ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹಜಾರೆಗೆ ಯುವಜನತೆ ಬೆಂಬಲ (Facebook | Join Anna Hazare | Twitter | Anna Hazare | Lokpal Bill)
ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹಜಾರೆಗೆ ಯುವಜನತೆ ಬೆಂಬಲ
ನವದೆಹಲಿ, ಗುರುವಾರ, 7 ಏಪ್ರಿಲ್ 2011( 13:12 IST )
PTI
ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ದೇಶಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗಿದೆ.
ಕಠಿಣ ಭ್ರಷ್ಟಾಚಾರ ವಿರೋಧಿ ಕಾಯ್ದೆ ಜಾರಿಗೊಳಿಸುವಂತೆ ಅಣ್ಣಾ ಹಜಾರೆ ಅಮರಣ ನಿರಶನವನ್ನು ಕೈಗೊಂಡಿದ್ದು, ಸಾವಿರಾರು ಸಂಖ್ಯೆಯ ಯುವಕರು ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಭಾರಿ ಬೆಂಬಲ ಸೂಚಿಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸೇರ್ಪಡೆಯಾಗುವಂತೆ ಸಾವಿರಾರು ಮನವಿಗಳು ಹರಿದುಬರುತ್ತಿವೆ. 'ಜಾಯಿನ್ ಅಣ್ಣಾ ಹಜಾರೆ ಇನ್ ಫಾಸ್ಟ್ ಅಂಟು ಡೆತ್ ಟು ಡಿಮ್ಯಾಂಡ್ ಆಂಟಿ ಕರಪ್ಶನ್ ಲಾ' ಎನ್ನುವ ತಾಣಕ್ಕೆ ಕಳೆದ 48 ಗಂಟೆಗಳಲ್ಲಿ 7,500 ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್‌ನ ಅಧಿಕೃತ 'ಇಂಡಿಯಾ ಅಗೆನೆಸ್ಟ್ ಕರಪ್ಶನ್ ' ಪೇಜ್‌ಗೆ ಸುಮಾರು 40,700 ಬಳಕೆದಾರರು ಬೆಂಬಲ ಸೂಚಿಸಿದ್ದಾರೆ.ಜಂತರ್ ಮಂತರ್‌ನಲ್ಲಿ ಕಾರ್ಯಕರ್ತರು ಸಹಾಯವಾಣಿ (09718500606) ಸೇವೆಯನ್ನು ಆರಂಭಿಸಿದ್ದು, ಕರೆಗಳನ್ನು ಸ್ವೀಕರಿಸಿಲು ಆರು ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಮುಂಬೈಯಿಂದ 2.5ಲಕ್ಷ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಹಜಾರೆ ಬೆಂಬಲಿಗರು ಹೇಳಿದ್ದಾರೆ.
ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಪ್ರತಿ ನಿಮಿಷಕ್ಕೆ 45-50 ಅಪ್‌ಡೇಟ್‌ಗಳನ್ನು ಕಾಣಬಹುದಾಗಿದೆ. ಬಳಕೆದಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದರೊಂದಿಗೆ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಗೂಗಲ್‌ನಲ್ಲಿ ಕೂಡಾ ಅಣ್ಣಾ ಹಜಾರೆ ಮತ್ತು ಲೋಕಪಾಲ್ ಬಿಲ್ ಕೀವರ್ಡ್‌ಗಳ ಬಳಕೆಯಲ್ಲಿ ಭಾರಿ ಏರಿಕೆಯಾಗಿದ್ದು, ಕಳೆದ ಎರಡು ದಿನಗಳ ಅವಧಿಯಲ್ಲಿ ಸರ್ಚಿಂಗ್‌ನಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದೆ.
ಕೆಲ ಫೇಸ್‌ಬುಕ್ ಬಳಕೆದಾರರು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ನಾವು ನಿಮ್ಮೊಂದಿಗಿದ್ದೇವೆ ಪ್ರತಿಭಟನೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದಲ್ಲಿ ಈಜಿಪ್ತ್ ಲಿಬಿಯಾದಂತಹ ಕ್ರಾಂತಿ ಭಾರತದಲ್ಲಿ ಕಾಣಬಹುದಾಗಿದೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳವಾದ ಜಂತರ್ ಮಂತರ್‌ಗೆ ಭೇಟಿ ನೀಡುತ್ತಿದ್ದಾರೆ. ಶೇಖ್ ಸರಾಯಿ ಪ್ರದೇಶದ ನಿವಾಸಿಯಾದ ಹರ್ಷವರ್ಧನ್, ಮೊಬೈಲ್‌ನಲ್ಲಿ ಹಜಾರೆಯವರ ಚಿತ್ರವನ್ನು ಕ್ಲಿಕ್ಕಿಸಿದ್ದು, ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಗೆಳೆಯರಿಗೆ ರವಾನಿಸಿ ಬೆಂಬಲ ಸೂಚಿಸುವಂತೆ ಕೋರುವುದಾಗಿ ಹೇಳಿದ್ದಾರೆ.
ಅಣ್ಣಾ ಹಜಾರೆ 'ಜನ್ ಲೋಕಪಾಲ್ ಬಿಲ್' ಮಸೂದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದಾಗಿನಿಂದ ಆರ್‌ಎಲ್‌ಡಿ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಒಂ ಪ್ರಕಾಶ್ ಚೌತಾಲಾ ಮತ್ತು ಉಮಾಭಾರತಿ ತಮ್ಮ ಬೆಂಬಲಿಗರೊಂದಿಗೆ ಜಂತರ್ ಮಂತರ್‌ಗೆ ಬೆಂಬಲ ಸೂಚಿಸಲು ತೆರಳಿದ್ದರು. ಆದರೆ, ಹಜಾರೆ ಬೆಂಬಲಿಗರು ರಾಜಕಾರಣಿಗಳಿಗೆ ನಿಷೇದ ಹೇರಿದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸಾದರು.