ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸಿಗೆ ಅಣ್ಣಾ ಹಜಾರೆ ಆರೆಸ್ಸೆಸ್ ಏಜೆಂಟರಂತೆ! (Anti Corruption | Anna Hazare | Fast till Death | UPA | Congress Scam)
ಗಾಂಧಿವಾದವನ್ನೇ ಧ್ಯೇಯವಾಗಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಮುಂದಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ವಿರುದ್ಧ ಕಾಂಗ್ರೆಸ್ ಮತ್ತೆ ತಿರುಗಿಬಿದ್ದಿದ್ದು, ಅವರನ್ನು 'ಆರೆಸ್ಸೆಸ್ ಏಜೆಂಟ್' ಎಂದು ಬಣ್ಣಿಸಿದೆ.

ಗಾಂಧಿ ವಾದವನ್ನು ಅನುಸರಿಸುತ್ತಾ, ಗಾಂಧಿ ಹಾದಿಯಲ್ಲೇ ಉಪವಾಸ ಮಾಡುತ್ತಿರುವ ಅಣ್ಣಾ ಹಜಾರೆಯ ಚಳವಳಿಯಿಂದ ತೀವ್ರ ಆತಂಕಗೊಂಡಿರುವ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು, "ಹಜಾರೆ ಗಾಂಧಿ ವಾದಿಯಲ್ಲ, ಆರೆಸ್ಸೆಸ್ ಏಜೆಂಟ್" ಎಂದು ಆರೋಪಿಸಿದರು.

ಜಂತರ್ ಮಂತರ್‌ನಲ್ಲಿ ಮಂಗಳವಾರ ಉಪವಾಸ ಆರಂಭಿಸಿರುವ ಅಣ್ಣಾ ಹಜಾರೆಗೆ ದೇಶದೆಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ನೂರಾರು ನಾಗರಿಕರು ದೇಶದ ವಿವಿಧ ಕೇಂದ್ರಗಳಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸುವಾಗ ಜನರನ್ನೂ ಸೇರಿಸಿಕೊಳ್ಳಬೇಕು, ಹಿರಿಯರ ಸಲಹೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಹಜಾರೆ ಅವರು ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.

ಇದರ ಹಿಂದೆ ಒಳಸಂಚಿದೆ ಎಂದು ಹೇಳಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ ನಾಯಕ, ಹಿಂದೆ 1972ರಲ್ಲಿ ಬಾಂಗ್ಲಾ ದೇಶದ ಯುದ್ಧಾನಂತರದಲ್ಲಿ ಇಂದಿರಾ ಗಾಂಧಿ ಸರಕಾರವನ್ನು ಅಸ್ಥಿರಗೊಳಿಸಲು 'ಜೆಪಿ ಆಂದೋಲನ' ನಡೆಸಲಾಗಿತ್ತು. ನಂತರ ಬೋಫೋರ್ಸ್ ಹಗರಣದ ಹೆಸರಿನಲ್ಲಿ ರಾಜೀವ್ ಗಾಂಧಿ ವಿರುದ್ಧವೂ ಇದೇ ರೀತಿ ಹೋರಾಟ ಮಾಡಲಾಯಿತು. ಅದೇ ಶಕ್ತಿಗಳು ಈಗ ಹಜಾರೆ ಆಂಗೋಲನದೊಳಕ್ಕೂ ತೂರಿಕೊಂಡಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ಏಕೆ ಹಜಾರೆ ಮೇಲೆಯೇ ಮುಗಿಬೀಳುತ್ತಿದೆ ಎಂಬ ಪ್ರಶ್ನೆಗೆ, ಆಂದೋಲನದಲ್ಲಿಯೂ ಪಕ್ಷಪಾತ ಮಾಡಿದ್ದೇಕೆ? ವಿ.ಪಿ.ಸಿಂಗ್ ಆಗಲೀ, ದೇವೇಗೌಡರಾಗಲೀ ಅಥವಾ ಅಟಲ್ ಬಿಹಾರಿ ವಾಜಪೇಯಿಯವರಾಗಲೀ ಪ್ರಧಾನಿಯಾಗಿದ್ದಾಗ ಯಾರೂ ಉಪವಾಸ ಮಾಡಿರಲಿಲ್ಲ. ಹಜಾರೆ ಅವರು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಒಂದು ಮಾತೂ ಆಡಿಲ್ಲ ಎಂದು ಆರೋಪಿಸಿದರು ಅವರು.

ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್ ಮತ್ತಿತರರು ಕೂಡ ಈ ಹೋರಾಟ ನಡೆಸುತ್ತಿದ್ದಾರಲ್ಲಾ ಎಂದು ಹೇಳಿದಾಗ, "ಕಿರಣ್ ಬೇಡಿ ಈಗ ನಿವೃತ್ತಿಯ ಬಳಿಕವೂ ಐಡೆಂಟಿಟಿಗಾಗಿ ಏನೇನೋ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

ಇದೀಗ, ಕಾಂಗ್ರೆಸ್ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ 72ರ ಹರೆಯದ ಅಣ್ಣಾ ಹಜಾರೆ, ಹಿಂದೆ ಬಿಜೆಪಿ ಸರಕಾರದ ವಿರುದ್ಧ ಹೋರಾಡಿದಾಗ ಬೆಂಬಲ ನೀಡಿದ್ದ ಕಾಂಗ್ರೆಸ್, ಈಗ ಬಿಜೆಪಿ ಏಜೆಂಟ್ ಎಂದೆಲ್ಲಾ ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರಲ್ಲದೆ, ಜನತೆಯ ದಾರಿ ತಪ್ಪಿಸಬೇಡಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ಕರಡು ಸಿದ್ಧಪಡಿಸುವಾಗ ಜನ ಸಾಮಾನ್ಯರನ್ನೂ ಸೇರಿಸಿಕೊಳ್ಳಬೇಕೆಂಬ ತಮ್ಮ ಬೇಡಿಕೆ ಈಡೇರುವವರೆಗೆ, ತಾವು ಸತ್ತರೂ ಚಿಂತೆಯಿಲ್ಲ, ಈ ನಿರಶನ ಸತ್ಯಾಗ್ರಹ ಮುಂದುವರಿಸುವುದಾಗಿ ಹಜಾರೆ ಘೋಷಿಸಿದ್ದಾರೆ.

ಮಂಗಳವಾರ ಹಜಾರೆ ಅವರಿಗೆ ಬಿಜೆಪಿ ಮುಖಂಡರಾದ ಮನೇಕಾ ಗಾಂಧಿ, ಪ್ರಕಾಶ್ ಜಾವಡೇಕರ್, ಜೆಡಿಯು ಮುಖಂಡ ಶರದ್ ಯಾದವ್ ಮುಂತಾದವರು ಬೆಂಬಲ ನೀಡಿದ್ದರು.
ಇವನ್ನೂ ಓದಿ