ಲೋಕಪಾಲ ಮಸೂದೆಗೆ ಕರಡು ಸಮಿತಿ ರಚನೆ ಕುರಿತು ಅಧಿಕೃತ ಘೋಷಣೆ ಹೊರಡಿಸಬೇಕು ಮತ್ತು ಈ ಜಂಟಿ (ಸರಕಾರ ಹಾಗೂ ನಾಗರಿಕರನ್ನು ಒಳಗೊಂಡ) ಸಮಿತಿಗೆ ಹೊರಗಿನವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಸಾಮಾಜಿಕ ಹೋರಾಟಗಾರ, ಭ್ರಷ್ಟಾಚಾರ ವಿರುದ್ಧ ಸಮರ ಸಾರಿ ನಾಲ್ಕು ದಿನಗಳಿಂದ ಉಪವಾಸ ಕೂತಿರುವ ಅಣ್ಣಾ ಹಜಾರೆ ಬೇಡಿಕೆಯನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತಿರಸ್ಕರಿಸಿರುವುದರೊಂದಿಗೆ, ಏ.13ರಿಂದ ಜೈಲ್ ಭರೋ ನಡೆಸಲು ಹಜಾರೆ ಕರೆ ನೀಡಿದ್ದಾರೆ.
ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ಕಪಿಲ್ ಸಿಬಲ್ ಅವರು ಸರಕಾರದ ನಿರ್ಧಾರವನ್ನು ತಮಗೆ ತಲುಪಿಸಿದ್ದಾರೆ ಎಂದಿರುವ ಪ್ರತಿಭಟನಾಕಾರರು, ಪ್ರಣಬ್ ಮುಖರ್ಜಿಯವರೇ ಈ ಜಂಟಿ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆಂದು ಸರಕಾರ ಪಟ್ಟು ಹಿಡಿಯಿತು ಎಂದು ಹೇಳಿದರು.
ಸರಕಾರದ ನಿಲುವಿನಿಂದ ಅಕ್ರೋಶಿತರಾಗಿರುವ ಅಣ್ಣಾ ಹಜಾರೆ, ಏಪ್ರಿಲ್ 12ರಿಂದ ದೇಶಾದ್ಯಂತ ಜೈಲ್ ಭರೋ ಚಳವಳಿ ನಡೆಸಲು ಕರೆ ನೀಡಿದ್ದಾರೆ. ಸರಕಾರದ ಈ ನಿಲುವಿನ ವಿರುದ್ಧ ಜೈಲ್ ಭರೋ ಚಳವಳಿಯ ಮೂಲಕ ಜನತೆ ಈ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರಣಬ್ ಬೇಡ, ಸಂತೋಷ್ ಹೆಗಡೆ ನೇಮಿಸಿ... ಇದೇ ವೇಳೆ, ಅಣ್ಣಾ ಹಜಾರೆಯವರ ಆಮರಣಾಂತ ಉಪವಾಸ ಸತ್ಯಾಗ್ರಹವು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ತಾನಂತೂ ಈ ಕರಡು ರಚನೆಯ ಜಂಟಿ ಸಮಿಗೆ ಅಧ್ಯಕ್ಷನಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿರುವ ಅವರು, ತಾವು ಉಪವಾಸ ನಡೆಸುತ್ತಿರುವ ಜಂತರ್ ಮಂತರ್ ಬಳಿ ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ತಾನು ಈ ಸಮಿತಿಗೆ ಸಲಹಾಕಾರನಾಗಿ ಮಾತ್ರ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಪ್ರಸ್ತಾಪಿತ ಕರಡು ಸಮಿತಿಯ ಮುಂದಾಳುತ್ವ ವಹಿಸಲು ನ್ಯಾಯಮೂರ್ತಿ ಸಂತೋಷ ಹೆಗಡೆ ಹಾಗೂ ನ್ಯಾಯಮೂರ್ತಿ ಜಿ.ಎಸ್.ವರ್ಮಾ ಅವರ ಹೆಸರನ್ನು ಶಿಫಾರಸು ಮಾಡಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿಯೂ ಹಜಾರೆ ಹೇಳಿದರು. ಸರಕಾರವು ಈಗಾಗಲೇ ಈ ಹೆಸರುಗಳನ್ನು ತಿರಸ್ಕರಿಸಿದ್ದು, ಸರಕಾರದ ಪ್ರತಿನಿಧಿಯೇ, ವಿಶೇಷವಾಗಿ ವಿತ್ತ ಸಚಿವ ಪ್ರಣಬ್ ಮುಖರ್ಜಿಯೇ ಈ ಕರಡು ರಚನಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಪಟ್ಟು ಹಿಡಿದಿದೆ.
