ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2 ಅಂಶ ಬಿಟ್ಟು, ಹಜಾರೆ ಬೇಡಿಕೆಗಳಿಗೆ ಮಣಿದ ಸರಕಾರ (Jan Lokpal Bill | Anna Hazare | Joint Committee | Kapil Sibal)
PTI
ಭ್ರಷ್ಟಾಚಾರದ ವಿರುದ್ಧ, ಲೋಕಪಾಲ ಮಸೂದೆ ಕಟ್ಟುನಿಟ್ಟುಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ದೇಶಾದ್ಯಂತ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಣ್ಣಾ ಹಜಾರೆ ಮತ್ತು ಯುಪಿಎ ಸರಕಾರದ ನಡುವಣ ಸಂಘರ್ಷ ಮೂರನೇ ದಿನವೂ ಅಂತ್ಯ ಕಾಣದೆ, ಲೋಕಪಾಲ ಕಾಯಿದೆಗೆ ಬಲ ತುಂಬುವ ನಿಟ್ಟಿನಲ್ಲಿ ಉಭಯ ಬಣಗಳೂ ಗುರುವಾರ ಒಂದಿಷ್ಟು ಪ್ರಗತಿ ಸಾಧಿಸಿದವು. ಐದರಲ್ಲಿ ಮೂರು ಅಂಶಗಳಿಗೆ ಒಪ್ಪಿರುವ ಸರಕಾರ, ಇನ್ನೆರಡು ಅಂಶಗಳ ಕುರಿತು ಶುಕ್ರವಾರ ಮಾತುಕತೆ ನಡೆಸಲಿದೆ.

ಸರಕಾರದ ಪ್ರತಿನಿಧಿಯಾಗಿ ಕೇಂದ್ರ ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆಯ ಬೆಂಬಲಿಗರಾದ ಸ್ವಾಮಿ ಅಗ್ನಿವೇಶ್ ಮತ್ತು ಅರವಿಂದ ಕೇಜರಿವಾರ್ ಅವರನ್ನು ಗುರುವಾರ ಎರಡು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ ಫಲವಾಗಿ, ಐದು ಅಂಶಗಳಲ್ಲಿ ಮೂರು ಅಂಶಕ್ಕೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಇನ್ನೆರಡು ವಿಷಯಗಳಲ್ಲಿ ಒಮ್ಮತ ಮೂಡಿಲ್ಲ. ಒಮ್ಮತ ಮೂಡದೇ ಇರುವ ವಿಷಯಗಳೆಂದರೆ, ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಲು ರಚಿಸಲಾಗುವ ಸಮಿತಿಗೆ ಮುಖ್ಯಸ್ಥರ ನೇಮಕ ಹಾಗೂ ಜಂಟಿ ಸಮಿತಿಗೆ ಅಧಿಕೃತ ಅಧಿಸೂಚನೆ ಹೊರಡಿಸುವುದು.

ಈ ಸಮಿತಿಯು ಅನೌಪಚಾರಿಕವಾಗಿರಬೇಕು ಎಂದು ಸರಕಾರ ಬಯಸಿದರೆ, ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಬೇಕು ಎಂಬುದು ಹಜಾರೆ ಬೆಂಬಲಿಗರ ಆಗ್ರಹ. ಈ ಸಮಿತಿಗೆ ಹಜಾರೆಯವರನ್ನೇ ಮುಖ್ಯಸ್ಥರನ್ನಾಗಿಸಬೇಕು ಎಂಬುದು ಬೆಂಬಲಿಗರ ವಾದವಾದರೆ, ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಗೆ ಈ ಹೊಣೆ ಹೊರಿಸಬೇಕು ಎಂಬುದು ಸರಕಾರದ ಅಭಿಮತ.

ಇದಕ್ಕೆ ಕಾಲಮಿತಿಯ ಸಂಗತಿಯು ದೊಡ್ಡ ವಿಷಯವೇನಲ್ಲ. ತಕ್ಷಣವೇ ಮಸೂದೆ ರಚನೆಯಾಗುವುದು ನಮಗೂ ಇಷ್ಟವೇ. ಆದರೆ ಅಣ್ಣಾ ಹಜಾರೆ ಸಮಿತಿ ಅಧ್ಯಕ್ಷರಾಗುವುದಕ್ಕೆ ನಾವು ಒಪ್ಪಿಲ್ಲ. ಶುಕ್ರವಾರ ಬೆಳಿಗ್ಗೆ ಮತ್ತೆ ಮಾತುಕತೆ ನಡೆಸುತ್ತೇವೆ. ಎರಡು ವಿಷಯಗಳು ಮಾತ್ರ ಇನ್ನೂ ತೀರ್ಮಾನವಾಗಿಲ್ಲ ಎಂದು ಸಿಬಲ್ ಹೇಳಿದ್ದಾರೆ.

