ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ರಫ್ತು ನಿಷೇಧಕ್ಕೆ ಸುಪ್ರೀ ಕೋರ್ಟ್ ತಡೆ: ಸಿಎಂಗೆ ಹಿನ್ನಡೆ
(Illegal Mining | Iron Ore Export Ban | Supreme Court | CM Yeddyurappa)
ಗಣಿ ರಫ್ತು ನಿಷೇಧಕ್ಕೆ ಸುಪ್ರೀ ಕೋರ್ಟ್ ತಡೆ: ಸಿಎಂಗೆ ಹಿನ್ನಡೆ
ನವದೆಹಲಿ, ಮಂಗಳವಾರ, 5 ಏಪ್ರಿಲ್ 2011( 15:36 IST )
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರವು ಅದಿರು ರಫ್ತು ಮೇಲೆ ಹೇರಲಾಗಿದ್ದ ನಿಷೇಧಾಜ್ಞೆಗೆ ಸುಪ್ರೀಂ ಕೋರ್ಟು ಮಂಗಳವಾರ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. ಇದರೊಂದಿಗೆ, ಅಕ್ರಮ ಗಣಿಗಾರಿಕೆ ತಡೆಯಲು ಪಣ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದರೆ, ಗಣಿ ಧಣಿಗಳು ಕೊಂಚ ನಿರಾಳರಾಗಿದ್ದಾರೆ.
ಕಳೆದ ಜುಲೈ 26 ಹಾಗೂ 28ರಂದು ರಾಜ್ಯದ ಬಿಜೆಪಿ ಸರಕಾರವು, ರಾಜ್ಯದ 10 ಬಂದರುಗಳಿಂದ ಅದಿರು ರಫ್ತು ಮಾಡುವುದನ್ನು ನಿಷೇಧಿಸಿತ್ತಲ್ಲದೆ, ಬೇರೆ ಬಂದರುಗಳಿಗೆ ಅದನ್ನು ಸಾಗಿಸುವ ಸಾರಿಗೆ ಪರವಾನಗಿಗಳಿಗೂ ತಡೆಯೊಡ್ಡಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು.
ಹಿಂದೆ ಹೈಕೋರ್ಟಿನಲ್ಲಿ ಸರಕಾರವು, ನೂತನ ಗಣಿ ನೀತಿಯೊಂದನ್ನು ರೂಪಿಸಲಾಗುತ್ತಿದ್ದು, ಆರು ತಿಂಗಳಲ್ಲಿ ಸಿದ್ಧವಾಗಲಿದೆ. ಅದು ಜಾರಿಗೆ ತರುವವರೆಗೆ ರಫ್ತು ನಿಷೇಧಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಕೇಳಿಕೊಂಡ ಮೇರೆಗೆ, ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರಿಂದ ಗಣಿ ಮಾಲೀಕರು ಸುಪ್ರಿಂ ಕೋರ್ಟ್ ಮೊರೆ ಹೋಗಿ, ನಿಷೇಧಾಜ್ಞೆ ತೆರವುಗೊಳಿಸುವಂತೆ ಕೋರಿಕೊಂಡಿದ್ದರು. ಅಕ್ರಮ ಗಣಿಗಾರಿಕೆ ತಡೆಯುವುದಲ್ಲದೆ, ಗಣಿಯನ್ನು ಸ್ಥಳೀಯ ಉಕ್ಕಿನ ಕಾರ್ಖಾನೆಗಳಿಗೇ ಬಳಸಿ, ಸಂಪನ್ಮೂಲವನ್ನು ರಾಜ್ಯದ ಅಭಿವೃದ್ಧಿಗೆ ಬಳಸುವ ಉದ್ದೇಶ ತಮ್ಮದು ಎಂದು ರಾಜ್ಯ ಬಿಜೆಪಿ ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು.
ಇದೀಗ ದ್ವಿಸದಸ್ಯ ಸುಪ್ರೀಂ ಕೋರ್ಟು ಪೀಠವು ತನ್ನ ತೀರ್ಪು ನೀಡಿ, ಏಪ್ರಿಲ್ 20ರಿಂದ ಅನ್ವಯವಾಗುವಂತೆ ಈ ನಿಷೇಧಾಜ್ಞೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತು.
ಅದಿರು ರಫ್ತು ನಿಷೇಧಿಸಿದ್ದ ಕಾರಣ, ಬಂದರುಗಳಲ್ಲಿ ಸಾಕಷ್ಟು ಅದಿರು ರಾಶಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಗೆ ಮುನ್ನ ಗಣಿ ಧಣಿಗಳು ಸಾಕಷ್ಟು ಅದಿರನ್ನು ರಫ್ತು ಮಾಡಿ ಲಾಭ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರದ ಕುರಿತು ಲೋಕಾಯುಕ್ತ ತನಿಖೆಯೂ ನಡೆಯುತ್ತಿದ್ದು, ಅದರ ವರದಿ ಬರುವವರೆಗಾದರೂ ತಡೆಯಾಜ್ಞೆ ನೀಡಬೇಕು. ಮತ್ತು ಹೊಸ ಗಣಿ ನೀತಿ ಈಗಾಗಲೇ ಸಿದ್ಧವಾಗಿದ್ದು, ಅದರ ಅನುಷ್ಠಾನಕ್ಕೆ ಕಾಲಾವಕಾಶ ನೀಡುವಂತೆ ರಾಜ್ಯ ಸರಕಾರವು ಸುಪ್ರೀಂ ಕೋರ್ಟನ್ನು ಕೇಳಿಕೊಂಡಿತು.
ಆದರೆ, ಹೊಸ ಗಣಿ ನೀತಿ ಜಾರಿಗೆ ತಿಂಗಳುಗಟ್ಟಲೆ ಕಾಲಾವಕಾಶ ನೀಡುವುದು ಅಸಾಧ್ಯ ಎಂದಿರುವ ನ್ಯಾಯಪೀಠವು, 15 ದಿನಗಳ ಕಾಲಾವಕಾಶವನ್ನು ಕೊಟ್ಟಿದೆ. ಮುಂದಿನ ವಿಚಾರಣೆಯು ಮೇ ತಿಂಗಳ ಮೊದಲ ವಾರಕ್ಕೆ ನಿಗದಿಪಡಿಸಲಾಗಿದೆ.
ಭಾರತವು ವಿಶ್ವದ 3ನೇ ಅತಿದೊಡ್ಡ ಅದಿರು ರಫ್ತು ರಾಷ್ಟ್ರವಾಗಿದ್ದು, ದೇಶದಿಂದ ರಫ್ತಾಗುವ ಅದಿರಿನ ಕಾಲು ಭಾಗವೂ ಕರ್ನಾಟಕದಿಂದ ಬರುತ್ತಿದೆ. ಭಾರತದಿಂದ ಸುಮಾರು 100 ದಶಲಕ್ಷ ಟನ್ ಕಬ್ಬಿಣದ ಅದಿರು ಚೀನಾಕ್ಕೆ ರಫ್ತಾಗುತ್ತದೆ. ಕರ್ನಾಟಕದಿಂದ ಅದಿರು ರಫ್ತು ನಿಷೇಧಿಸಿದ್ದರಿಂದಾಗಿ ದೇಶದ ಅದಿರು ರಫ್ತು ಪ್ರಮಾಣವು ಫೆಬ್ರವರಿ ತಿಂಗಳಲ್ಲಿ ಶೇ.18.6ರಷ್ಟು ಕುಸಿತ ಕಂಡಿತ್ತು.