ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚುನಾವಣಾ ಸಮೀಕ್ಷೆ: ತ.ನಾಡಿನಲ್ಲಿ ಜಯಾ, ಬಂಗಾಳ- ತೃಣಮೂಲಕ್ಕೆ (Election 2011, Assembly Election 2011, Tamil Nadu, West Bengal, Kerala, Assam, Jayalalitha, Karunanidhi)
PTI
ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕಿ ಜಯಲಲಿತಾ ನೇತೃತ್ವದ ಮೈತ್ರಿಕೂಟವು ಮೂರನೇ ಒಂದಂಶಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಮರಳಲಿದೆ ಎನ್ನುತ್ತದೆ ಹೆಡ್‌ಲೈನ್ಸ್ ಟುಡೇ-ಆರ್ಗ್ ಜನಮತ ಸಮೀಕ್ಷೆ.

ಶೇ.50ರಷ್ಟು ಮತಗಳ ಪಾಲಿನೊಂದಿಗೆ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 234 ವಿಧಾನಸಭಾ ಕ್ಷೇತ್ರಗಳಲ್ಲಿ 164ನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ ಎನ್ನುತ್ತದೆ ಈ ಸಮೀಕ್ಷೆ. ಕೇಂದ್ರ ಮಟ್ಟದಲ್ಲಿ ಬಹುಕೋಟಿ ರೂಪಾಯಿಗಳ 2ಜಿ ಹಗರಣದ ಸುಳಿಯಲ್ಲಿ ನಲುಗಿರುವ ಆಡಳಿತಾರೂಢ ಡಿಎಂಕೆ ಮೈತ್ರಿಕೂಟವು ಶೇ.45 ಮತಗಳ ಪಾಲಿನೊಂದಿಗೆ ಕೇವಲ 68 ಸ್ಥಾನಗಳಲ್ಲಿ ಜಯ ದಾಖಲಿಸುತ್ತದೆ ಎಂದಿದೆ ಈ ಸಮೀಕ್ಷೆ.

ಜನಾಭಿಪ್ರಾಯ ಸಮೀಕ್ಷೆಯ ಪ್ರಕಾರ, ಮುಂದಿನ ಮುಖ್ಯಮಂತ್ರಿಯಾಗಲು ಶೇ.36.6 ಮಂದಿ ಜಯಲಲಿತಾರನ್ನು ಬೆಂಬಲಿಸಿದ್ದರೆ, ಶೇ.34.1 ಮಂದಿ ಕರುಣಾನಿಧಿಯನ್ನು ಬೆಂಬಲಿಸಿದ್ದಾರೆ. ಸರಕಾರ ಬದಲಾಗಬೇಕೆಂದು ಶೇ.50.6 ಮಂದಿ ಬಯಸಿದ್ದು, ಹಾಲಿ ಸರಕಾರವೇ ಮುಂದುವರಿಯಲಿ ಎಂದಿರುವುದು ಶೇ. 36.3 ಮಂದಿ.

