ಒಂದು ಕೌಟುಂಬಿಕ ರಾಜಕೀಯವು ಇನ್ನೊಂದು ಕೌಟುಂಬಿಕ ರಾಜಕೀಯವನ್ನು ಬೆಳೆಯಲು ಬಿಡುವುದಿಲ್ಲ ಎಂಬ ಆರೋಪಗಳ ನಡುವೆಯೇ, ಆಂಧ್ರ ಪ್ರದೇಶದ ಕಡಪಾ ಲೋಕಸಭಾ ಸ್ಥಾನ ಮತ್ತು ಪುಲಿವೇಂದುಲ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಕುಟುಂಬಿಕರ ಹೋರಾಟವಾಗಿ ಮಾರ್ಪಟ್ಟಿದೆ.
ವೈಎಸ್ಆರ್ ಪ್ರತಿನಿಧಿಸುತ್ತಿದ್ದ ಪುಲಿವೇಂದುಲ ವಿಧಾನಸಭಾ ಕ್ಷೇತ್ರದಲ್ಲಿ ಅವರ ವಿಧವೆ ವಿಜಯಲಕ್ಷ್ಮಿ ಎದುರು ಕಾಂಗ್ರೆಸ್ ಪಕ್ಷವು ವೈಎಸ್ಆರ್ ಸಹೋದರ ವೈ.ಎಸ್.ವಿವೇಕಾನಂದ ರೆಡ್ಡಿಯವರನ್ನೇ ಕಣಕ್ಕಿಳಿಸಿದೆ. ಅಂತೆಯೇ ಕಡಪಾ ಲೋಕಸಭಾ ಕ್ಷೇತ್ರದಲ್ಲಿ ವೈಎಸ್ಆರ್ ಪುತ್ರ, ಕಾಂಗ್ರೆಸ್‌ನಿಂದ ಸಿಡಿದು ಹೊರಬಂದಿರುವ ವೈ.ಎಸ್.ಜಗನ್‌ಮೋಹನ್ ರೆಡ್ಡಿ ವಿರುದ್ಧ ತಮ್ಮ ಅಳಿಯನನ್ನು ಕಣಕ್ಕಿಳಿಸಲು ಕೂಡ ವಿವೇಕಾನಂದ ರೆಡ್ಡಿ ಆಲೋಚಿಸುತ್ತಿದ್ದಾರೆ.
ರಾಜ್ಯದ ದಿವಂಗತ ನಾಯಕ ವೈಎಸ್ಆರ್ ಅವರ ಕೌಟುಂಬಿಕ ರಾಜಕೀಯದ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಅವರ ವಿಧವೆ ಪತ್ನಿ, ಮಗ ಹಾಗೂ ಸಹೋದರನ ಕುಟುಂಬದ ಮಧ್ಯೆ ತಿಕ್ಕಾಟ ಏರ್ಪಟ್ಟಿರುವುದು ವಿಶೇಷ. ಪುತ್ರ ಜಗನ್ ಅವರು ಕಳೆದ ತಿಂಗಳು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬಂದು, ವೈಎಸ್ಆರ್ ಕಾಂಗ್ರೆಸ್ ಸ್ಥಾಪಿಸಿದ್ದರೆ, ಜಗನ್ ತಾಯಿ ವಿಜಯಲಕ್ಷ್ಮಿ ಕೂಡ ಪುಲಿವೇಂದುಲ ಶಾಸಕ (ಕಾಂಗ್ರೆಸ್ ಟಿಕೆಟಿನ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪತಿಯ ಮರಣಾನಂತರ ಅವರು ಪ್ರತಿನಿಧಿಸುತ್ತಿದ್ದ ಪುಲಿವೇಂದುಲ ಕ್ಷೇತ್ರದಿಂದ ಪತ್ನಿ ವಿಜಯಲಕ್ಷ್ಮಿ 2009ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೇ ವೇಳೆ, ತನ್ನನ್ನು ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಕಡೆಗಣಿಸಿದ್ದನ್ನು ವಿರೋಧಿಸಿ ಪುತ್ರ ಜಗನ್ ಕಾಂಗ್ರೆಸ್‌ನಿಂದ ಹೊರಬಿದ್ದರು. ವೈಎಸ್ಆರ್ ಸಾವಿನ ಬಳಿಕ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದ ಕೆ.ರೋಶಯ್ಯ ಸ್ಥಾನಕ್ಕೆ, ತಮ್ಮ ಬದ್ಧ ವಿರೋಧಿಯಾದ ಕಿರಣ್ ಕುಮಾರ್ ರೆಡ್ಡಿಯನ್ನು ನೇಮಿಸಿರುವುದು ಜಗನ್ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿ, ಪ್ರತ್ಯೇಕ ಪಕ್ಷವನ್ನೇ ಸ್ಥಾಪಿಸಿದ್ದರು. ಮಗ ಮತ್ತು ತಾಯಿ ಇಬ್ಬರೂ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದಾಗಿ ಇದೀಗ ಅವುಗಳಿಗೆ ಉಪಚುನಾವಣೆ ಘೋಷಿಸಲಾಗಿದೆ.