ಮಹಾತ್ಮ ಗಾಂಧೀಜಿಯವರೇ ಅಧಿಕಾರದ ವಿಕೇಂದ್ರೀಕರಣವಾಗಬೇಕು ಎಂದು ಹೇಳಿದ್ದಾರೆ. ಹೀಗಾಗಿ ಗಾಂಧಿ ತತ್ವ ಅನುಸರಿಸುತ್ತಿದ್ದಾರೆಂದು ಹೇಳಿಕೊಳ್ಳುತ್ತಿರುವವರ ಆಡಳಿತದಲ್ಲಿರುವ ಕೇಂದ್ರ ಸರಕಾರದ ಅಧಿಕಾರವನ್ನು ಕೂಡ ತಕ್ಷಣವೇ ವಿಕೇಂದ್ರೀಕರಣ ಮಾಡಬೇಕು, ಇದರಿಂದ ಸರಕಾರ ಮಟ್ಟದ ಭ್ರಷ್ಟಾಚಾರವನ್ನು ತಡೆಯಬಹುದಾಗಿದೆ ಎಂದು ಹಜಾರೆ ಹೇಳಿದರು.
ತನ್ನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಮಾಡುತ್ತಿರುವ ತನ್ನ ಉಪವಾಸ ಸತ್ಯಾಗ್ರಹವು ಎರಡನೇ ಸ್ವಾತಂತ್ರ್ಯ ಸಮರವಾಗಿದ್ದು, ಲೋಕಪಾಲ ಮಸೂದೆಯಿಂದ ಅಧಿಕಾರದ ವಿಕೇಂದ್ರೀಕರಣ ಸಾಧ್ಯ ಎಂದರು. ಇದಕ್ಕೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯೇ ಸಾಕ್ಷಿ. ಆರ್‌ಟಿಐಯಿಂದಾಗಿ ಹಲವಾರು ಹಗರಣಗಳು ಹೊರಬಂದಿದ್ದು, ಇದು ಅಧಿಕಾರದ ಹಂಚಿಕೆಗೆ ಕೂಡ ನೆರವಾಗಿದೆ ಎಂದರು.
ಪ್ರಸ್ತುತ ವ್ಯವಸ್ಥೆಯ ವಿರುದ್ಧ ಕಿಡಿ ಕಾರುತ್ತಾ ಅವರು, ಈಗ ಭ್ರಷ್ಟಾಚಾರ ನಿಗ್ರಹಕ್ಕೆ ಇರುವ ಏಜೆನ್ಸಿಗಳೆಲ್ಲವೂ ಸರಕಾರದ ಅಡಿಯಾಳಾಗಿವೆ. ಇದರಿಂದಾಗಿ ತನಿಖೆಗಳಲ್ಲಿ ಎಂದಿಗೂ ಕೂಡ ಧನಾತ್ಮಕ ಫಲಿತಾಂಶ ಬಂದೇ ಇಲ್ಲ ಎಂದರು. ಈ ಎಲ್ಲ ತನಿಖಾ ಏಜೆನ್ಸಿಗಳೂ ಲೋಕಪಾಲರ ಅಡಿಯಲ್ಲಿ ಬರಬೇಕು ಎಂಬುದು ನಮ್ಮ ಆಗ್ರಹ. ಇದು ಭ್ರಷ್ಟರಿಗೆ ನೇರವಾಗಿ ಜೈಲಿನ ದಾರಿ ತೋರಿಸಲು ಸಹಕಾರಿ ಎಂದರು.