ಮತದಾರರಿಗೆ ವಿತರಿಸಲೋ ಅಥವಾ ಬೇರಾವುದೇ ಚುನಾವಣಾ ಸಂಬಂಧಿತ ಅಕ್ರಮಗಳಿಗಾಗಿಯೋ ಬಸ್ಸಿನ ಟಾಪ್ (ಚಾವಣಿ) ಮೇಲೆ ಹಾಕಿಕೊಂಡು ತರಲಾಗಿದ್ದ 5 ಕೋಟಿ 11 ಲಕ್ಷ ರೂಪಾಯಿ ಮೊತ್ತದ ಗರಿ ಗರಿ ನೋಟುಗಳ ರಾಶಿಯನ್ನು ಚುನಾವಣಾಧಿಕಾರಿಗಳು ಮಂಗಳವಾರ ನಸುಕಿನ ವೇಳೆ ತಿರುಚ್ಚಿ ವೆಸ್ಟ್ ಕ್ಷೇತ್ರದಿಂದ ವಶಪಡಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ರಾಜ್ಯದಲ್ಲಿ ಇದುವರೆಗೆ ದೊರೆತ ಗರಿಷ್ಠ ಮೊತ್ತದ ಅಕ್ರಮ ಹಣ ಇದು ಎನ್ನಲಾಗುತ್ತಿದೆ. ಸುಳಿವು ಪಡೆದ ಅಧಿಕಾರಿಗಳು ನಸುಕು ಹರಿಯುವ ಮುಂಚೆ 2 ಗಂಟೆಯ ಕತ್ತಲಲ್ಲಿ ಪೊನ್ನಾಗರದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಿಂದ ಈ ಹಣ ವಶಪಡಿಸಿಕೊಂಡಿದ್ದಾರೆ. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಕಟ್ಟುಗಳನ್ನು ಬಸ್‌ನ ಟಾಪ್ ಮೇಲೆ ಐದು ಚರ್ಮದ ಚೀಲಗಳಲ್ಲಿ ಸುತ್ತಿಡಲಾಗಿತ್ತು. ಅಧಿಕಾರಿಗಳು ಬಸ್ಸನ್ನು ತಪಾಸಣೆ ಮಾಡುತ್ತಿರುವಾಗ ಅನತಿ ದೂರದಲ್ಲಿ ಕಾರಿನ ಬಳಿ ನಿಂತಿದ್ದ ಕೆಲವರು ಓಡಿ ಪರಾರಿಯಾದರು. ಇದು ಯಾರಿಗೆ ಸೇರಿದ ಹಣ ಎಂಬುದರ ಪತ್ತೆ ಕಾರ್ಯ ಮುಂದುವರಿದಿದೆ. ಬಸ್ಸು ಮತ್ತು ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಹಣವನ್ನು ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಒಪ್ಪಿಸಲಾಗಿದ್ದು, ಅವರು ತನಿಖೆ ಮುಂದುವರಿಸಲಿದ್ದಾರೆ.
ಡಿಎಂಕೆ ನಾಯಕ, ಮಾಜಿ ಕೇಂದ್ರ ಸಚಿವ, ಈಗ ಜೈಲಿನಲ್ಲಿರುವ ಎ.ರಾಜಾ ಮೂಲಕ 2ಜಿ ಸ್ಪೆಕ್ಟ್ರಂ ಹಂಚಿಕೆ ವಿತರಣೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಕುರಿತು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಿಳುನಾಡು ಚುನಾವಣೆಗಳ ಮೇಲೂ ಈ ಭ್ರಷ್ಟಾಚಾರದ ಹಣ ಹರಿದುಬರುತ್ತಿದೆಯೇ ಎಂಬುದು ಜನರಲ್ಲಿ ಎದ್ದಿರುವ ಸಂದೇಹ.
ಇದೇ ವೇಳೆ, ತಿರುಚಿ ವೆಸ್ಟ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ, ರಾಜ್ಯದ ಸಾರಿಗೆ ಸಚಿವ ಕೆ.ಎನ್.ನೆಹ್ರು ತಕ್ಷಣವೇ ಪತ್ರಿಕಾ ಹೇಳಿಕೆ ನೀಡಿ, ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಈ ಹಣವು ತನ್ನ ಸಂಬಂಧಿಕರಿಗೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.