ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೇಕಿದ್ರೆ ಉಪವಾಸ ಮಾಡ್ಲಿ, ತಡೆಯಲ್ಲ ಎಂದಿತು ಕಾಂಗ್ರೆಸ್! (Lokpal Bill | Anna Hazare | Congress | Manish Tiwari | Fast)
PTI
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪೂರ್ಣ ಮನಸ್ಸಿಲ್ಲ ಎಂದು ಆರೋಪಿಸಿ, ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಆಮರಣಾಂತ ಉಪವಾಸ ಕೈಗೊಂಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು ಹೇಗೆಂದರೆ, "ಯಾರಾದರೂ ಉಪವಾಸ ಮಾಡುತ್ತಾರೆಂದಾದರೆ, ಯಾರೂ ಕೂಡ ಅವರನ್ನು ತಡೆಯಲಾಗದು"!

ಭ್ರಷ್ಟಾಚಾರ ವಿರುದ್ಧ ಜನಾಂದೋಲನ ಕೈಗೊಳ್ಳುತ್ತಾ, ಲೋಕಪಾಲ ಮಸೂದೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿ ಹಜಾರೆ ಕೈಗೊಂಡಿರುವ ಕ್ರಮದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ವಕ್ತಾರ ಮನೀಷ್ ತಿವಾರಿ, "ನಮ್ಮದು ಸ್ವತಂತ್ರ ದೇಶ. ಯಾರಿಗಾದರೂ ಉಪವಾಸ ಮಾಡುವ ಇಷ್ಟವಿದ್ದರೆ, ಅವರನ್ನು ಯಾರೂ ತಡೆಯುವುದಿಲ್ಲ" ಎಂದು ಉತ್ತರಿಸಿದರು.

ಲೋಕಪಾಲ ಮಸೂದೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರರ ಸಲಹೆಯನ್ನು ಕೇಂದ್ರ ಸರಕಾರವು ಧಿಕ್ಕರಿಸಿರುವುದರಿಂದಾಗಿ ಮನನೊಂದು ಅಣ್ಣಾ ಹಜಾರೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಆರಂಭಿಸಿದ್ದಾರೆ.

ಸರಕಾರ ಸಿದ್ಧಪಡಿಸಿರುವ 'ಲೋಕಪಾಲ ಮಸೂದೆ' ಕರಡು ಮಸೂದೆಯು ಅದರ ಉದ್ದೇಶಿತ ಗುರಿ ಸಾಧನೆಗೆ ವಿಫಲವಾಗುತ್ತದೆ ಎಂದು ಹಜಾರೆ ಹೇಳುತ್ತಲೇ ಬಂದಿದ್ದರು. ಸಾಮಾಜಿಕ ಕಾರ್ಯಕರ್ತರು, ಹಿರಿಯರು ಸೇರಿಕೊಂಡು ಸಿದ್ಧಪಡಿಸಿರುವ 'ಜನ ಲೋಕಪಾಲ ಮಸೂದೆ'ಯ ಅನ್ವಯ, ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಯಾರ ವಿರುದ್ಧವಾದರೂ ಭ್ರಷ್ಟಾಚಾರ ಬೆಳಕಿಗೆ ಬಂದದ್ದೇ ಆದರೆ, ತಕ್ಷಣವೇ ಆತನನ್ನು ಬಂಧಿಸುವಷ್ಟು ಪ್ರಬಲವಾಗಿದೆ.

ಸರಕಾರದ ಮೇಲೆ ಒತ್ತಡ ಹೇರಲು ಎಲ್ಲರೂ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಹೋರಾಟ ನಡೆಸಬೇಕು ಎಂದು ಅಣ್ಣಾ ಹಜಾರೆ ಕರೆ ನೀಡಿದ್ದಾರೆ.

ಮನೀಷ್ ತಿವಾರಿ ಅವರು ಮಾತು ಮುಂದುವರಿಸಿ, ಈಗಾಗಲೇ ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದಲ್ಲಿ ಉಪಸಮಿತಿಯೊಂದನ್ನು ರಚಿಸಿದ್ದಾರೆ. ಪ್ರಕ್ರಿಯೆ ಜಾರಿಯಲ್ಲಿರುವಾಗ ಹಜಾರೆ ಉಪವಾಸ ಮಾಡುತ್ತಿರುವುದು 'ಅಪ್ರಬುದ್ಧ' ಎಂದೂ ಹೇಳಿದರು.

ಸರಕಾರವು ಮಸೂದೆಯನ್ನು ಮಂಡಿಸುತ್ತದೆ ಮತ್ತು ಸಂಸತ್ ಅದನ್ನು ಅಂಗೀಕರಿಸುತ್ತದೆ. ಈ ನಡುವೆ, ಪರಿಗಣನೆಗೆ ಯೋಗ್ಯವಾದ ಸಲಹೆಗಳೇನಾದರೂ ಬಂದರೆ, ತಿದ್ದುಪಡಿಯನ್ನೂ ಮಾಡಬಹುದಾಗಿದೆ ಎಂದ ಅವರು, ರಾಷ್ಟ್ರೀಯ ಸಲಹಾ ಮಂಡಳಿಯೇ ಲೋಕಪಾಲ ಮಸೂದೆ ಕರಡನ್ನು ತಿರಸ್ಕರಿಸಿದೆಯಲ್ಲವೇ ಎಂದು ನೆನಪಿಸಿದಾಗ, ಪ್ರಜಾಸತ್ತೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ, ಆರೋಗ್ಯಕರ ಚರ್ಚೆಯ ಸಂದರ್ಭ ಒಮ್ಮತಕ್ಕೆ ಬರಲಾಗಿದೆ ಎಂದರು.
ಇವನ್ನೂ ಓದಿ