್ಮ ವಾದಕ್ಕೆ ಈಗ ಪುಷ್ಠಿ ದೊರೆತಿದೆ. ಭಾರತದ ಆಡಳಿತ ಪಕ್ಷ ಮತ್ತು ಅಲ್ಲಿನ ಆಡಳಿತ ಕುಟುಂಬದ ಪ್ರಮುಖ ಸದಸ್ಯನೊಬ್ಬ ಇದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಸರಕಾರದ ವಕ್ತಾರರೊಬ್ಬರು ಇಸ್ಲಾಮಾಬಾದಿನಲ್ಲಿ ಪ್ರತಿಕ್ರಿಯೆ ನೀಡಿದ್ದರು.

'ಗಾಂಧಿ ಕುಟುಂಬದ ಸದಸ್ಯ ಅಧಿಕಾರದಲ್ಲಿ ಇರುತ್ತಿದ್ದರೆ ಬಾಬ್ರಿ ಮಸೀದಿ ಏನೂ ಆಗುತ್ತಿರಲಿಲ್ಲ' ಎಂದು ಕೂಡ ರಾಹುಲ್ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ನೊಳಗಿನ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಮುಸ್ಲಿಮರ ಮತ ಸೆಳೆಯಲು ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡಲಾಗಿದೆ ಎಂದು ಹೇಳಿದ್ದರು. ಇದೇ ಅಭಿಪ್ರಾಯ 'ಹಿಂದೂಸ್ತಾನ್ ಟೈಮ್ಸ್' ಆಂಗ್ಲಪತ್ರಿಕೆಯ ರಾಜಕೀಯ ಸಂಪಾದಕ ಪಂಕಜ್ ವೋಹ್ರಾ ಅವರದ್ದಾಗಿತ್ತು.

ರಾಹುಲ್ ಹೇಳಿಕೆಗಳಿಗೆ ಕಾಂಗ್ರೆಸ್ ಒಳಗೆ ಭಾರೀ ವಿರೋಧಗಳು ಬಂದಿದ್ದವು. ತನ್ನ ತಂದೆ ರಾಜೀವ್ ಗಾಂಧಿಯಂತೆ 'ಸೌಮ್ಯ ಹಿಂದುತ್ವ' ಸಿದ್ಧಾಂತದ ಹಿಂದೆ ರಾಹುಲ್ ಬಿದ್ದಿದ್ದಾರೆ ಎಂದು ಕೆಲವರು ಟೀಕಿಸಿದ್ದರು.

ಕಾಂಗ್ರೆಸ್ ನಾಯಕ ಹಾಗೂ ಗಾಂಧಿ ಕುಟುಂಬದ ನಿಕಟವರ್ತಿ ನಚಿಕೇತ್ ಕಪೂರ್ ಕೂಡ ಇದೇ ಮಾತನ್ನು ಹೇಳಿದ್ದರು. ರಾಹುಲ್ ಗಾಂಧಿಗೆ ರಾಜಕೀಯ ಭವಿಷ್ಯವಿಲ್ಲ. ಅವರು ಯಾವತ್ತೂ ಪ್ರಧಾನ ಮಂತ್ರಿ ಆಗಲಾರರು. ಅಂತಹ ಅರ್ಹತೆ ಅವರಿಗಿಲ್ಲ. ಕಾಂಗ್ರೆಸ್ ಬಯಸಿದರೂ, ಅದು ಏಕಾಂಗಿಯಾಗಿ ಬಹುಮತ ಪಡೆಯಲು ಮುಂದಿನ ದಿನಗಳಲ್ಲಿ ಸಾಧ್ಯವಾಗದೇ ಇರುವುದರಿಂದ ಮೈತ್ರಿ ಪಕ್ಷಗಳು ಅದಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎಂದು ರಾಯಭಾರಿಯೊಂದಿಗೆ ಹಂಚಿಕೊಂಡಿದ್ದರು.

ಗಾಂಧಿ-ನೆಹರು ಕುಟುಂಬದ ಕುಡಿಯನ್ನೇ ಕಾಂಗ್ರೆಸ್ ಮುಂಚೂಣಿಯಲ್ಲಿಡಬೇಕಾದ ಅನಿವಾರ್ಯತೆ ಇರುವುದರಿಂದ, ರಾಹುಲ್ ಬದಲಿಗೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಆಯ್ಕೆ ನಡೆಸುವ ಸಾಧ್ಯತೆಗಳ ಬಗ್ಗೆಯೂ ನಚಿಕೇತ್ ಮಾತನಾಡಿದ್ದರು. ಕಾಂಗ್ರೆಸ್‌ನ ಹಲವು ಮಂದಿ ಅದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು.
ಇವನ್ನೂ ಓದಿ