ಚಿಕ್ಕಪ್ಪನಿಗೆ ಸಚಿವ ಪಟ್ಟ ಕೊಡುವ ಮೂಲಕ ತಮ್ಮತ್ತ ಸೆಳೆದುಕೊಂಡು ಕಾಂಗ್ರೆಸ್ ಪಕ್ಷವು ಕುಟುಂಬವನ್ನೇ ಒಡೆದಿದೆ ಎಂದು ಆರೋಪಿಸಿ ಜಗನ್ ಅವರು ತಾಯಿಯೊಂದಿಗೆ ಕಾಂಗ್ರೆಸ್‌ನಂದ ಹೊರಬಂದಿದ್ದರು.
2010ರಲ್ಲಿ ಸಚಿವ ಪಟ್ಟಕ್ಕೇರಿದ್ದ ವಿವೇಕಾನಂದ ರೆಡ್ಡಿ, ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕಿದೆ. ಅವರ ವಿಧಾನ ಪರಿಷತ್ ಸ್ಥಾನದ ಅವಧಿಯು ಮಾರ್ಚ್ 30ಕ್ಕೆ ಕೊನೆಗೊಂಡಿದೆ.
ಈಗ, ವಿವೇಕಾನಂದ ರೆಡ್ಡಿ ಅವರು ತಮ್ಮ ಅತ್ತಿಗೆ ವಿರುದ್ಧ ಕಣಕ್ಕಿಳಿಯಲು ಒಪ್ಪಿದ್ದಷ್ಟೇ ಅಲ್ಲ, ಕಡಪಾ ಲೋಕಸಭಾ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿರುವ ಜಗನ್ ವಿರುದ್ಧ ತಮ್ಮ ಅಳಿಯನಿಗೆ ಕಾಂಗ್ರೆಸ್ ಟಿಕೆಟ್ ದೊರಕಿಸಲು ಕೂಡ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ತಿಂಗಳು ಸ್ಥಳೀಯ ಸಂಸ್ಥೆಗಳ ಮೂಲಕ 9 ವಿಧಾನ ಪರಿಷತ್ ಸ್ಥಾನಗಳಲ್ಲಿ 3ನ್ನು ಕಬಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಜಗನ್ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ, ಈ ಉಪಚುನಾವಣೆ ಮೊದಲ ಪ್ರಧಾನ ಅಗ್ನಿ ಪರೀಕ್ಷೆ.
ಈ ನಡುವೆ, ಒಡೆದ ಕಾಂಗ್ರೆಸ್‌ಗಳ ಹೋರಾಟದ ನಡುವೆ, ತೆಲುಗು ದೇಶಂ ಪಕ್ಷ ಕೂಡ ಮೂರನೇ ಪಕ್ಷವಾಗಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಮೇ 8ರ ಚುನಾವಣೆಯಲ್ಲಿ ಯಾರು ಏನಾಗುತ್ತಾರೆ ಎಂಬುದಕ್ಕೆ ಮೇ 13ರವರೆಗೆ ಕಾಯಬೇಕು.