ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಲ್ಲಿಲ್ಲದ ಲೋಕಪಾಲ ಮಸೂದೆಗೆ ಆಕ್ರೋಶ: ಹಜಾರೆ ಉಪವಾಸ (Lokpal Bill | Jan Lokpal Bill | Anna Hazare | Fast | Corruption in India)
ಭ್ರಷ್ಟಾಚಾರದ ನಿಗ್ರಹಕ್ಕಾಗಿ ಇರುವ ಲೋಕಪಾಲ ಮಸೂದೆಯ ರಚನೆಯಲ್ಲಿ ಪ್ರಜೆಗಳನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಖ್ಯಾತ ಸಾಮಾಜಿಕ ಹೋರಾಟಗಾರ, ಗಾಂಧಿ ವಾದಿ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್‌‍ನಲ್ಲಿ ಮಂಗಳವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವಂತೆಯೇ ಅವರ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಗಾಂಧಿ ಸಮಾಧಿ ರಾಜಘಾಟ್‌ನಲ್ಲಿ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಇಂಡಿಯಾ ಗೇಟ್ ಮೂಲಕ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಅಣ್ಣಾ ಹಜಾರೆ, ಉಪವಾಸ ಸತ್ಯಾಗ್ರಹ ಆರಂಭಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಲು ರಚಿಸಲಾಗುವ ಸಮಿತಿಯಲ್ಲಿ ಜನತೆಯನ್ನು ಹಾಗೂ ಕೆಲವು ಹಿರಿಯ ಸಚಿವರನ್ನು ಸೇರಿಸುವ ತನ್ನ ಬೇಡಿಕೆಯನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಿರಸ್ಕರಿಸಿರುವುದು ತೀರಾ ಖೇದದ ಸಂಗತಿ ಎಂದರು.

ಪ್ರತಿಯೊಂದು ಹೆಜ್ಜೆಯಲ್ಲಿಯೂ ಭ್ರಷ್ಟವಾಗಿರುವ ಸರಕಾರವು, ಈ ಕಾನೂನು ಅಂಗೀಕಾರವಾಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಿರುವ ಹಜಾರೆ, ಇದನ್ನು ಸಾಧಿಸಲು ಏನು ಮಾಡಲೂ ಸಿದ್ಧ ಎಂದು ಘೋಷಿಸಿದರು.

ನಾನು ಜೀವನವನ್ನೇ ಈ ದೇಶಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಕಳೆದ 35 ವರ್ಷಗಳಿಂದ ನನ್ನ ಮನೆಗೇ ಹೋಗಿಲ್ಲ. ಬಡ ಜನರಿಗೆ ನ್ಯಾಯ ದೊರೆಯಬೇಕೆಂಬುದೇ ನನ್ನಾಸೆ. ಅಧಿಕಾರಿಗಳ, ರಾಜಕಾರಣಿಗಳ ಭ್ರಷ್ಟಾಚಾರದಿಂದಾಗಿ ನಾವು ಕಳೆದುಕೊಳ್ಳುತ್ತಿರುವ ಹಣ ನಮಗೇ ವಾಪಸ್ ಬರಬೇಕು. ಈ ಸರಕಾರವಂತೂ ಎಲ್ಲ ಭ್ರಷ್ಟರನ್ನೂ ಸಾಕಿ ಸಲಹುತ್ತಿದೆ ಎಂದು ಹಜಾರೆ ಹೇಳಿದರು.

ಲೋಕಪಾಲ ಮಸೂದೆಯು ಈಗಿನ ಸ್ಥಿತಿಯಲ್ಲಿ ಹಲ್ಲಿಲ್ಲದ ಹಾವಿನಂತೆ ಎಂದು ಹೇಳಿರುವ ಹಜಾರೆ ಅವರು, ನಾಗರಿಕ ಸಮಾಜದ ಹಿರಿಯರು ಹಾಗೂ ಜನಸಾಮಾನ್ಯರ ಸಲಹೆಗಳನ್ನೆಲ್ಲಾ ಒಟ್ಟುಗೂಡಿಸಿ ಪ್ರತ್ಯೇಕ ಜನ ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಿದ್ದಾರೆ.

ಹಜಾರೆ ಅವರು 'ಭ್ರಷ್ಟಾಚಾರ ವಿರುದ್ಧ ಭಾರತ' ಎಂಬ ಸರಕಾರೇತರ ಸಂಘಟನೆಯ ಸದಸ್ಯರಾಗಿದ್ದು, ಇದರಲ್ಲಿ ಅರವಿಂದ ಕೇಜರಿವಾಲ್, ಕಿರಣ್ ಬೇಡಿ ಮತ್ತು ಸ್ವಾಮಿ ಅಗ್ನಿವೇಶ್ ಮುಂತಾದವರು ಸದಸ್ಯರಾಗಿ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಹಲ್ಲಿಲ್ಲದ ಭ್ರಷ್ಟಾಚಾರ ನಿಗ್ರಹ ಮಸೂದೆ
ಈಗಿನ ಲೋಕಪಾಲ ಮಸೂದೆಯ ಕರಡು ಪ್ರಕಾರ, ಲೋಕಪಾಲರು (ಲೋಕಾಯುಕ್ತರು) ಪ್ರಧಾನಿ ವಿರುದ್ಧ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತಿಲ್ಲ ಹಾಗೂ ಸಂಸತ್ ಸದಸ್ಯರು ಕೂಡ ಲೋಕಪಾಲರ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ.

ಇದರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿರುವವರಲ್ಲಿ ರಾಷ್ಟ್ರೀಯ ಸಲಹಾ ಮಂಡಳಿ ಕೂಡ ಒಂದು. ಇದೀಗ ಅಣ್ಣಾ ಹಜಾರೆಯ ನ್ಯಾಯಯುತ ಬೇಡಿಕೆಯಿಂದ ತೀವ್ರ ಇರಿಸುಮುರಿಸಿಗೆ ಒಳಗಾಗುವ ಹಿನ್ನೆಲೆಯಲ್ಲಿ ಆತಂಕ ಪ್ರಧಾನಿ ಸಿಂಗ್, ಉಪವಾಸ ಕೈಬಿಡುವಂತೆ ಹಜಾರೆಗೆ ಆಗ್ರಹಿಸಿದ್ದಾರೆ.

ಕಾರಣವೆಂದರೆ, ಈಗಿನ ಕರಡು ಪ್ರಕಾರ, ಲೋಕಪಾಲರು ತಾವೇ ನೇರವಾಗಿ ತನಿಖೆಗೆ ಇಳಿಯುವಂತಿಲ್ಲ. ಅದಕ್ಕೆ ಸದನದ ಸ್ಪೀಕರ್ ಅವರ ಶಿಫಾರಸು ಬೇಕಾಗುತ್ತದೆ. ಭ್ರಷ್ಟಾಚಾರದಲ್ಲಿ ತಪ್ಪಿತಸ್ಥರಾಗಿರುವ ಸಂಸದರ ಮೇಲೆ ಕ್ರಮ ಕೈಗೊಳ್ಳಲು ಲೋಕಪಾಲರಿಗೆ ಅಧಿಕಾರವಿರುವುದಿಲ್ಲ. ಅಲ್ಲದೆ, ಲೋಕಪಾಲ ಸಮಿತಿಗೆ ನಿವೃತ್ತ ನ್ಯಾಯಾಧೀಶರು ಮಾತ್ರವೇ ಸದಸ್ಯರಾಗಬಹುದು ಹಾಗೂ ಹಲವರು ಸದಸ್ಯರಾಗುವಂತಿಲ್ಲ ಎಂಬ ಉಲ್ಲೇಖಗಳೂ ಇವೆ.

ಸಾಮಾಜಿಕ ಕಾರ್ಯಕರ್ತರ ಪ್ರಮುಖ ಆಕ್ಷೇಪ ಇರುವುದು ಜಂಟಿ ಸಮಿತಿ ರಚನೆ ಬಗ್ಗೆ. ಈ ಸಮಿತಿಯಲ್ಲಿ ಕೇಂದ್ರದ ಸಚಿವರಾದ ಶರದ್ ಪವಾರ್ ಮತ್ತು ಕಪಿಲ್ ಸಿಬಲ್ ಇದ್ದಾರೆ. ಅವರು ಎಂದಿಗೂ ಎಲ್ಲೂ ಭ್ರಷ್ಟಾಚಾರವನ್ನು ಕಾಣುವುದು ಸಾಧ್ಯವೇ ಇಲ್ಲ ಎಂಬುದು ಅರವಿಂದ ಕೇಜರಿವಾಲ್ ಅವರ ವ್ಯಂಗ್ಯಭರಿತ ಆಕ್ಷೇಪ. ಅಂತೆಯೇ, ಜಂಟಿ ಸಮಿತಿಯಲ್ಲಿ ಶೇ.50ರಷ್ಟು ಸರಕಾರದ ಮಂದಿ, ಶೇ.50ರಷ್ಟು ಪ್ರಜೆಗಳಿಗೆ ಅವಕಾಶ ನೀಡಬೇಕೆಂಬುದು ಅಣ್ಣಾ ಹಜಾರೆ ಆಗ್ರಹ.

ಈಗಾಗಲೇ ತಮ್ಮ "ಸ್ವಚ್ಛ ರಾಜಕಾರಣಿ" ಎಂಬ ಪ್ರತಿಷ್ಠೆಗೆ ಧಕ್ಕೆ ಮಾಡಿಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈ ವಿವಾದವು ದೊಡ್ಡ ಸವಾಲೇ ಸರಿ.
ಇವನ್ನೂ ಓದಿ