ಸರಕಾರವು 50:50 (ಸರಕಾರ:ಜನಸಾಮಾನ್ಯರು) ಸಮಿತಿಗೆ ಒಪ್ಪಿರುವುದು ಹಜಾರೆ ಹೋರಾಟಕ್ಕೆ ದೊರೆತ ಅತಿದೊಡ್ಡ ಗೆಲುವು ಎಂದು ಸ್ವಾಮಿ ಅಗ್ನಿವೇಶ್ ಹೇಳಿದರು. ಯಾಕೆಂದರೆ, ಇದಕ್ಕೆ ಸರಕಾರ ಇದುವರೆಗೆ ಒಪ್ಪಿರಲಿಲ್ಲ.

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಜಂಟಿ ಕರಡು ಸಮಿತಿಯ ಸಭೆಯನ್ನು ಮೇ 13ರ (ಫಲಿತಾಂಶ ದಿನ) ನಂತರ ಏರ್ಪಡಿಸೋಣ ಎಂದು ಸಿಬಲ್ ಹೇಳಿದ್ದಕ್ಕೂ ನಾವು ಒಪ್ಪಲಿಲ್ಲ. ಅದು ತೀರಾ ವಿಳಂಬವಾಗುತ್ತದೆ ಎಂದು ಹೇಳಿದಾಗ, ಸರಕಾರವು ಮೊದಲೇ ಸಭೆ ಸೇರೋಣ ಎಂಬುದಕ್ಕೆ ಸಮ್ಮತಿ ಸೂಚಿಸಿತು ಎಂದು ಕೇಜರಿವಾಲ್ ಹೇಳಿದರು.

ಕೇವಲ ಘೋಷಣೆ ಮಾಡುವುದು ಕಾನೂನು ಆಗುವುದಿಲ್ಲ ಎಂಬುದು ಸ್ವತಃ ವಕೀಲರಾಗಿರುವ ಕಪಿಲ್ ಸಿಬಲ್‌ಗೆ ಗೊತ್ತಿದೆ. ಇದಕ್ಕಾಗಿಯೇ ನಾವು ಅಧಿಸೂಚನೆ ಹೊರಡಿಸಬೇಕು, ಅಧಿಕೃತವಾಗಿಯೇ ಕಾರ್ಯಾರಂಭಿಸಬೇಕು ಎಂದು ಒತ್ತಾಯಿಸಿರುವುದಾಗಿ ಅವರು ನುಡಿದರು.

ಅಲ್ಲದೆ, ಸಮಿತಿಯ ಅಧ್ಯಕ್ಷರಾಗಲು ಹಜಾರೆ ಅವರೇನೂ ಉಪವಾಸ ಕುಳಿತುಕೊಂಡಿಲ್ಲ. ಆಂದೋಲನದಲ್ಲಿ ಪಾಲ್ಗೊಂಡಿರುವ ಜನತೆಯ ಒತ್ತಾಸೆ ಇದಾಗಿದೆ. ಈ ಸಮಿತಿಗೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಧ್ಯಕ್ಷರಾಗಬೇಕೆಂಬುದು ಹಜಾರೆ ಇರಾದೆ. ಇದನ್ನು ನಾಗರಿಕರಿಗೆ ತಿಳಿಸಿದಾಗ, ಅವರು ಆಕ್ಷೇಪಿಸಿ, ಹಜಾರೆಯವರೇ ಮುಂದಾಳುತ್ವ ವಹಿಸಬೇಕೆಂದು ಪಟ್ಟು ಹಿಡಿದರು. ಒಟ್ಟಿನಲ್ಲಿ ನಮ್ಮ ಬೇಡಿಕೆಗಳಿಗೆ ಸರಕಾರ ಸಮ್ಮತಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಕೇಜರಿವಾಲ್ ತಿಳಿಸಿದರು.
ಇವನ್ನೂ ಓದಿ