ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ.ನಾ.: ಕಾಂಗ್ರೆಸ್ ಶ್ರೀಮಂತ ಅಭ್ಯರ್ಥಿಯ ಆಸ್ತಿ 127 ಕೋಟಿ (Tamilnadu Elections | Crorepati | Candidates | Vasanth Kumar | Rich Candidate)
ತಮಿಳುನಾಡಿನ ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿದ್ದು, ಇಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತೇ? ತಿರುನಲ್ವೇಲಿ ಜಿಲ್ಲೆಯ ನಂಗುನೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಎಲೆಕ್ಟ್ರಾನಿಕ್ ವಸ್ತುಗಳ ಡೀಲರ್ ಎಚ್.ವಸಂತಕುಮಾರ್. ಅವರ ಆಸ್ತಿಪಾಸ್ತಿಯ ಮೊತ್ತ ಎಷ್ಟು ಗೊತ್ತೇ? 127 ಕೋಟಿ ರೂಪಾಯಿ. ಇದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿರುವ ಅಧಿಕೃತ ಶ್ರೀಮಂತಿಕೆಯಷ್ಟೇ.

ಎರಡನೇ ಅತೀ ಶ್ರೀಮಂತ ವ್ಯಕ್ತಿ ಎಂದರೆ ಕರೂರು ಜಿಲ್ಲೆಯ ಅರವಕುರಿಚ್ಚಿ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಕೆ.ಸಿ.ಪಳನಿಸ್ವಾಮಿ. ಅವರ ಆಸ್ತಿ 65 ಕೋಟಿ ರೂಪಾಯಿ.

ವಸಂತಕುಮಾರ್ ಅವರು ಹಾಲಿ ಶಾಸಕರಾಗಿದ್ದು, ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ "ವಸಂತ್ ಎಂಡ್ ಕೋ" ಸಂಸ್ಥೆಯ ಮಾಲೀಕ. ಅವರಿಗೆ ತಮಿಳಿನ ವಸಂತ ಟಿವಿ ಚಾನೆಲ್ ಕೂಡಾ ಇದೆ. 2006ರಲ್ಲಿ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದಂದಿನಿಂದ ಅವರ ಆಸ್ತಿ ಪಾಸ್ತಿಯು 2.49 ಪಟ್ಟು ಹೆಚ್ಚಾಗಿದೆ. ಅವರಿಗಿರುವ ಸಾಲ 46 ಕೋಟಿ. 2006ರಲ್ಲಿ ಅವರು ಬಹಿರಂಗಪಡಿಸಿದ್ದ ಆಸ್ತಿ 36.38 ಕೋಟಿ. ಅಂದು ಯಾವುದೇ ಕೃಷಿ ಭೂಮಿ ಇರಲಿಲ್ಲ.

ಈಗಿನ ಅಂದರೆ ಐದು ವರ್ಷಗಳ ಬಳಿಕದ ಅಫಿದವಿತ್ ಪ್ರಕಾರ, ಅವರ ಬಳಿ 42.94 ಕೋಟಿಯ ಕಟ್ಟಡಗಳೇ ಇವೆ. 2.18 ಕೋಟಿಯ ವಾಹನಗಳು, 4.52 ಕೋಟಿ ಬೆಲೆ ಬಾಳುವ ಕೃಷಿ ಭೂಮಿ ಇದೆ.

ಇನ್ನು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಕೂಡ ಆಸ್ತಿ ಪಾಸ್ತಿಯಲ್ಲಿ ಹಿಂದೆ ಬಿದ್ದಿಲ್ಲ. ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ 51 ಕೋಟಿ ರೂಪಾಯಿ ಘೋಷಿತ ಆಸ್ತಿ ಹೊಂದಿದ್ದಾರೆ. ಅಧಿಕಾರದಲ್ಲಿಲ್ಲದಿದ್ದರೂ ಕೂಡ ಆಕೆಯ ಆಸ್ತಿ ಹಿಂದೆ ಸ್ಪರ್ಧಿಸಿದ್ದ ಅವಧಿಗಿಂತ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಆಕೆಯ ಪೊಯೆಸ್ ಗಾರ್ಡನ್ ನಿವಾಸದ ಬೆಲೆಯೇ 20 ಕೋಟಿ ರೂಪಾಯಿ. ಇದಲ್ಲದೆ ಅವರಿಗೆ ಚೆನ್ನೈ, ಹೈದರಾಬಾದ್, ಕೊಡನಾಡು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಬೇರೆ ಆಸ್ತಿಪಾಸ್ತಿಯೂ ಇದೆ.

ಡಿಎಂಡಿಕೆ ಮುಖಂಡ ವಿಜಯಕಾಂತ್ 47 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ಅವರ ಪ್ರಮುಖ ಹೂಡಿಕೆ ಕೃಷಿ ಭೂಮಿಯಲ್ಲಿ. 11.25 ಕೋಟಿ ರೂಪಾಯಿ ಹೂಡಿದ್ದಾರೆ ಅವರು.

ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತು ಅವರ ಇಬ್ಬರು ಪತ್ನಿಯರ ಒಟ್ಟು ಘೋಷಿತ ಆಸ್ತಿ 41 ಕೋಟಿ. ಅಂತೆಯೇ ಅಧಿಕಾರಸ್ಥ ಡಿಎಂಕೆಯ ಹೆಚ್ಚಿನ ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ. ಕಳೆದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಅವರ ಆಸ್ತಿ ಹೆಚ್ಚಾಗುತ್ತಲೇ ಹೋಗಿದೆ.

ವಿರುಧ್‌ನಗರದ ಡಿಎಂಡಿಕೆ ಅಭ್ಯರ್ಥಿ ಮತ್ತು ಮಾ-ಫೊಯ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್ ಒಡೆಯ ಕೆ.ಪಾಂಡ್ಯರಾಜನ್ 13 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರೆ, ಡಿಎಂಡಿಕೆಯ ರಾಧಾಪುರಂ ಕ್ಷೇತ್ರದ ಅಭ್ಯರ್ಥಿ ಮೈಕೆಲ್ ರಾಯಪ್ಪನ್ 24.5 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಕಡಯನಲ್ಲೂರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪೀಟರ್ ಅಲ್ಫೋನ್ಸ್ 5.86 ಆಸ್ತಿ ಘೋಷಿಸಿದ್ದಾರೆ.

ಅತ್ಯಂತ ಬಡ ಅಭ್ಯರ್ಥಿಯೆಂದರೆ ಸಿಪಿಎಂನಿಂದ ದಿಂಡಿಗಲ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೆ.ಬಾಲಭಾರತಿ. ಅವರ ಆಸ್ತಿಯ ಮೌಲ್ಯ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಷ್ಟೆ.
ಇವನ್ನೂ ಓದಿ