ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂ.ಎಫ್. ಹುಸೇನ್, ಗೋದ್ರಾ ಬಗ್ಗೆ ಆಡ್ವಾಣಿ ಏನಂತಾರೆ? (LK Advani | India | post-Godhra riots | Gujarat)
ಯಾವುದೇ ಪರಿಸ್ಥಿತಿಯಲ್ಲೂ ಕೋಮುಗಲಭೆಗಳನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ 2002ರ ಗುಜರಾತ್ ಗಲಭೆಗಳಿಗಾಗಿ ಜನತೆಯ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವರಿಷ್ಠ ಎಲ್.ಕೆ. ಆಡ್ವಾಣಿ ಸ್ಪಷ್ಟಪಡಿಸಿದರು.

ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ್ದರಿಂದ ಹುಟ್ಟಿಕೊಂಡಿದ್ದ ಗುಜರಾತ್ ಕೋಮುಗಲಭೆಯಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟಿದ್ದರು. ಮುಂಬೈಯ ಪ್ರೆಸ್ ಕ್ಲಬ್ ಆಯೋಜಿಸಿದ್ದ 'ಫೇಸ್-ದಿ-ಪ್ರೆಸ್' ಕಾರ್ಯಕ್ರಮದಲ್ಲಿ ಸಂಪಾದಕರುಗಳ ಸಮಿತಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಹಲವು ವಿಚಾರಗಳು ಪ್ರಸ್ತಾಪವಾದವು.

ಬಾಬ್ರಿ ಮಸೀದಿ ಧ್ವಂಸಗೊಂಡ ದಿನ ನಮ್ಮ ವಿಶ್ವಾಸಾರ್ಹತೆಗೆ ಬಹುದೊಡ್ಡ ಹೊಡೆತ ಬಿತ್ತು ಎಂದ ಅವರು, ಆ ದಿನದ ಘಟನೆ ಅಯೋಧ್ಯೆ ಚಳವಳಿಯನ್ನು ಮುನ್ನಡೆಸುತ್ತಿದ್ದವರಿಗೆ ಅನಿರೀಕ್ಷಿತವಾಗಿತ್ತು. ಚಳವಳಿಯನ್ನು ಸೂಕ್ತವಾಗಿ ಯೋಜಿಸಬೇಕಿತ್ತು ಎಂದರು.

ದಿ ಹಿಂದೂ ಸಂಪಾದಕ ಎನ್. ರಾಮ್, ದೈನಿಕ್ ಭಾಸ್ಕರ್ ಸಮೂಹದ ಕುಮಾರ್ ಕೇತ್ಕರ್, ಸ್ಟಾರ್ ಇಂಡಿಯಾದ ಸಿಇಒ ಉದಯ್ ಶಂಕರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಲಭೆ ಅಸಮರ್ಥನೀಯ, ಆದರೆ ಕ್ಷಮೆ ಕೇಳಲ್ಲ...
1984ರ ಸಿಖ್ ವಿರೋಧಿ ಗಲಭೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕ್ಷಮೆ ಯಾಚಿಸಿದ್ದಾರೆ. ಆದರೆ 1990-92ರ ರಥಯಾತ್ರೆಯ ನಂತರ ಗಲಭೆ ಅಥವಾ ಗೋದ್ರೋತ್ತರ ಗಲಭೆಗಳಿಗಾಗಿ ಬಿಜೆಪಿ ಕ್ಷಮೆ ಯಾಚಿಸಿಲ್ಲವಲ್ಲ ಎಂಬ ಪ್ರಶ್ನೆಯನ್ನು ಸಂಪಾದಕರೊಬ್ಬರು ಕೇಳಿದ್ದರು.

ಸರಕಾರದ ಯಾವುದೇ ವ್ಯಕ್ತಿ ತಪ್ಪನ್ನು ಎಸಗಿದ್ದರೆ, ಅದನ್ನು ನ್ಯಾಯಾಲಯ ಗಮನಿಸುತ್ತದೆ. ಪ್ರತಿಯೊಬ್ಬರೂ ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಬೇಕು. ಅಯೋಧ್ಯೆ ಚಳವಳಿಯನ್ನು ಆಯೋಜಿಸಿದ್ದ ಸಂಘಟನೆಗೆ ತನ್ನ ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದುದರಿಂದ ಬಾಬ್ರಿ ಮಸೀದಿ ಧ್ವಂಸ ನಡೆಯಿತು ಎಂದು ಆಡ್ವಾಣಿ ಉತ್ತರಿಸಿದರು.

