ಪುಟ್ಟಪರ್ತಿ (ಆಂಧ್ರಪ್ರದೇಶ), ಸೋಮವಾರ, 4 ಏಪ್ರಿಲ್ 2011( 20:26 IST )
ದೇವಮಾನವ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರೀಗ ಡಯಾಲಿಸಿಸ್‌ನಲ್ಲಿದ್ದು, ಬೆಳಗ್ಗೆ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದಿದ್ದ ವೈದ್ಯರು, ಸಾಯಂಕಾಲದ ಹೊತ್ತಿಗೆ, ಸಾಯಿಬಾಬಾ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ. ಸಾಯಿಬಾಬಾ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ.
ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ನಡುವೆ, ಸತ್ಯ ಸಾಯಿಬಾಬಾ ಅವರ ತ್ವರಿತ ಚೇತರಿಕೆಗಾಗಿ ಭಕ್ತಾದಿಗಳು ಅಲ್ಲಲ್ಲಿ ಪೂಜೆ, ಪ್ರಾರ್ಥನೆಗಳನ್ನು ನೆರವೇರಿಸುತ್ತಿದ್ದಾರೆ.
ಕಿಡ್ನಿ ತೊಂದರೆಯಿಂದಾಗಿ, ಭಾನುವಾರ ಅವರ ದೇಹದಲ್ಲಿ ಯೂರಿಯಾ ಪ್ರಮಾಣ ಏರಿಕೆಯಾಗಿ, ಮೂತ್ರ ವಿಸರ್ಜನೆಯ ಪ್ರಮಾಣ ತಗ್ಗಿತ್ತು. ಹೀಗಾಗಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದ್ದು, ಪೇಸ್‌ಮೇಕರ್ ಕೂಡ ಅಳವಡಿಸಲಾಗಿದೆ ಎಂದು ಪುಟ್ಟಪರ್ತಿ ಸಾಯಿಬಾಬಾ ಆಸ್ಪತ್ರೆ ನಿರ್ದೇಶಕರಾದ ಡಾ.ಎನ್.ಸಫಾಯಾ ತಿಳಿಸಿದ್ದಾರೆ.
ಹೀಗಾಗಿ ಇಂದು ಚಾಂದ್ರಮಾನ ಯುಗಾದಿಯ ಸಂದರ್ಭ ತೆಲುಗು ಹೊಸ ವರ್ಷವೂ ಆಗಿರುವುದರಿಂದ, ಆ ದಿನದ ವಿಶೇಷ ದರ್ಶನವು ಭಕ್ತರಿಗೆ ಲಭ್ಯವಿಲ್ಲ. ಸದ್ಯಕ್ಕೆ ಅವರ ಆರೋಗ್ಯವು ಸ್ಥಿರವಾಗಿದ್ದು, ಪ್ರಮುಖ ಅಂಗಾಂಗಳು ಸಮಾಧಾನಕರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ಶ್ವಾಸಕೋಶ ಮತ್ತು ಎದೆಯ ನೋವಿನಿಂದಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದ ಸಾಯಿಬಾಬಾಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ. 85 ವರ್ಷದ ಸತ್ಯ ಸಾಯಿಬಾಬಾ ಅವರನ್ನು ಮಾರ್ಚ್ 28ರಂದು ಪುಟ್ಟಪರ್ತಿಯ ಪ್ರಶಾಂತಿ ಗ್ರಾಮದ ಸೂಪರ್ ಸ್ಷೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.