ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ ವಿರುದ್ಧ ಹಜಾರೆಗೆ ಮೊದಲ ಜಯ: ಪವಾರ್ ಔಟ್ (Corruption | Anna Hazare | Jan Lokpal Bill | Sharad Pawar | Hunger Strike)
PTI
ಸತ್ತರೂ ಪರವಾಗಿಲ್ಲ, ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ಜನರನ್ನೂ ಸೇರಿಸಿಕೊಳ್ಳಬೇಕು, ಜನ ಲೋಕಪಾಲ ಮಸೂದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹವು ಗುರುವಾರ ಮೂರನೇ ದಿನಕ್ಕೆ ತಲುಪುತ್ತಿರುವಂತೆಯೇ, ಅವರ ಹೋರಾಟದಲ್ಲಿ ಯಶಸ್ಸಿನ ಮೊದಲ ಮೆಟ್ಟಿಲೇರಿದ್ದಾರೆ. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು, ಭ್ರಷ್ಟಾಚಾರದ ಕುರಿತು ರಚಿಸಲಾಗಿದ್ದ ಸಚಿವರ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರೂಪಿಸಲಾದ ಸಚಿವರ ಸಮಿತಿಯಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕ ಪವಾರ್ ಹೊರ ನಡೆದಿರುವುದು ಮಹತ್ವ ಪಡೆದಿದೆ. ಯಾಕೆಂದರೆ, ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೇ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಬಂದವರು.

ಶರದ್ ಪವಾರ್ ಕ್ರಮವನ್ನು ಸ್ವಾಗತಿಸಿರುವ ಅಣ್ಣಾ ಹಜಾರೆ, ಶರದ್ ಪವಾರ್ ಅವರು ಈ ಸಮಿತಿಯಿಂದ ಮಾತ್ರವಲ್ಲದೆ, ಕೇಂದ್ರದ ಮಂತ್ರಿ ಪಟ್ಟವನ್ನೂ ತ್ಯಾಗ ಮಾಡಿದರೆ ಒಳ್ಳೆಯದು ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ, "ಸಚಿವರ ಸಮಿತಿಯು ಭ್ರಷ್ಟಾಚಾರ-ನಿರೋಧಕ ಮಸೂದೆಯ ಕರಡು ಸಿದ್ಧಪಡಿಸುತ್ತಿದೆ ಎಂದಿದ್ದೀರಿ ನೀವು. ಈ ಸಮಿತಿ ಸದಸ್ಯರಲ್ಲೇ ಹೆಚ್ಚಿನವರು ಕಳಂಕಿತರಾಗಿದ್ದು, ಪರಿಣಾಮಕಾರಿ ಭ್ರಷ್ಟಾಚಾರ-ನಿರೋಧಕ ವ್ಯವಸ್ಥೆಯೇನಾದರೂ ಇದ್ದಿದ್ದರೆ, ಇವರೆಲ್ಲರೂ ಕಂಬಿಗಳ ಹಿಂದಿರಬೇಕಾಗುತ್ತಿತ್ತು" ಎಂದು ಚುಚ್ಚಿದ್ದಾರಲ್ಲದೆ, ಈ ಸಮಿತಿಯ ಅಸ್ತಿತ್ವದ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ.

ಸಂಘ ಪರಿವಾರ ಸಂಚು ಆರೋಪ ನಿರಾಕರಣೆ
ಮೂರು ದಿನಗಳಲ್ಲಿ ಒಂದುವರೆ ಕಿಲೋ ತೂಕ ಕಳೆದುಕೊಂಡಿರುವ 72ರ ಹರೆಯದ ಗಾಂಧಿವಾದಿ ಹಜಾರೆ, ತನ್ನ ಆರೋಗ್ಯದ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಒಂದು ವಾರ ಯಾವುದೇ ತೊಂದರೆಯಿಲ್ಲದೆ ಉಪವಾಸ ಮಾಡಬಲ್ಲೆ ಎಂದಿದ್ದಾರಲ್ಲದೆ, ಭ್ರಷ್ಟಾಚಾರ ವಿರುದ್ಧದ ತನ್ನ ಹೋರಾಟವನ್ನು "ಆರೆಸ್ಸೆಸ್ ಸಂಚು" ಎಂದೆಲ್ಲಾ ಜರೆದಿರುವ ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಆರೆಸ್ಸೆಸ್ ಅಥವಾ ಬಿಜೆಪಿ ಮುಂತಾದ ಸಂಘ ಪರಿವಾರದೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ. ತನ್ನ ಹೋರಾಟದ ಕುರಿತು ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಈ ಆರೋಪ ಮಾಡುತ್ತಿದೆ. ತನ್ನ ಹೋರಾಟ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ಅಲ್ಲವೇ ಅಲ್ಲ. ಭ್ರಷ್ಟಾಚಾರದ ವಿರುದ್ಧ ಮಾತ್ರ ಎಂದು ಅವರು ಸ್ಪಷ್ಟಪಡಿಸಿದರು.