ದೇಶದಲ್ಲಿ ಹಲವು ಬಾರಿ ಕೋಮುಗಲಭೆಗಳು ನಡೆದಿವೆ ಮತ್ತು ಆ ಪರಿಸ್ಥಿತಿಗಳನ್ನು ಅಸಮರ್ಪಕವಾಗಿ ನಿರ್ವಹಿಸಲಾಗಿದೆ. ಯಾವುದೇ ಗಲಭೆಗಳನ್ನು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. 2002ರಲ್ಲಿ ನಡೆದ ಗುಜರಾತ್ ಹಿಂಸಾಚಾರಕ್ಕೂ ಮೊದಲು ಗೋದ್ರಾ ಹತ್ಯಾಕಾಂಡ ನಡೆದಿತ್ತು ಮತ್ತು ಅದಕ್ಕೆ ಬಂದಿದ್ದ ಪ್ರತಿಕ್ರಿಯೆಯದು ಎಂಬುದನ್ನು ನಾವು ಮರೆಯಬಾರದು. ಕೋಮು ಹಿಂಸಾಚಾರಗಳು ದುಃಖಕರ ವಿಚಾರಗಳು. ಅದಕ್ಕಾಗಿ ಕ್ಷಮೆ ಯಾಚಿಸುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು 'ರಾಜಧರ್ಮ'ವನ್ನು ಪಾಲಿಸಬೇಕು ಎಂದು ಗಲಭೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ್ದರಲ್ಲವೇ ಎಂದಾಗ, 'ಅಟಲ್‌ಜೀ ಏನಾದರೂ ಹೇಳಿದ್ದರೆ, ಅದು ಸರಿಯಾಗಿಯೇ ಇರುತ್ತದೆ. ಅದರ ಬಗ್ಗೆ ನಾನೇನೂ ಹೇಳಲಾರೆ' ಎಂದು ಹೆಚ್ಚು ವಿವರಿಸಲು ನಿರಾಕರಿಸಿದರು.

ಎಂ.ಎಫ್. ಹುಸೇನ್ ಬಗ್ಗೆ...
ಜನಪ್ರಿಯ ಕಲಾವಿದ ಎಂ.ಎಫ್. ಹುಸೇನ್ ಕಲಾಕೃತಿಗಳನ್ನು ಬಿಜೆಪಿ ಸಹಿಸಿಲ್ಲ. ಅವರ ಕಲಾಕೃತಿಗಳನ್ನು ದೇಶದ ವಿವಿಧ ಭಾಗಗಳಲ್ಲಿ ಧ್ವಂಸಗೈಯಲಾಗಿದೆ. ಆದರೆ ಇದಕ್ಕೂ ಬಿಜೆಪಿ ಕ್ಷಮೆ ಯಾಚಿಸಿಲ್ಲ ಎಂದು ಕೇತ್ಕರ್ ಪ್ರಶ್ನಿಸಿದರು.

ನಾವು ಭ್ರಷ್ಟಾಚಾರವನ್ನು ಸಹಿಸಿಕೊಳ್ಳುತ್ತೇವೆ. ವಿಶ್ವವನ್ನು ಹುಸೇನ್ ನೋಡುವ ದೃಷ್ಟಿಕೋನದಂತಹ ಇತರ ದೃಷ್ಟಿಕೋನಗಳ್ನು ನಾವು ಸಹಿಸುವುದಿಲ್ಲ ಎಂದು ಕೇತ್ಕರ್ ಉಲ್ಲೇಖಿಸಿದ್ದರು.

'ಬಿಜೆಪಿ ಹುಸೇನ್ ಬಗ್ಗೆ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹುಸೇನ್ ತನ್ನ ಕಲಾ ಕ್ಷೇತ್ರದಲ್ಲಿ ಸಹಿಷ್ಣುತೆ (ಬೇಕಾಬಿಟ್ಟಿ ಚಿತ್ರಗಳನ್ನು ಬರೆಯುವುದಲ್ಲ ಎಂಬ ಅರ್ಥದಲ್ಲಿ) ಹೊಂದಿರಬೇಕು. ಆದರೂ ಯಾವುದೇ ರೀತಿಯ ವಿಧ್ವಂಸಕ ಕೃತ್ಯಗಳನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ' ಎಂದರು.
ಇವನ್ನೂ ಓದಿ