ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿ ಪುಸ್ತಕಕ್ಕೆ ಮೋದಿ ನಿಷೇಧ; ಕೇಂದ್ರದಿಂದಲೂ ಕ್ರಮ? (Gujarat govt | Mahatma Gandhi | Joseph Lelyveld | Narendra Modi)
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿರುವ ಪುಸ್ತಕಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಗುಜರಾತಿನಲ್ಲಿ ನಿಷೇಧ ಹೇರಲಾಗಿದೆ. ಅಲ್ಲದೆ, ದೇಶದಾದ್ಯಂತ ನಿಷೇಧ ಹೇರುವಂತೆ ಕೇಂದ್ರ ಸರಕಾರವನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.

ಪುಲಿಟ್ಜರ್ ಪ್ರಶಸ್ತಿ ವಿಜೇತ ಜೋಸೆಫ್ ಲೆಲಿವೆಲ್ಡ್ ಬರೆದಿರುವ Great Soul: Mahatma Gandhi and His Struggle with India ಪುಸ್ತಕದಲ್ಲಿ, ದಕ್ಷಿಣ ಆಫ್ರಿಕಾದ ಜರ್ಮನ್-ಯೆಹೂದಿ ದೇಹದಾರ್ಢ್ಯ ಪಟು ಹರ್ಮಾನ್ ಕಲೆಂಬಚ್ ಅವರ ಜತೆ ಗಾಂಧಿ ಸಲಿಂಗಿ ಸಂಬಂಧ ಹೊಂದಿದ್ದರು ಮತ್ತು ಗಾಂಧೀಜಿಯವರನ್ನು ದ್ವಿಲಿಂಗೀ (ಬೈಸೆಕ್ಸುವಲ್) ಎಂದು ಆರೋಪಿಸಲಾಗಿತ್ತು.

ಈ ಪುಸ್ತಕದ ಮಾರಾಟ, ಪ್ರಕಟಣೆ, ಪ್ರಸಾರರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗುಜರಾತ್ ನಿಷೇಧಿಸಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಈ ನಿರ್ಧಾರವನ್ನು ವಿಧಾನಸಭೆಯಲ್ಲಿ ಪ್ರಕಟಿಸಿದರು. ಇದನ್ನು ಪ್ರತಿಪಕ್ಷ ಕಾಂಗ್ರೆಸ್ ಕೂಡ ಬೆಂಬಲಿಸಿತು.

ಬರವಣಿಗೆಯು ವಿಕೃತ ಶೈಲಿಯಲ್ಲಿದೆ. ವಿವೇಕಯುತ ಮತ್ತು ತರ್ಕಯುತ ಯೋಚನೆಯಿರುವ ಮಂದಿಯ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ. ಮಹಾತ್ಮಾ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹೊರಟಿರುವ ಪ್ರಕಾಶಕರ ವಿರುದ್ಧ ಕೇವಲ ಗುಜರಾತ್ ಮಾತ್ರವಲ್ಲ, ಭಾರತದ ಮೂಲೆ ಮೂಲೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಮಹಾತ್ಮಾ ಗಾಂಧಿಯವರು ಭಾರತದಲ್ಲಿ ಮಾತ್ರ ಆರಾಧ್ಯ ವ್ಯಕ್ತಿಯಲ್ಲ, ಇಡೀ ವಿಶ್ವಕ್ಕೇ ಅವರು ಅನುಕರಣೀಯರು. ಮಾನವಕುಲದ ಕಲ್ಯಾಣಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟು ಸ್ಫೂರ್ತಿಯಾಗಿರುವ ಗಾಂಧಿಯವರ ಬಗ್ಗೆ ಈ ರೀತಿಯಾಗಿ ಬರೆದು ಲೇಖಕರು ಕೋಟಿಗಟ್ಟಲೆ ಜನತೆಯ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ. ಈ ಪುಸ್ತಕವನ್ನು ದೇಶದಾದ್ಯಂತ ನಿಷೇಧಿಸಬೇಕು. ಲೇಖಕ ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.

ಕೇಂದ್ರದಿಂದ ನಿಷೇಧಕ್ಕೆ ಚಿಂತನೆ...
ಪುಸ್ತಕ ಭಾರತದಲ್ಲಿ ಬಿಡುಗಡೆಯಾಗುವುದಕ್ಕೆ ಮೊದಲೇ ಗಾಂಧಿ ನಾಡು ಗುಜರಾತಿನಲ್ಲಿ ಮೋದಿ ನಿಷೇಧ ಹೇರಿದ್ದಾರೆ. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಪುಸ್ತಕ ನಿಷೇಧದ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಅತ್ತ ಮಹಾರಾಷ್ಟ್ರ ಸರಕಾರವೂ ಗಾಂಧಿ ಕುರಿತ ವಿವಾದಿತ ಪುಸ್ತಕದ ನಿಷೇಧಕ್ಕೆ ಕೇಂದ್ರವನ್ನು ಒತ್ತಾಯಿಸಿದೆ. ರಾಜ್ಯದಲ್ಲಿ ಪುಸ್ತಕ ಬಿಡುಗಡೆಯಾಗದಂತೆ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ನಾರಾಯಣ ರಾಣೆ ಹೇಳಿದ್ದಾರೆ.

ಇಂತಹ ಬರಹಗಳನ್ನು ತಡೆಯುವುದು ಹೇಗೆ ಎಂದು ನಾವು ಯೋಚಿಸಬೇಕಾಗಿದೆ. ಅವರು (ಲೇಖಕರು) ಅಪಮಾನಿಸಿರುವುದು ರಾಷ್ಟ್ರೀಯ ನಾಯಕನನ್ನು ಮಾತ್ರವಲ್ಲ, ಇಡೀ ರಾಷ್ಟ್ರವನ್ನು. ಈ ರೀತಿಯಾಗಿ ಏನೇನೋ ಬರೆದು ನಮ್ಮ ಮೇಲೆ ಸವಾರಿ ಮಾಡಬಾರದು. ಪುಸ್ತಕದ ಮೇಲೆ ನಿಷೇಧ ಹೇರುವುದನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು ಕಾನೂನು ಸಚಿವ ಮೊಯ್ಲಿ ಹೇಳಿದ್ದಾರೆ.
ಇವನ್ನೂ ಓದಿ