ನಮ್ಮ ಭಾರತದ ದುರ್ಗತಿಗೆ ಕಾರಣ ಯಾರು...
ಕಳೆದ 35 ವರ್ಷಗಳಿಂದ ಸಾಮಾಜಿಕ ಹೋರಾಟ ಮಾಡುತ್ತಾ ಬಂದಿದ್ದೇನೆ. 35 ವರ್ಷಗಳಿಂದ ಮನೆಗೂ ಹೋಗಿಲ್ಲ. ನನಗೆ ಮೂವರು ಸಹೋದರರಿದ್ದಾರೆ. ಅವರ ಮಕ್ಕಳ ಹೆಸರು ಕೂಡ ನನಗೆ ಗೊತ್ತಿಲ್ಲ. ನನಗೆ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಕೂಡ ಇಲ್ಲ. ಜನ ನನ್ನ ಜೋಳಿಗೆಗೆ ಐದೋ ಹತ್ತೋ ರೂಪಾಯಿ ಹಾಕಬೇಕೆಂದು ನಾನು ಕೋರುತ್ತಿದ್ದೇನೆ. ಈ ಮೂಲಕವೇ ನಾನು ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ನಾನೇಕೆ ಕೈಜೋಡಿಸಬೇಕು? ಈ ದೇಶ ಆಳುತ್ತಿರುವವರಿಂದಾಗಿ ನಮ್ಮ ಚಿನ್ನದ ಬೀಡಾಗಿರುವ ಭಾರತ ಈ ಸ್ಥಿತಿಗೆ ಯಾಕೆ ತಲುಪಿದೆ ಎಂದವರು ಪ್ರಶ್ನಿಸಿದರು.

ಸೋನಿಯಾ-ಮನಮೋಹನ್ ಜತೆ ಮಾತ್ರ ಮಾತುಕತೆ
ಇದೇ ವೇಳೆ, ತಾವು ಮಾತುಕತೆಗೆ ಸಿದ್ಧರಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ ನಿರ್ಣಯ ಕೈಗೊಳ್ಳುವ ಅಧಿಕಾರವಿರುವವರ ಜೊತೆ ಮಾತ್ರ ನಾವು ಮಾತನಾಡುತ್ತೇವೆ ಎಂದು ಹಜಾರೆ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಅಧಿಕಾರವಿದೆ. ಹೀಗಾಗಿ ಅವರೊಂದಿಗೆ ಮಾತುಕತೆಗೆ ಸಿದ್ಧನಾಗಿದ್ದೇನೆ ಎಂದರು ಹಜಾರೆ.

ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲದ ಯಾವುದೇ ಸಮಿತಿಯೊಂದಿಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಕೂಡ ಭ್ರಷ್ಟಾಚಾರ ವಿರುದ್ಧದ ಸಚಿವರ ಸಮಿತಿಯನ್ನು ಉದ್ದೇಶಿಸಿ ಅವರು ಹೇಳಿದರು.

ಈ ಮಧ್ಯೆ, ಸಾಮಾಜಿಕ ಕಾರ್ಯಕರ್ತ, ಸ್ವಾಮಿ ಅಗ್ನಿವೇಶ್ ಹಾಗೂ ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ನಡುವೆ ಸಂಧಾನ ಪ್ರಯತ್ನಗಳು ನಡೆಯುತ್ತಿವೆ.

ಭಾರೀ ಜನ ಬೆಂಬಲ...
ಅಣ್ಣಾ ಹಜಾರೆ ಅವರು ಮಂಗಳವಾರ ಉಪವಾಸ ಆರಂಭಿಸಿದಂದಿನಿಂದ ಲಕ್ಷಾಂತರ ಮಂದಿ ದೇಶದ ವಿವಿಧೆಡೆ ಎಲ್ಲ ವರ್ಗಗಳ ಜನರು, ಜನ ಸಾಮಾನ್ಯರು, ಸಂಘಟನೆಗಳು, ಸಿನಿಮಾ ಮಂದಿ, ಮಠಾಧೀಶರು, ಹಿರಿಯರು-ಕಿರಿಯರೆಂಬ ಭೇದ ಭಾವವಿಲ್ಲದೆ, ಬೆಂಬಲ ಘೋಷಿಸಿ, ಸತ್ಯಾಗ್ರಹಗಳನ್ನು ಆರಂಭಿಸಿದ್ದಾರೆ.

ನಿಸ್ವಾರ್ಥವಾಗಿ, ಜನರ ರಕ್ಷಣೆಗೋಸ್ಕರ ನಡೆಯುತ್ತಿರುವ ಈ ಹೋರಾಟವು ಭಾರೀ ಜನಾಂದೋಲನದ ಸ್ವರೂಪ ಪಡೆಯುತ್ತಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ವಿಷಯ.
ಇವನ್ನೂ ಓದಿ