ಜನರ ಓಟಿನ ವಿಧಾನದ ಮೇಲೆ ಭ್ರಷ್ಟಾಚಾರವೇ ಪ್ರಮುಖ ಸಂಗತಿಯಾಗಿಬಿಟ್ಟಿದೆ. ಶೇ.50.5 ಮಂದಿ ಭ್ರಷ್ಟಾಚಾರವೇ ಪ್ರಧಾನ ವಿಷಯ ಎಂದುಹೇಳಿದ್ದರೆ, ಅಲ್ಲ ಎಂದವರು ಶೇ.33.6 ಮಂದಿ. 2ಜಿ ಸ್ಪೆಕ್ಟ್ರಂ ಹಂಚಿಕೆಯು ದೇಶದ ಖಜಾನೆಗೆ ನಷ್ಟ ತಂದೊಡ್ಡಿದೆ ಎಂಬುದನ್ನು ಶೇ.50ಕ್ಕೂ ಹೆಚ್ಚು ಮಂದಿ ಒಪ್ಪಿಕೊಳ್ಳುತ್ತಾರೆ. ಆದರೆ ಹಾಗೇನೂ ಆಗಿರಲಿಕ್ಕಿಲ್ಲ, ನಷ್ಟವೇನಿಲ್ಲ ಎಂದು ಹೇಳುವವರು ಶೇ. 17.3 ಮಂದಿ ಮಾತ್ರ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.47.6 ಮಂದಿ ತಾವು 2009ರ ಲೋಕಸಭೆ ಚುನಾವಣೆಗಳಲ್ಲಿ ಹಾಗೂ 2006ರ ವಿಧಾನಸಭೆ ಚುನಾವಣೆಗಳಲ್ಲಿ ಶೇ. 47.5 ಮಂದಿ ಡಿಎಂಕೆ-ಕಾಂಗ್ರೆಸ್ ಮಿತ್ರಕೂಟಕ್ಕೆ ಮತ ನೀಡಿದ್ದಾಗಿ ಹೇಳಿದ್ದಾರೆ. ಅಂತೆಯೇ ಶೇ.30 ಮಂದಿ, ತಾವು 2009ರ ಲೋಕಸಭೆ ಚುನಾವಣೆಯಲ್ಲಿ ಹಾಗೂ ಶೇ.29.4 ಮಂದಿ 2006ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟಕ್ಕೆ ಮತ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ರಂಗ...
ಕೇರಳದಲ್ಲಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶೇ.48 ಮತಗಳನ್ನು ಪಡೆದು 140ರಲ್ಲಿ 96 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಲಿದೆ ಎಂದು ಸಮೀಕ್ಷೆ ಹೇಳಿದೆ. ಈಗ ಆಡಳಿತದಲ್ಲಿರುವ ಎಡರಂಗ (ಎಲ್‌ಡಿಎಫ್) ಶೇ.40 ಓಟಿನ ಪಾಲಿನೊಂದಿಗೆ 41 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಎಂದಿದೆ ಸಮೀಕ್ಷೆ.

ಪಶ್ಚಿಮ ಬಂಗಾಳದಲ್ಲಿ...
294 ಸ್ಥಾನಗಳುಳ್ಳ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮಿತ್ರಕೂಟವು ಶೇ.44 ಓಟಿನ ಪಾಲಿನೊಂದಿಗೆ 182 ಸ್ಥಾನಗಳನ್ನು ಪಡೆದು ಎಡರಂಗದ ಮೂರು ದಶಕಗಳ ಆಳ್ವಿಕೆಯನ್ನು ಕೊನೆಗೊಳಿಸಲಿದೆ. ಎಡರಂಗಕ್ಕೆ ಶೇ.1ರಷ್ಟು ಮತಗಳು ಕಡಿಮೆ ಬೀಳಲಿದ್ದು, 101 ಸ್ಥಾನಗಳನ್ನು ಮಾತ್ರವೇ ಗೆಲ್ಲಲು ಸಾಧ್ಯವಾಗುತ್ತದೆ ಎಂದಿದೆ ಸಮೀಕ್ಷೆ.

ಅಸ್ಸಾಂನಲ್ಲಿ ಅತಂತ್ರ...
ಅಸ್ಸಾಂನಲ್ಲಿ, ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ಶೇ.32 ಓಟಿನ ಪಾಲಿನೊಂದಿಗೆ 46 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಳ್ಳಲು ಒದ್ದಾಟ ನಡೆಸಲಿದೆ. ಅಸ್ಸಾಂ ಗಣ ಪರಿಷತ್ ಶೇ.25 ಮತಗಳೊಂದಿಗೆ 38 ಸ್ಥಾನ ಗೆಲ್ಲುತ್ತದೆ. ಬಿಜೆಪಿ ಶೇ.12 ಮತಗಳೊಂದಿಗೆ 15 ಸ್ಥಾನಗಳನ್ನು ಮತ್ತು ಎಯುಡಿಎಫ್ ಶೇ.14 ಮತಗಳೊಂದಿಗೆ 15 ಸ್ಥಾನಗಳನ್ನು ಪಡೆಯಲಿದೆ.
ಇವನ್ನೂ ಓದಿ